ದಾವಣಗೆರೇಲಿ ಬೈಕ್ ವ್ಹೀಲಿಂಗ್: ಇಬ್ಬರ ಬಂಧನ

| Published : Jan 23 2025, 12:49 AM IST

ದಾವಣಗೆರೇಲಿ ಬೈಕ್ ವ್ಹೀಲಿಂಗ್: ಇಬ್ಬರ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಹೆದ್ದಾರಿ48ರಲ್ಲಿ ಹೆಲ್ಮೆಟ್ ಧರಿಸದೇ, ಒಂದೇ ಬೈಕ್‌ನಲ್ಲಿ ಮೂವರು ಕುಳಿತು ಸಂಚರಿಸುತ್ತಿದ್ದರು. ಮತ್ತಿಬ್ಬರು ಬೈಕ್‌ನಲ್ಲಿ ಅಪಾಯಕಾರಿಯಾಗಿ ವ್ಹೀಲಿಂಗ್ ಮಾಡುತ್ತಾ, ಪುಂಡಾಟ ಮೆರೆಯುತ್ತಿದ್ದ ಇಬ್ಬರು ಕಿಡಿಗೇಡಿಗಳನ್ನು ದಕ್ಷಿಣ ಸಂಚಾರಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿ, 2 ದ್ವಿಚಕ್ರ ವಾಹನ ಜಪ್ತಿ ಮಾಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಘಟನೆ । ರಸೂಲ್‌-ಹಜರತ್ ಅಲಿ ಸೆರೆ । ಮೂವರಿಗೆ ಶೋಧ

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಹೆಲ್ಮೆಟ್ ಧರಿಸದೇ, ಒಂದೇ ಬೈಕ್‌ನಲ್ಲಿ ಮೂವರು ಕುಳಿತು ಸಂಚರಿಸುತ್ತಿದ್ದರು. ಮತ್ತಿಬ್ಬರು ಬೈಕ್‌ನಲ್ಲಿ ಅಪಾಯಕಾರಿಯಾಗಿ ವ್ಹೀಲಿಂಗ್ ಮಾಡುತ್ತಾ, ಪುಂಡಾಟ ಮೆರೆಯುತ್ತಿದ್ದ ಇಬ್ಬರು ಕಿಡಿಗೇಡಿಗಳನ್ನು ದಕ್ಷಿಣ ಸಂಚಾರಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿ, 2 ದ್ವಿಚಕ್ರ ವಾಹನ ಜಪ್ತಿ ಮಾಡಿದ್ದಾರೆ.

ಚಿತ್ರದುರ್ಗ ಜಿಲ್ಲೆ ಭರಮಸಾಗರದ ವಾಸಿ ರಸೂಲ್ ಹಾಗೂ ದಾವಣಗೆರೆ ರಾಮ ನಗರದ ಎಸ್‌ಓಜಿ ಕಾಲನಿ ನಿವಾಸಿ ಹಜರತ್ ಅಲಿ ಬಂಧಿತ ಆರೋಪಿಗಳು. ಈಚೆಗೆ ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂಧಿತ ಆರೋಪಿಗಳು ಸೇರಿದಂತೆ ಐವರು 2 ದ್ವಿಚಕ್ರ ವಾಹನಗಳಲ್ಲಿ ಹೆಲ್ಮೆಟ್ ಧರಿಸದೇ, ಒಂದೇ ಬೈಕ್‌ನಲ್ಲಿ ಮೂವರು ಸಂಚರಿಸುತ್ತಾ, ಮತ್ತಿಬ್ಬರು ಸ್ಕೂಟರ್‌ನಲ್ಲಿ ಅಪಾಯಕಾರಿಯಾಗಿ ವ್ಹೀಲಿಂಗ್ ಮಾಡುತ್ತಿದ್ದ ಘಟನೆಯನ್ನು ವಾಹನ ಚಾಲಕರೊಬ್ಬರು ತಮ್ಮ ಮೊಬೈಲ್‌ನಲ್ಲಿ ವ್ಹೀಲಿಂಗ್ ಮಾಡಿ, ಪುಂಡಾಟ ಮೆರೆದಿದ್ದ ಘಟನೆಯನ್ನು ಚಿತ್ರೀಕರಿಸಿದ್ದರು.

ಇಬ್ಬರು ಸ್ಕೂಟರ್‌ನಲ್ಲಿ ವ್ಹೀಲಿಂಗ್ ಮಾಡುತ್ತಿದ್ದ, ಮೂವರು ಅದನ್ನು ಚಿತ್ರೀಕರಿಸುತ್ತ ಹೆದ್ದಾರಿಯಲ್ಲಿ ಸಾಗುತ್ತಿದ್ದರು. ಇದರಿಂದ ಇತರೆ ವಾಹನಗಳ ಸಂಚಾರಕ್ಕೆ ತೊಂದರೆ ಮಾಡುತ್ತಾ, ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್‌, ಎಎಸ್ಪಿಗಳಾದ ವಿಜಯಕುಮಾರ ಎಂ.ಸಂತೋಷ, ಜಿ.ಮಂಜುನಾಥ, ಡಿವೈಎಸ್ಪಿ ಶರಣ ಬಸವೇಶ್ವರ ಭೀಮರಾವ್‌, ಸಂಚಾರಿ ಠಾಣೆ ಇನ್ಸಪೆಕ್ಟರ್ ಮಾರ್ಗದರ್ಶನದಲ್ಲಿ ಪಿಎಸ್ಐ ಶೈಲಜಾ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.

ಪಿಎಸ್ಐ ನಿರ್ಮಲಾ, ಎಎಸ್ಐ ಅಣ್ಣಯ್ಯ, ಸಿಬ್ಬಂದಿಯಾದ ಕೆ.ನಾಗರಾಜ, ಪ್ರವೀಣಕುಮಾರ, ರವಿನಾಯ್ಕ, ಶಿವಮೂರ್ತಿ ನಾಯ್ಕರನ್ನು ಒಳಗೊಂಡ ತಂಡವು ವಿಶೇಷ ಕಾರ್ಯಾಚರಣೆ ನಡೆಸಿ, ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಬೈಕ್ ವ್ಹೀಲಿಂಗ್ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಾದ ರಸೂಲ್‌, ಹಜರತ್ ಅಲಿ ಎಂಬ ಇಬ್ಬರನ್ನು ಬಂಧಿಸಿ, 2 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಬೈಕ್‌ನಲ್ಲಿ ತ್ರಿಬಲ್ ರೈಡಿಂಗ್ ಮಾಡುತ್ತಿದ್ದವರ ಮೇಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗೆ ಶೋಧ ನಡೆದಿದೆ.

ರಸ್ತೆಗಳಲ್ಲಿ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗುವಂತೆ ಬೈಕ್ ವ್ಹೀಲಿಂಗ್ ಮಾಡುವುದು ಸಂಚಾರ ನಿಯಮಗಳ ಉಲ್ಲಂಘನೆಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಬೈಕ್ ವ್ಹೀಲಿಂಗ್ ಮಾಡುವುದು ಹಾಗೂ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವುದು ಕಂಡು ಬಂದರೆ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ಇಲಾಖೆ ಪುನಃ ಎಚ್ಚರಿಸಿದೆ.