ಸಾರಾಂಶ
ದಾವಣಗೆರೆಯಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಮತ್ತು ಗಲಭೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ಐಎ) ವಹಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಮಾಜಿ ಕೇಂದ್ರ ಸಚಿವ ಡಾ. ಜಿ.ಎಂ. ಸಿದ್ದೇಶ್ವರ ಹೇಳಿದ್ದಾರೆ.
ದಾವಣಗೆರೆ : ದಾವಣಗೆರೆ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಮೇಲಿನ ಕಲ್ಲು ತೂರಾಟ ಹಾಗೂ ನಂತರದ ಗಲಭೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವುದಾಗಿ ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ತಿಳಿಸಿದರು.
ಇಲ್ಲಿನ ಬಸವ ನಗರ ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತರನ್ನು ಭೇಟಿ ಮಾಡಿ, ಅಮಾಯಕರನ್ನು ಬಂಧಿಸದಂತೆ ಮನವಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಮತ್ತು ನಂತರದ ಬೆಳವಣಿಗೆಗಳಲ್ಲಿ ಹೊರಗಿನ ಶಕ್ತಿಗಳ ಕೈವಾಡವಿರುವ ಬಗ್ಗೆ ನಮಗೆ ಅನುಮಾನ ಇದೆ ಎಂದು ಹೇಳಿದರು.
ಪ್ರಕರಣದ ಗಂಭೀರತೆಯನ್ನು ಅರಿತು, ದಾವಣಗೆರೆ ಕಲ್ಲು ತೂರಾಟ, ಗಲಭೆ ಪ್ರಕರಣವನ್ನು ಎನ್ಐಎಗೆ ವಹಿಸುವಂತೆ ಕೇಂದ್ರ ಸರ್ಕಾರದ ಬಳಿ ಮಾತನಾಡುತ್ತೇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾಯಕರನ್ನು ಬಂಧಿಸುವ ಅವಶ್ಯಕತೆ ಇಲ್ಲ. ಯಾರು ತಪ್ಪು ಮಾಡಿದ್ದಾರೋ ಅಂತಹವರನ್ನು ಬಂಧಿಸಲಿ. ಅದಕ್ಕೆ ನನ್ನ ವಿರೋಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಅಮಾಯಕರನ್ನು ಯಾವುದೇ ಕಾರಣಕ್ಕೂ ಬಂಧಿಸಬಾರದು. ಯಾರೇ ತಪ್ಪು ಮಾಡಿದ್ದರೂ ಕ್ರಮ ಕೈಗೊಳ್ಳಲಿ. ಆದರೆ, ಸರಿ ರಾತ್ರಿ, ಬೆಳಗಿನ ಜಾವ ಹೋಗಿ ಮನೆಯಲ್ಲಿ ಮಲಗಿದ್ದವರನ್ನು ಯಾರೋ ಹೇಳುತ್ತಾರೆಂದು ಅಮಾಯಕರನ್ನು ಬಂಧಿಸುವುದು ಸರಿಯಲ್ಲ. ಈ ವಿಚಾರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಬಳಿಯೂ ಹೇಳಿದ್ದು, ಅವರು ಸಹ ಒಪ್ಪಿಕೊಂಡಿದ್ದಾರೆ ಎಂದರು.
ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ, ನಂತರದ ಗಲಭೆ ಪ್ರಕರಣಗಳ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಬೇಕು. ಇದೊಂದು ವ್ಯವಸ್ಥಿತ ಸಂಚು ಇರಬಹುದು. ಎಲ್ಲಿಂದಲೋ ಬಂದವರು, ಇಲ್ಲಿ ಯಾರದ್ದೋ ಮನೆಯಲ್ಲಿದ್ದು, ಈ ರೀತಿಯ ಕೃತ್ಯವನ್ನು ಎಸಗಿರಬಹುದು. ಹಾಗಾಗಿ ಎಲ್ಲಾ ಮುಸ್ಲಿಮರು ಒಳ್ಳೆಯವರಲ್ಲ, ಎಲ್ಲಾ ಮುಸ್ಲಿಮರು ಕೆಟ್ಟವರಲ್ಲ. ಇದು ಸ್ವಾಭಾವಿಕ. ದಾವಣಗೆರೆ ಗಲಭೆ ಪ್ರಕರಣವನ್ನು ಎನ್ಐಎ ತನಿಖೆಗೆ ಒಪ್ಪಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಡಾ.ಜಿ.ಎಂ.ಸಿದ್ದೇಶ್ವರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಹರಿಹರದ ಶಾಸಕ ಬಿ.ಪಿ.ಹರೀಶ, ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಮಾಜಿ ಶಾಸಕ ಎಸ್.ವಿ.ರಾಮಚಂದ್ರ, ಪಿ.ಸಿ.ಶ್ರೀನಿವಾಸ ಭಟ್, ಮಾಜಿ ಮೇಯರ್ ಎಸ್.ಟಿ.ವೀರೇಶ, ಬಿ.ಜಿ.ಅಜಯಕುಮಾರ, ಯಶವಂತರಾವ್ ಜಾಧವ್, ಬಿ.ಎಂ.ಸತೀಶ ಕೊಳೇನಹಳ್ಳಿ, ಶ್ರೀನಿವಾಸ ಟಿ.ದಾಸಕರಿಯಪ್ಪ, ವೈ.ಮಲ್ಲೇಶ, ಆರ್.ಶಿವಾನಂದ, ಆರ್.ಪ್ರಸನ್ನಕುಮಾರ, ಅನಿಲಕುಮಾರ, ಎಂ.ಪಿ.ಕೃಷ್ಣಮೂರ್ತಿ ಪವಾರ್, ಲಿಂಗರಾಜ, ಸೋಗಿ ಗುರು, ಟಿಂಕರ್ ಮಂಜಣ್ಣ, ಶಂಕರಗೌಡ ಬಿರಾದಾರ, ಶಿವನಗೌಡ ಪಾಟೀಲ, ಶಿವಕುಮಾರ ಹಲಗೇರಿ, ಸಂಘ ಪರಿವಾರದ ವಿನಾಯಕ ರಾನಡೆ, ಗು.ರುದ್ರಯ್ಯ, ಸಿದ್ದಲಿಂಗಸ್ವಾಮಿ, ಭಜರಂಗ ದಳದ ರಾಜು ಬೇಕರಿ ಸೇರಿದಂತೆ ಇತರರು ಇದ್ದರು.