ದಾವಣಗೆರೆ ವೈದ್ಯರ ಮುಷ್ಕರ, ಒಪಿಡಿ ಸೇವೆ ಬಂದ್‌

| Published : Aug 28 2024, 12:55 AM IST

ಸಾರಾಂಶ

ಕರ್ತವ್ಯನಿರತ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಮಂಗಳವಾರ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಒಪಿಡಿ ಸೇವೆ ಬಂದ್ ಮಾಡಿ, ದಾವಣಗೆರೆಯಲ್ಲಿ ಪ್ರತಿಭಟಿಸಿದ್ದಾರೆ.

- ಮಗುವಿನ ಸಾವಿನ ಹಿನ್ನೆಲೆ ವೈದ್ಯರಿಗೆ ಅವಾಚ್ಯವಾಗಿ ನಿಂದಿಸಿ, ಹಲ್ಲೆ ಆರೋಪ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಕರ್ತವ್ಯನಿರತ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಮಂಗಳವಾರ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಒಪಿಡಿ ಸೇವೆ ಬಂದ್ ಮಾಡಿ, ಪ್ರತಿಭಟಿಸಿದರು.

ನಗರದ ಬಾಪೂಜಿ ಆಸ್ಪತ್ರೆಯಲ್ಲಿ ತಮ್ಮ ಮಗು ಸಾವನ್ನಪ್ಪಿದ್ದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ‍ವೆಂದು ಮೃತ ಮಗುವಿನ ತಂದೆ ಮಂಜುನಾಥ ಎಂಬವರು ವೈದ್ಯರಾದ ಡಾ.ಸನ್ನಿಧಿ ನಾಯಕ್‌, ಡಾ.ಅಂಕುಶ್‌, ಡಾ.ನಿಶಾಂತ್‌ ಅವರನ್ನು ಅವಾಚ್ಯವಾಗಿ ನಿಂದಿಸಿ, ಹಲ್ಲೆ ಮಾಡಿದ್ದಾ. ಇದು ಖಂಡನೀಯ ಎಂದು ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಮಂಜುನಾಥ ಎಂಬವರ ವರ್ತನೆ ವಿರುದ್ಧ ಡಾ.ಸನ್ನಿಧಿ ನಾಯಕ್ ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ವೈದ್ಯರ ದೂರಿನ ಹಿನ್ನೆಲೆ ಬಡಾವಣೆ ಪೊಲೀಸರು ಆರೋಪಿ ಮಂಜುನಾಥ ಅವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆಂಬ ಮಾಹಿತಿ ಇದೆ. ದಾವಣಗೆರೆಯಲ್ಲೂ ಕರ್ತವ್ಯನಿರತ ವೈದ್ಯರು, ವೈದ್ಯಕೀಯ ಸಿಬ್ಬಂದಿಗೆ ರಕ್ಷಣೆಯೇ ಇಲ್ಲದಂತಾಗಿದೆ ಎಂದರು.

ಈಚೆಗೆ ಎಲ್ಲೆಡೆ ವೈದ್ಯರು, ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆಗಳು ನಡೆಯುತ್ತಿವೆ. ಇದರಿಂದಾಗಿ ರೋಗಿಗಳಿಗೆ ಉತ್ತಮ ಸೇವೆ ನೀಡಲು ಭಯಪಡುವಂತಾಗಿದೆ. ವೈದ್ಯರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಪ್ರತಿಭಟನಾನಿರತ ವೈದ್ಯರು ಫಲಕ ಹಿಡಿದು, ಘೋಷಣೆಗಳನ್ನು ಕೂಗುವ ಮೂಲಕ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ವೈದ್ಯರ ಪ್ರತಿಭಟನೆಯಿಂದಾಗಿ ಬಡರೋಗಿಗಳು, ಹಳ್ಳಿಗಳಿಂದ, ನೆರೆ ಜಿಲ್ಲೆಗಳಿಂದ ಚಿಕಿತ್ಸೆಗಾಗಿ ಬಂದಿದ್ದ ಬಡವರು ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ಹಿಂದಿರುಗಿಸಿದರು. ಮತ್ತೆ ಕೆಲವರು ನೋವು, ಅಸ್ವಸ್ಥರಾಗಿ ನರಳಾಡುವಂತಾಗಿತ್ತು. ವೈದ್ಯರು ದಿಢೀರನೇ ಹೀಗೆ ಪ್ರತಿಭಟನೆ ನಡೆಸಿದರೆ ಹೇಗೆ? ಮುಂಚಿತವಾಗಿಯೇ ಮುಷ್ಕರ ನಡೆಸುವುದಾಗಿ ಹೇಳಿದರೆ ನಾವು ಆಸ್ಪತ್ರೆಗೆ ಬಂದು, ಬರಿಗೈಲಿ ವಾಪಸ್‌ ಹೋಗುವುದಾದರೂ ತಪ್ಪುತ್ತಿತ್ತು ಎಂದೂ ಕೆಲವರು ಅಳಲು ತೋಡಿಕೊಂಡರು.

- - - -27ಕೆಡಿವಿಜಿ5, 6:

ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ಮೇಲೆ ಹಲ್ಲೆ ಖಂಡಿಸಿ ಮಂಗಳವಾರ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಒಪಿಡಿ ಸೇವೆ ಬಂದ್‌ಗೊಳಿಸಿ ಪ್ರತಿಭಟಿಸಿದರು.