ಶೀಘ್ರವೇ ದಾವಣಗೆರೆಗೆ ಮಾದರಿ ಪ್ರೆಸ್ ಕ್ಲಬ್‌: ಡಾ.ಪ್ರಭಾ

| Published : Jan 29 2025, 01:31 AM IST

ಶೀಘ್ರವೇ ದಾವಣಗೆರೆಗೆ ಮಾದರಿ ಪ್ರೆಸ್ ಕ್ಲಬ್‌: ಡಾ.ಪ್ರಭಾ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು, ಬೆಳಗಾವಿ ಪ್ರೆಸ್‌ ಕ್ಲಬ್‌ಗಳಿಗಿಂತಲೂ ಅತ್ಯುತ್ತಮ ಮಾದರಿಯಲ್ಲಿ ದಾವಣಗೆರೆಯಲ್ಲಿ ಪ್ರೆಸ್‌ ಕ್ಲಬ್ ಆಗಬೇಕೆಂಬ ಉದ್ದೇಶ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್‌.ಮಲ್ಲಿಕಾರ್ಜನ ಅವರಿಗೆ ಇದೆ. ಆದಷ್ಟು ಬೇಗನೆ ಇದು ಕಾರ್ಯರೂಪಕ್ಕೆ ಬರಲಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ದಾವಣಗೆರೆಯಲ್ಲಿ ಭರವಸೆ ನೀಡಿದ್ದಾರೆ.

- ಶಾಮನೂರು-ಮಲ್ಲಿಕಾರ್ಜುನ್‌ ಒತ್ತಾಸೆಯಂತೆ ವ್ಯವಸ್ಥಿತ ಕ್ರಮ: ಸಂಸದೆ ಹೇಳಿಕೆ

- - - -2007ರಿಂದಲೂ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಜಿಲ್ಲಾ ವರದಿಗಾರರ ಕೂಟ

- ಪಾಲಿಕೆ ಹಿಂದಿನ ಕೆಂಪು ಕಟ್ಟಡಕ್ಕೆ ಮೇಯರ್ ಜೊತೆ ಸ್ಥಳ ಪರಿಶೀಲಿಸಿದ ಸಂಸದೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಬೆಂಗಳೂರು, ಬೆಳಗಾವಿ ಪ್ರೆಸ್‌ ಕ್ಲಬ್‌ಗಳಿಗಿಂತಲೂ ಅತ್ಯುತ್ತಮ ಮಾದರಿಯಲ್ಲಿ ದಾವಣಗೆರೆಯಲ್ಲಿ ಪ್ರೆಸ್‌ ಕ್ಲಬ್ ಆಗಬೇಕೆಂಬ ಉದ್ದೇಶ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್‌.ಮಲ್ಲಿಕಾರ್ಜನ ಅವರಿಗೆ ಇದೆ. ಆದಷ್ಟು ಬೇಗನೆ ಇದು ಕಾರ್ಯರೂಪಕ್ಕೆ ಬರಲಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಭರವಸೆ ನೀಡಿದರು.

ನಗರದ ಪಾಲಿಕೆ ಹಿಂಭಾಗದ ಪಾಲಿಕೆಗೆ ಸೇರಿದ ಕೆಂಪು ಕಟ್ಟಡವನ್ನು ಜಿಲ್ಲಾ ವರದಿಗಾರರ ಕೂಟಕ್ಕೆ ನೀಡುವಂತೆ ಮಾಡಿದ್ದ ಮನವಿ ಮೇರೆಗೆ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ್ದ ಪರಿಶೀಲಿಸಿದರು. ಈ ವೇಳೆ ಇಡೀ ಕಟ್ಟಡ ವೀಕ್ಷಿಸಿದ ಸಂಸದರು, ನಿರ್ಮಿತಿ ಕೇಂದ್ರವು ಮಾದರಿ ಕಟ್ಟಡವನ್ನು ಇಲ್ಲಿ ಒಂದೂವರೆ ದಶಕದ ಹಿಂದೆಯೇ ನಿರ್ಮಿಸಿದ್ದು, ಕಟ್ಟಡ ಆಕರ್ಷಕವಾಗಿದೆ ಎಂದರು.

ವರದಿಗಾರರ ಕೂಟ 2007ರಿಂದ ಆರಂಭವಾಗಿದ್ದು, ಆಗಿನಿಂದಲೂ ಬಾಡಿಗೆ ಕಟ್ಟಡದಲ್ಲೇ ನಡೆಯುತ್ತಿದೆ. ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರ ಸೂಚನೆಯಂತೆ 2006ರಲ್ಲೇ ಪ್ರೆಸ್ ಮೀಟ್‌ ನಡೆಸಲು ಅನುವಾಗುವಂತೆ ಆಗಿನ ನಗರಸಭೆ ಅಧ್ಯಕ್ಷರಿದ್ದ ಡಿ.ಬಸವರಾಜ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಿದ್ದರು. ಆದರೆ, ಅದಕ್ಕೆ ಈಗ ಕಾಲ ಕೂಡಿ ಬಂದಂತಿದೆ ಎಂದರು.

ಪ್ರೆಸ್‌ ಕ್ಲಬ್‌ ಪತ್ರಕರ್ತರಿಗೆ ಉಪಯುಕ್ತ ಆಗುವಂತೆ ಹಾಗೂ ಸೂಕ್ತ ಸ್ಥಳವನ್ನೇ ಈಗ ಗುರುತಿಸಲಾಗಿದೆ. ಸಚಿವರು, ಶಾಸಕರ ಜೊತೆಗೆ ಚರ್ಚಿಸಿ, ಆದಷ್ಟು ಬೇಗನೆ ವರದಿಗಾರರ ಕೂಟಕ್ಕೆ ಕಟ್ಟಡ ಹಸ್ತಾಂತರಿಸುವ ಬಗ್ಗೆ ಅಗತ್ಯ ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮೇಯರ್ ಕೆ.ಚಮನ್ ಸಾಬ್ ಮಾತನಾಡಿ, , ಸಚಿವರು, ಸಂಸದರ ಇಚ್ಛಾಶಕ್ತಿ, ಬದ್ಧತೆಯಿಂದ ಜ.26ರಂದು ಗಣರಾಜ್ಯೋತ್ಸವ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಜಾಗ ಗುರುತಿಸುವಂತೆ ಸಚಿವರು ಹೇಳಿದ್ದರು. ಆಗ ನಾವು ಕೆಂಪು ಕಟ್ಟಡ ವಿಚಾರ ಪ್ರಸ್ತಾಪಿಸಿದೆವು. ವರದಿಗಾರರ ಕೂಟವು ಸಮ್ಮತಿಸಿದ್ದು, ಸಚಿವರು, ಸಂಸದರ ಮಾರ್ಗದರ್ಶನದಲ್ಲಿ ಶೀಘ್ರವೇ ಕೂಟಕ್ಕೆ ಅನುಕೂಲ ಮಾಡಿಕೊಡಲಿದ್ದೇವೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ಮಾತನಾಡಿ, 2006ರಲ್ಲಿ ತಾವು ನಗರಸಭೆ ಅಧ್ಯಕ್ಷರಿದ್ದಾಗ ಪ್ರೆಸ್‌ ಕ್ಲಬ್‌ಗೆಂದು ಈ ಕಟ್ಟಡ ನೀಡಲು ಉದ್ದೇಶಿಸಲಾಗಿತ್ತು. ಈ ಬಗ್ಗೆ ನಗರಸಭೆ ಸಾಮಾನ್ಯ ಸಭೆಯಲ್ಲೇ ನಿರ್ಣಯವಾಗಿತ್ತು. ಆಗ ವರದಿಗಾರರ ಕೂಟ ಅಸ್ತಿತ್ವಕ್ಕೆ ಬಂದಿರಲಿಲ್ಲ ಎಂದರು.

ವರದಿಗಾರರ ಕೂಟದ ಗೌರವಾಧ್ಯಕ್ಷ ಬಿ.ಎನ್.ಮಲ್ಲೇಶ, ಅಧ್ಯಕ್ಷ ನಾಗರಾಜ ಎಸ್.ಬಡದಾಳ್, ಪ್ರಧಾನ ಕಾರ್ಯದರ್ಶಿ ಎಂ.ವೈ.ಸತೀಶ, ಖಜಾಂಚಿ ಈ.ಪವನ್ ಕುಮಾರ, ಪಿಆರ್‌ಓ ಪಿ.ಎಸ್.ಲೋಕೇಶ, ಉಪಾಧ್ಯಕ್ಷರಾದ ಎ.ಎಲ್.ತಾರಾನಾಥ, ಕೆ.ಚಂದ್ರಣ್ಣ, ಸದಾನಂದ ಹೆಗಡೆ, ರಮೇಶ ಜಹಗೀರದಾರ, ನಟರಾಜ, ರಾಮಪ್ರಸಾದ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತಾ ಹುಲ್ಮನಿ ಗಣೇಶ, ಮೀನಾಕ್ಷಿ ಜಗದೀಶ್, ಸುಧಾ ಇಟ್ಟಿಗುಡಿ ಮಂಜುನಾಥ, ಸದಸ್ಯರು ಇತರರು ಇದ್ದರು.

- - -

ಕೋಟ್‌ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ, ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ ಅವರು ಪತ್ರಕರ್ತರ ಹಿತಕಾಯಲು ಸದಾ ಮುಂದಿದ್ದಾರೆ. ವರದಿಗಾರರ ಕೂಟ ಇನ್ನೂ ಮಾದರಿಯಾಗಿ ಬೆಳೆಯಲಿ. ನಾವೆಲ್ಲಾ ಪಾಲಿಕೆ ಸದಸ್ಯರು, ಅಧಿಕಾರಿ, ಸಿಬ್ಬಂದಿ ಸಹ ಇದನ್ನೇ ಆಶಿಸುತ್ತೇವೆ. ಪ್ರೆಸ್ ಕ್ಲಬ್‌ಗೆಂದು ಗುರುತಿಸಿದ್ದ ಕೆಂಪು ಕಟ್ಟಡದಲ್ಲಿ ಶೀಘ್ರವೇ ಫಲಕ ಅಳ‍ವಡಿಸಿ, ಕೂಟದ ಚಟುವಟಿಕೆ ಆರಂಭಿಸಲು ವ್ಯವಸ್ಥೆ ಮಾಡಿಕೊಡಲಾಗುವುದು. ಸಚಿವರು ದಾವಣಗೆರೆಗೆ ಮರಳುತ್ತಿದ್ದಂತೆ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು

- ಕೆ.ಚಮನ್ ಸಾಬ್, ಮೇಯರ್, ಮಹಾನಗರ ಪಾಲಿಕೆ

- - - -28ಕೆಡಿವಿಜಿ1, 2, 3, 4:

ದಾವಣಗೆರೆಯಲ್ಲಿ ಪ್ರೆಸ್‌ ಕ್ಲಬ್‌ಗೆ ಕಟ್ಟಡ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಮೇಯರ್ ಕೆ.ಚಮನ್ ಸಾಬ್‌ ಮತ್ತಿತರರು ಪಾಲಿಕೆ ಹಿಂಭಾಗದ ಕೆಂಪು ಕಟ್ಟಡವನ್ನು ಪರಿಶೀಲನೆ ನಡೆಸಿ, ಸ್ಥಾಯಿ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಪತ್ರಕರ್ತರೊಂದಿಗೆ ಚರ್ಚಿಸಿದರು.