ದಾವಣಗೆರೆ ಎಸ್‌ಪಿ ಶಾಮನೂರು ಮನೆ ಪಮೇರಿಯನ್ ನಾಯಿ

| Published : Sep 03 2025, 01:00 AM IST

ಸಾರಾಂಶ

ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಶಾಸಕರಿಗೆ ಬೆಲೆಯನ್ನೇ ಕೊಡುವುದಿಲ್ಲ. ನಾವು ಇದ್ದರೆ ಮುಖ ತಿರುಗಿಸಿಕೊಂಡು ಕೂಡುತ್ತಾರೆ ಎಂದು ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ ಆರೋಪಿಸಿದ್ದಾರೆ.

- ಹರಿಹರ ಕಾರ್ಯಕ್ರಮದಲ್ಲಿ ಕ್ಷೇತ್ರ ಶಾಸಕರಿಗೆ ನೀಡಬೇಕಾದ ಗೌರವ ನೀಡಿಲ್ಲ: ಹರೀಶ್‌

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಶಾಸಕರಿಗೆ ಬೆಲೆಯನ್ನೇ ಕೊಡುವುದಿಲ್ಲ. ನಾವು ಇದ್ದರೆ ಮುಖ ತಿರುಗಿಸಿಕೊಂಡು ಕೂಡುತ್ತಾರೆ ಎಂದು ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ ಆರೋಪಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಮನೂರು ಕುಟುಂಬದ ಮನೆ ಕಾಯುವ ಪೊಮೇರಿಯನ್ ನಾಯಿಯಂತೆ ವರ್ತಿಸುತ್ತಾರೆ. ಗಂಟೆಗಟ್ಟಲೇ ಶಾಮನೂರು ಮನೆ ಬಾಗಿಲನ್ನು ಕಾಯುತ್ತಾರೆ. ಇಂತಹ ಅಧಿಕಾರಿಗಳಿಗೆ ಅಧಿಕಾರದಲ್ಲಿರುವವರು ಮಾತ್ರ ಮುಖ್ಯವಾಗಿ ಕಾಣುತ್ತಾರೆ ಎನಿಸುತ್ತದೆ ಎಂದು ಟೀಕಿಸಿದರು.

ಅಧಿಕಾರ ತಾತ್ಕಾಲಿಕ ಎಂಬುದನ್ನು ಇಂತಹ ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು. ಹರಿಹರದ ಗಾಂಧಿ ಮೈದಾನದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕನಾಗಿ ನಿಂತರೂ ಸೌಜನ್ಯಕ್ಕೂ ಇತ್ತ ಮುಖ ಮಾಡಲಿಲ್ಲ. ಒಬ್ಬ ಶಾಸಕರಿಗೆ ನೀಡಬೇಕಾದ ಗೌರವವನ್ನೂ ನೀಡಲಿಲ್ಲ. ಅದೇ ವೇದಿಕೆಯಲ್ಲಿದ್ದ ಡಿವೈಎಸ್‌ಪಿ ಅವರಿಗೆ ಏನು ಹೇಳಬೇಕಿತ್ತೋ ಹೇಳಿದೆ, ಅದು ಎಸ್‌ಪಿ ಸಹ ಕೇಳಿಸಿಕೊಂಡರು ಎಂದು ಅವರು ತಿಳಿಸಿದರು.

ಯಾವುದೇ ಕಾರ್ಯಕ್ರಮಕ್ಕೂ ಶಾಮನೂರು ಕುಟುಂಬದವರು ಸರಿಯಾದ ಸಮಯಕ್ಕೆ ಬರುವುದಿಲ್ಲ. ಆಹ್ವಾನಿಸಿದವರೆ ಕಾದು ಕಾದು ಸುಣ್ಣವಾಗುವಂತೆ ಮಾಡುತ್ತಾರೆ. ಇಷ್ಟು ವರ್ಷ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಪುತ್ರ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹಾಗೆ ಮಾಡುತ್ತಿದ್ದರು. ಇದೀಗ ಅದೇ ಸಾಲಿಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸಹ ಸೇರಿದ್ದಾರೆ ಎಂದು ದೂರಿದರು.

ಎಲ್ಲ ಜನಪ್ರತಿನಿಧಿಗಳೂ ಒಂದೇ ಎಂಬ ಅರಿವಿರಲಿ:

ದಾವಣಗೆರೆ ಸೇಂಟ್ ಪಾಲ್ಸ್ ಕಾನ್ವೆಂಟ್ ಶಾಲೆ ಕಾರ್ಯಕ್ರಮಕ್ಕೆ ಗಂಟೆಗಟ್ಟಲೇ ತಡವಾಗಿ ಬಂದ ಸಂಸದರಿಂದಾಗಿ ನೂರಾರು ಮಕ್ಕಳು ಉರಿ ಬಿಸಿಲಿನಲ್ಲಿ ಬಳಲುವಂತಾಗಿತ್ತು. ಇನ್ನು ಆ.15ರಂದು ಮಾಧ್ಯಮದವರೊಂದಿಗೆ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ರಾಜಕೀಯ ವಿಚಾರ ಮಾತನಾಡುವಾಗ ಅಲ್ಲಿ ಡಿಸಿ, ಎಸ್‌ಪಿ ಅವರಂಥ ಅಧಿಕಾರಿಗಳಿಗೇನು ಕೆಲಸ? ಶ್ರೀಮಂತ ಅಧಿಕಾರಸ್ಥರ ನೆರಳಲಿದ್ದರೆ ಅಧಿಕಾರಿಗಳಿಗೆ ತಾತ್ಕಾಲಿಕ ಲಾಭವಾಗಬಹುದಷ್ಟೇ. ಅಧಿಕಾರಿಗಳಿಗೆ ಸಚಿವ, ಸಂಸದರು, ಶಾಸಕ ಎಲ್ಲ ಜನಪ್ರತಿನಿಧಿಗಳು ಒಂದೇ ಎಂಬ ಅರಿವು ಬೇಡವೇ ಎಂದು ಬಿ.ಪಿ.ಹರೀಶ ಕಿಡಿಕಾರಿದರು.

- - -

(ಬಿ.ಪಿ.ಹರೀಶ್‌)