ಸಾರಾಂಶ
ಐತಿಹಾಸಿಕ ನೂರಂಬಾಡ ಕೋಲ್ ಮಂದ್‌ನಲ್ಲಿ ಹುತ್ತರಿ ಕೋಲಾಟಕ್ಕೂ ಮುನ್ನ ಮೆರವಣಿಗೆ ನಡೆಯಿತು.
ದುಗ್ಗಳ ಸದಾನಂದ ಕನ್ನಡಪ್ರಭ ವಾರ್ತೆ ನಾಪೋಕ್ಲು
‘ಇಗ್ಗುತ್ತಪ್ಪ ದೇವಡ ಪುತ್ತರಿ ನಮ್ಮೆ ಪೊಯಿಲೆ ಪೊಯಿಲೆ’.... ಘೋಷಣೆಯೊಂದಿಗೆ ನಾಪೋಕ್ಲು ಬಿದ್ದಾಟಂಡ ವಾಡೆಯ ನೂರಂಬಾಡ ನಾಡ್ ಮಂದ್‌ನಲ್ಲಿ ಗ್ರಾಮಸ್ಥರ ಹಾಗೂ ಸಾರ್ವಜನಿಕರೆಲ್ಲರ ಸಮಾಗಮದೊಂದಿಗೆ ಮಂಗಳವಾರ ಸಾಂಪ್ರದಾಯಿಕ ಧಾನ್ಯಲಕ್ಷ್ಮಿ ಬರಮಾಡಿಕೊಳ್ಳುವ ಹಬ್ಬ ಸಂಭ್ರಮವನ್ನು ಹೆಚ್ಚಿಸಿತು.ನಾಪೋಕ್ಲು, ಬೇತು ಮತ್ತು ಕೋಕೇರಿ ಗ್ರಾಮಗಳನ್ನು ಒಳಗೊಂಡ೦ತೆ ನಡೆಯುವ ಐತಿಹಾಸಿಕ ನೂರಂಬಾಡ ಕೋಲ್ ಮಂದ್‌ನಲ್ಲಿ ಪುತ್ತರಿ (ಹುತ್ತರಿ) ಕೋಲಾಟಕ್ಕೂ ಮುನ್ನ ಮೆರವಣಿಗೆ ನಡೆಯಿತು. ಬೇತು ಗ್ರಾಮದ ಶ್ರೀ ಮಕ್ಕಿ ಶಾಸ್ತಾವು ದೇವಾಲಯದಿಂದ ಸಂಪ್ರದಾಯದ೦ತೆ ತಕ್ಕ ಮುಖ್ಯಸ್ಥರು ದೇವರ ತಿರುವಾಭರಣದೊಂದಿಗೆ ಕಾಪಾಳ ಕಳಿ ವೇಷಧಾರಿಗಳು ಮತ್ತು ಕೊಂಬು ಕೊಟ್ಟ್ ವಾಲಗದೊಂದಿಗೆ ಮಂಗಳವಾರ ಬೆಳಗ್ಗೆ ಮೆರವಣಿಗೆಯ ಮೂಲಕ ನೂರಂಬಾಡ ನಾಡ್ ಮಂದ್‌ನತ್ತ ಹೆಜ್ಜೆ ಹಾಕಿದರು.
ಮೆರವಣಿಗೆಯ ನಡುವೆ ಕುರುಂಬರಾಟ್ ಬನದಲ್ಲಿ ಮಧ್ಯಾಹ್ನ ವಿಶ್ರಾಂತಿ ಪಡೆದು ಬಳಿಕ ನೂರಂಬಾಡ ಮಂದ್‌ಗೆ ತಿರುವಾಭರಣದೊಂದಿಗೆ ಆಗಮಿಸಿದ ಗ್ರಾಮದ ತಕ್ಕಮುಖ್ಯಸ್ಥರನ್ನು ಬಿದ್ದಾಟಂಡ ಕುಟುಂಬದ ತಕ್ಕಮುಖ್ಯಸ್ಥರು ಶ್ರೀ ಮಹದೇವರ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಸ್ವಾಗತಿಸಿದರು. ನಂತರ ಕೋಲಾಟ ನಡೆಸುವ ಮಂದಿನಲ್ಲಿರುವ ಮರದ ಕೆಳಗೆ ದೇವರ ತಿರುವಾಭರಣ ಇಟ್ಟು ಪ್ರಾರ್ಥನೆ ಸಲ್ಲಿಸಲಾಯಿತು.ಬಳಿಕ ನಾಪೋಕ್ಲು ಗ್ರಾಮದವರು, ಕೊಳಕೇರಿಯ ಗ್ರಾಮಸ್ಥರು ದುಡಿಕೊಟ್ಟ್ ಪಾಟ್ ಆಗಿ ನಾಡ್ ಮಂದ್‌ಗೆ ಬರುತ್ತಿದ್ದಂತೆ ಅವರನ್ನು ಬಿದ್ದಾಟಂಡ ವಾಡೆ ನಾಡ್ ಮಂದ್‌ಗೆ ಬರಮಾಡಿಕೊಳ್ಳಲಾಯಿತು.
ನಂತರ ಸಾಂಪ್ರದಾಯಿಕ ಹುತ್ತರಿ ಕೋಲಾಟಕ್ಕೆ ಚಾಲನೆ ನೀಡಲಾಯಿತು. ಬಿದ್ದಾಟಂಡ ವಾಡೆ ನಾಡ್ ಮಂದ್‌ನಲ್ಲಿ ಮೂರು ಗ್ರಾಮದ ತಕ್ಕಮುಖ್ಯಸ್ಥರು ಗ್ರಾಮಸ್ಥರು ಸೇರಿ ಕೋಲಾಟದಲ್ಲಿ ಪಾಲ್ಗೊಂಡು ಮೇದರ ಕೊಂಬು ಕೊಟ್ಟು ನಾದಕ್ಕೆ ತಕ್ಕಂತೆ ಮಂದ್‌ಗೆ ಪ್ರದಕ್ಷಿಣೆ ಬರುವುದರೊಂದಿಗೆ ಲಾಲಿತ್ಯ ಪೂರ್ಣವಾಗಿ ವಾಲಗಕ್ಕೆ ಲಯಬದ್ಧವಾಗಿ ಹೆಜ್ಜೆ ಹಾಕಿ ಕೋಲು ಬಡಿಯುತ್ತಾ. ‘ಇಗ್ಗುತ್ತಪ್ಪ ದೇವಡ ಪುತ್ತರಿ ನಮ್ಮೆ ಪೊಯಿಲೆ ಪೊಯಿಲೆ’.... ಬಪ್ಪಕ ಪುತ್ತರಿ ಬಣ್ಣಾತೆ ಬಾತ್ - ಪೋಯಿಲೇ, ಪೋಯಿಲೇ. ಪೋಪಕ ಪುತ್ತರಿ ಏಣ್ಣಾತೇ ಪೋಚಿ- - ಪೋಯಿಲೇ, ಪೋಯಿಲೇ..’ ಎಂಬ ಘೋಷಣೆಯೊಂದಿಗೆ ಹೆಜ್ಜೆ ಹಾಕಿದರು.ಇಂದು ಹಬ್ಬಕ್ಕೆ ತೆರೆ: ಬುಧವಾರ ಮೂರು ಗ್ರಾಮಸ್ಥರು ಸೇರಿ ಚಿಕ್ಕ ಕೋಲಾಟ ನಡೆಸಿ ನಂತರ ಕೋಲನ್ನು ಮಕ್ಕಿ ದೇವಾಲಯಕ್ಕೆ ಒಪ್ಪಿಸುವ ಮೂಲಕ ಹುತ್ತರಿ ಹಬ್ಬಕ್ಕೆ ತೆರೆ ಎಳೆಯುತ್ತಾರೆ.
ಕಾಪಳಕಳಿ: ಪುತ್ತರಿ ಕೋಲಾಟದ ಹಬ್ಬದಲ್ಲಿ ಕಾಪಳಕಳಿಗೆ ಹೆಚ್ಚು ಮಹತ್ವ ಇದೆ. ಬೇತು ಗ್ರಾಮದ ಮಕ್ಕಿ ದೇವಾಲಯಕ್ಕೆ ಅಡಗಿದ ಕೆಂಬಟ್ಟಿ ಜನಾಂಗದವರು ಕಾಪಳ ವೇಷವನ್ನು ಧರಿಸುತ್ತಾರೆ. ಮೈಗೆ ಕಪ್ಪು ಬಣ್ಣದ ಮಸಿಯನ್ನು ಬಳಿದು ಕೈಯಲ್ಲಿ ಅಂಗರೇ (ತುರಿಕೆ ಸೊಪ್ಪು) ಕೋಲು ಹಿಡಿದು ವಾದ್ಯಕ್ಕೆ ತಂಕ್ಕಂತೆ ಕುಣಿಯುತ್ತಾರೆ. ಈ ವೇಷ ಎರಡು ಮೂರು ದಿನಗಳ ಕಾಲ ಇದ್ದು ಸಾಂಪ್ರದಾಯಿಕವಾಗಿ ನಡೆದು ಬಂದಿರುತ್ತದೆ. ಕೋಲಾಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೆರಗು ನೀಡಿದರು.