ಎಲ್ಲರಿಗೂ ಸಂಗೀತ ಅಭಿರುಚಿ ಅವಶ್ಯಕ

| Published : Sep 28 2024, 01:22 AM IST

ಸಾರಾಂಶ

ಭಾರತದಲ್ಲೇ ಕರ್ನಾಟಕ ಸಂಗೀತ ಹೆಚ್ಚು ಮನಸ್ಸುಗಳನ್ನು ಆಕರ್ಷಿಸಿದೆ

ಕನ್ನಡಪ್ರಭ ವಾರ್ತೆ ಮೈಸೂರು

ಸಂಗೀತ ಒತ್ತಡದ ಬದುಕಿಗೆ ಪರಿಣಾಮಕಾರಿಯಾದ ಚಿಕಿತ್ಸಾ ಗುಣವುಳ್ಳ ಕಲೆಯಾಗಿದ್ದು, ಎಲ್ಲರಿಗೂ ಸಂಗೀತ ಅಭಿರುಚಿ ಅವಶ್ಯಕ ಎಂದು ಸಂಸ್ಕೃತಿ ಚಿಂತಕ ದಿವಾಕರ ಕೆರಹೊಂಡ ತಿಳಿಸಿದರು.

ನಗರದ ಎಂಎಂಕೆ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಲಕ್ಷ್ಮಿ ನಾಗರಾಜು ದತ್ತಿ ಸ್ಮಾರಕ ಅಂತರ ಕಾಲೇಜು ಕರ್ನಾಟಕ ಸಂಗೀತ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಗೀತವು ನಮ್ಮ ಭಾರತೀಯ ಮೂಲ ಕಲೆ. ಭಾರತದಲ್ಲೇ ಕರ್ನಾಟಕ ಸಂಗೀತ ಹೆಚ್ಚು ಮನಸ್ಸುಗಳನ್ನು ಆಕರ್ಷಿಸಿದೆ ಎಂದು ಹೇಳಿದರು.

ಸತತ ಪರಿಶ್ರಮ, ಶ್ರದ್ಧೆ ಆಸಕ್ತಿಯಿಂದ‌ ಸಂಗೀತದ ಅಭ್ಯಾಸ ಮಾಡಿದಾಗ ಸಂಗೀತವು ಒಲಿಯುತ್ತದೆ. ಇಂದಿನ ಯುವ ಜನಾಂಗ ಪಾಶ್ಚಿಮಾತ್ಯ ಸಂಗೀತಕ್ಕೆ ಮಾರು ಹೋಗದೆ, ಈ ನೆಲದ ಸಂಸ್ಕೃತಿಯನ್ನು ಬಿಂಬಿಸುವ ಕರ್ನಾಟಕ ಸಂಗೀತದ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಕಾಲೇಜಿನ ಪ್ರಾಂಶುಪಾಲೆ ಪ್ರೊ‌.ಎನ್. ಭಾರತಿ ಅಧ್ಯಕ್ಷತ ವಹಿಸಿ ಮಾತನಾಡಿ, ವೇದಗಳಲ್ಲಿ ಸಾಮ ವೇದವೇ ಸಂಗೀತ ಪ್ರಧಾನವಾದದ್ದು. ಸಂಗೀತದ ಕಲಿಕೆಯಿಂದ ವಿದ್ಯಾರ್ಥಿಗಳಲ್ಲಿ ಸಂಯಮ ರೂಢಿಗತಗೊಂಡು ಜೀವನದ ಹಲವು ಒತ್ತಡಗಳನ್ನು ನಿವಾರಿಸಿಕೊಳ್ಳಲು ಸಾಧ್ಯವಾಗುತ್ತದೆ. ಪೋಷಕರು ತಮ್ಮ ಮಕ್ಕಳಿಗೆ ಸಂಗೀತ ಕಲಿಕೆಗೆ ಮಹತ್ವ ನೀಡಿ, ಅವರ ಮನಸ್ಸು ಪ್ರಫುಲತೆಯಿಂದ ಇರುವಂತೆ ಮಾಡಲು ಪ್ರಯತ್ನಸಬೇಕು ಎಂದು ತಿಳಿಸಿದರು.

ಈ ಸ್ಪರ್ಧೆಯಲ್ಲಿ ಶ್ರೇಯಾ ಶ್ರೀಧರ್(ಪ್ರಥಮ), ಅಧಿತಿ(ದ್ವಿತೀಯ), ವಂದಿತಾ(ತೃತೀಯ), ಅನಿಷಾ(ನಾಲ್ಕನೇ) ಹಾಗೂ ರಿಷಭ್ (ಐದನೇ) ಬಹುಮಾನ ಪಡೆದರು.

ಪ್ರಯೋಜಕರಾದ ನಳಿನಿ ಶ್ರೀಕಂಠ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ನಯನಕುಮಾರಿ, ಐಕ್ಯೂಎಸಿ ಸಂಚಾಲಕಿ ಕೆ.ಎಸ್. ಸುಕೃತ, ಡಾ. ವಿನೋದ, ಎಂ.ಪಿ. ನಯನ, ಶ್ವೇತಾ ಸುಪ್ರದ, ಅಭಿಲಾಷ್, ಶೋಭನಾ, ಸುಷ್ಮಾ ಇದ್ದರು.