ಪುನರ್ಜನ್ಮವಿದ್ರೆ ಪುತ್ರಿ ಹೊಟ್ಟೇಲಿ ಹುಟ್ಟುವೆ: ವಿನಯ್‌ ಪತ್ರ

| Published : Apr 07 2025, 12:36 AM IST

ಪುನರ್ಜನ್ಮವಿದ್ರೆ ಪುತ್ರಿ ಹೊಟ್ಟೇಲಿ ಹುಟ್ಟುವೆ: ವಿನಯ್‌ ಪತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡಗು ಜಿಲ್ಲೆ ಬಿಜೆಪಿ ಕಾರ್ಯಕರ್ತ ವಿನಯ್‌ ಸೋಮಯ್ಯ ಆತ್ಮಹತ್ಯೆಗೂ ಮುನ್ನ ತಮ್ಮ ಪತ್ನಿ ಶೋಭಿತಾಗೆ ಬರೆದಿದ್ದಾರೆ ಎನ್ನಲಾದ ಭಾವುಕ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೊಡಗು ಜಿಲ್ಲೆ ಬಿಜೆಪಿ ಕಾರ್ಯಕರ್ತ ವಿನಯ್‌ ಸೋಮಯ್ಯ ಆತ್ಮಹತ್ಯೆಗೂ ಮುನ್ನ ತಮ್ಮ ಪತ್ನಿ ಶೋಭಿತಾಗೆ ಬರೆದಿದ್ದಾರೆ ಎನ್ನಲಾದ ಭಾವುಕ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವಿನಯ್‌ ಸೋಮಯ್ಯ ಆತ್ಮಹತ್ಯೆಗೂ ಮುನ್ನ ಸುದೀರ್ಘ ಡೆತ್‌ ನೋಟ್‌ ಹಾಗೂ ತಮ್ಮ ಪತ್ನಿ ಶೋಭಿತಾ ಹಾಗೂ ಪುತ್ರಿ ಸಾಧ್ವಿ ಕುರಿತು ಬರೆದಿದ್ದ ಪತ್ರವನ್ನು ಸುಶಾಂತ್‌ ಎಂಬುವವರಿಗೆ ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದ್ದರು ಎನ್ನಲಾಗಿದೆ. ಸದ್ಯ ಆ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಪತ್ರದಲ್ಲಿ ಏನಿದೆ?: ಸುಶಾಂತ್‌ ಈ ಮೆಸೇಜನ್ನು ಶೋಭಿಗೆ ಫಾರ್ವರ್ಡ್‌ ಮಾಡಬೇಡ. ನೀನೇ ಆಕೆಯ ಬಳಿ ಹೋಗಿ ತೋರಿಸು. ಅವಳು ಈ ಮೆಸೇಜ್‌ ಓದುವಾಗ ನಾನು ಈ ಲೋಕದಲ್ಲಿ ಇರುವುದಿಲ್ಲ. ಸಾರಿ ಸುಶಾಂತ್‌, ನನ್ನ ಮಗಳು ಸಾಧ್ವಿಯನ್ನು ಚೆನ್ನಾಗಿ ನೋಡಿಕೋ. ನೀನು ಇನ್ನು ಮುಂದೆ ಬೇರೆ ರೂಮ್‌ನಲ್ಲಿರುವುದು ಬೇಡ, ಶೋಭಿ ಜೊತೆಗೆ ಇರು. ಸಾಧ್ವಿಗೆ ಹೆಲ್ಪ್‌ ಆಗುತ್ತೆ. ಪ್ಲೀಸ್‌ ಬೆಳಗ್ಗೆ ಹೋಗಿ ಸಾಧ್ವಿಯ ಬಟ್ಟೆ ನೀನೇ ಪ್ಯಾಕ್‌ ಮಾಡು. ಕಾರಿನ ದಾಖಲೆಗಳನ್ನು ನನ್ನ ಆಫೀಸ್‌ ಕಲೀಗ್‌ ರಂಜಿತ್‌ನ ಕೇಳು. ಶೋಭಿ ಅಥವಾ ನಿನ್ನ ಹೆಸರಿಗೆ ಅದನ್ನು ವರ್ಗಾವಣೆ ಮಾಡಿಕೋ. ಬೈಕ್‌ನ ಕೀ ಕಳೆದು ಹೋಗಿದ್ದು, ಯಾವುದಾದರೂ ಮೆಕ್ಯಾನಿಕ್‌ನ ಕರೆಸಿ ಸರಿ ಮಾಡಿಸಿ ಅಣ್ಣನ ಕೈಗೆ ಕೊಟ್ಟುಬಿಡು. ಪ್ಲೀಸ್‌ ಸುಶಾಂತ್‌, ಸಾಧ್ಯವಾದರೆ ಕ್ಷಮಿಸಿ ಬಿಡು''''.

ಮನಸು ಕಂಟ್ರೋಲ್‌ಗೆ ಬರುತ್ತಿಲ್ಲ:

ಮುಂದುವರೆದು, ಹಾಯ್‌ ಶೋಭಿ, ನಾನು ಈ ಲೆಟರ್‌ನ ಸುಶಾಂತ್‌ಗೆ ಕಳುಹಿಸಿದ್ದು ಏಕೆಂದರೆ ನಿನ್ನ ಸಂಭಾಳಿಸುವವರು ಯಾರೂ ಇರುವುದಿಲ್ಲ. ಸಾರಿ, ಇದು ಕ್ಷಮಿಸುವ ತಪ್ಪಲ್ಲ ಎಂದು ನನಗೆ ಗೊತ್ತು. ಎರಡು ತಿಂಗಳಿಂದ ನನ್ನ ಮನಸು ಕಂಟ್ರೋಲ್‌ಗೆ ಬರುತ್ತಿಲ್ಲ. ನನ್ನ ಮುಖದಲ್ಲಿ ನಗುವಿದ್ದರೂ ಅದು ಆರ್ಟಿಫಿಶಿಯಲ್‌. ನನ್ನ ಮೇಲೆ ಹಾಕಿದ ಎಫ್‌ಐಆರ್‌ನಿಂದ ನಿನಗೆ ಹಾಗೂ ಚಾಚಾಗೆ ಎಷ್ಟು ಬೇಜಾರಾಗಿದೆ ಎಂದು ಅಂತ ಗೊತ್ತಿದೆ.

ಮರೆಯಲು ಆಗುತ್ತಿಲ್ಲ: ಅವರು ಇನ್ನೂ ನಮ್ಮ ಫೋಟೋಗಳನ್ನು ಗ್ರೂಪ್‌ಗಳಲ್ಲಿ ಕಿಡಿಗೇಡಿಗಳು ಅಂತ ಹಾಕುತ್ತಿದ್ದಾರೆ. ಹಾಗೆ ನಮ್ಮ ಮೇಲೆ ರೌಡಿಶೀಟರ್‌ ಹಾಕಲು ಪ್ರಯತ್ನಿಸುತ್ತಿದ್ದಾರೆ. ಕಳೆದ ವಾರ ಮಡಿಕೇರಿ ಪೊಲೀಸರು ಕರೆ ಮಾಡಿ, ತಹಶೀಲ್ದಾರ್‌ ಮುಂದೆ ಬಂದು ಸಹಿ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ. ನಾನು ಎಷ್ಟು ಮರೆಯಲು ಪ್ರಯತ್ನಪಟ್ಟರೂ ಮತ್ತೆ ಅದನ್ನು ನೆನಪಿಸುತ್ತಿದ್ದಾರೆ. ರಿಯಲಿ ವೆರಿ ಸಾರಿ ಮಾ.

ನಿನ್ನ ಪಡೆಯಲು ಪುಣ್ಯ ಮಾಡಿದ್ದೆ:

ಜಾಮೀನು ಸಿಕ್ಕ ಮಾರನೇ ದಿನ ಪೊಲೀಸರು ರಂಜಿತ್‌ ಮನೆಗೆ ತೆರಳಿ ನನ್ನ ಮನೆ ವಿಳಾಸ ಕೇಳಿದ್ದಾರೆ. ಅದೂ ಜಾಮೀನು ಸಿಕ್ಕಿದ ನಂತರ. ಎಷ್ಟೆಲ್ಲ ಮೆಂಟಲ್‌ ಟಾರ್ಚರ್‌ ಕೊಟ್ಟಿದ್ದಾರೆ ಮಾ. ಹೇಳಕೊಳ್ಳಲು ಆಗುತ್ತಿಲ್ಲ. ನಿನ್ನ ನಾನು ಪಡೆಯಲು ಪುಣ್ಯ ಮಾಡಿದ್ದೆ. ನನ್ನ ಎಲ್ಲ ಕಷ್ಟದ ಸಮಯಗಳಲ್ಲೂ ನೀನು ನನ್ನ ಬೆಂಬಲಕ್ಕಿದ್ದೆ. ಥ್ಯಾಂಕ್ಯೂ. ಸಾಧ್ವಿ ಇನ್ನು ಒಂದು ವಾರ ಕೇಳಬಹುದು. ನಂತರ ಸರಿ ಆಗುತ್ತೆ ಬಿಡು. ಅವಳಿಗೆ ಅಪ್ಪ ದೂರ ಹೋಗಿದ್ದಾರೆ ಎಂದು ಹೇಳು. ಅವಳಿಗೆ ನೀನಿದ್ದರೆ ಸಾಕು. ನೀನೇ ಅವಳ ಪ್ರಪಂಚ. ಅವಳು ದೊಡ್ಡವಳಾದ ಮೇಲೆ ಹೇಳು, ಅಪ್ಪ ನಿನ್ನನ್ನು ತುಂಬಾ ಇಷ್ಟಪಡುತ್ತಿದ್ದರು ಅಂತ.

ನನ್ನಿಂದ 2 ಕುಟುಂಬದ ಮರ್ಯಾದೆ ಹೋಯ್ತು:

ಏನೇನೋ ಆಸೆ ಇತ್ತು ಕಣೆ. ಒಳ್ಳೆ ಕೆಲಸಕ್ಕೆ ಸೇರಬೇಕು. ಫ್ಲ್ಯಾಟ್‌ ತೆಗೆದುಕೊಳ್ಳಬೇಕು. ಅಲ್ಲಿ ನಾವು ಜೀವನ ನಡೆಸಬೇಕು ಅಂತ. ಆದರೆ, ನನ್ನ ಮನಸ್ಸಿನಿಂದ ಆ ಎಫ್‌ಐಆರ್‌ ಘಟನೆ ವಿಚಾರ ಹೋಗುತ್ತಿಲ್ಲ. ನನ್ನಿಂದ ನಿಮ್ಮ ಹಾಗೂ ನನ್ನ ಕುಟುಂಬದ ಮರ್ಯಾದೆ ಹೋಯ್ತು. ನಾನಿಲ್ಲ ಎಂದು ನನ್ನ ಮನೆಯವರನ್ನು ಬಿಟ್ಟು ಹೋಗಬೇಡ. ನಮ್ಮ ಮನೆಯಲ್ಲಿ ಎಲ್ಲರೂ ನಿನ್ನನ್ನು ತುಂಬಾ ಇಷ್ಟಪಡುತ್ತಾರೆ. ಅದು ನಿನಗೂ ಗೊತ್ತು. ನೀನು ಈಗ ನನ್ನ ಕುಟುಂಬದ ಜತೆಗೆ ಹೇಗಿದ್ದಿಯೋ ಮುಂದೆಯೂ ಹಾಗೆ ಇರು. ಆವಾಗವಾಗ ನಮ್ಮ ಮನೆಗೆ ಹೋಗುತ್ತಿರು.

ಪುನರ್ಜನ್ಮ ಇದ್ದರೆ ಮಗಳ ಹೊಟ್ಟೇಲಿ ಹುಟ್ಟುವೆ:

ನಿನಗೆ ಏನೇ ಕಷ್ಟ ಇದ್ದರೂ ನಂದ ಅಣ್ಣನ ಕೇಳು. ಅವನು ನನ್ನ ಡ್ಯಾಡಿ ಇದ್ದಂಗೆ. ಅಮ್ಮ, ಮಂಜು, ಕಂದ ಎಲ್ಲರೂ ನಿನ್ನ ತುಂಬಾ ಇಷ್ಟಪಡುತ್ತಾರೆ. ಪುನರ್ಜನ್ಮ ಅಂತ ಇದ್ದರೆ ಸಾಧ್ವಿ ಹೊಟ್ಟೇಲಿ ಹುಟ್ಟುತ್ತೇನೆ. ಅಲ್ಲಿಯವರೆಗೂ ನನಗೆ ಪುನರ್ಜನ್ಮ ಬೇಡ ಅಂತ ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ. ನನ್ನ ಜಾಸ್ತಿ ನೆನಪಿಸಿಕೊಳ್ಳಬೇಡ. ಲವ್‌ ಯೂ ಶೋಭಿ ಎನ್ನುವಲ್ಲಿಗೆ ಭಾವುಕ ಪತ್ರ ಕೊನೆಯಾಗಿದೆ.