ದಾವಣಗೆರೆ ವಿಶ್ವವಿದ್ಯಾನಿಲಯದ 13ನೇ ಘಟಿಕೋತ್ಸವ ಕಾರ್ಯಕ್ರಮ ಜ.30ರಂದು ವಿ.ವಿ.ಯ ಜ್ಞಾನಸೌಧ ಪ್ರಾಂಗಣದಲ್ಲಿ ಜ.30ರಂದು ನಡೆಯಲಿದ್ದು, ಓರ್ವ ವಿದ್ಯಾರ್ಥಿನಿ 7 ಚಿನ್ನದ ಪದಕ ಪಡೆದರೆ, ಚಿನ್ನದ ಪದಕ ಗಳಿಕೆಯಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ ಎಂದು ದಾವಣಗೆರೆ ವಿ.ವಿ. ಕುಲಪತಿ ಪ್ರೊ. ಬಿ.ಡಿ.ಕುಂಬಾರ ಹೇಳಿದ್ದಾರೆ.

- ಚಿನ್ನದ ಪದಕ ಬೇಟೆಯಲ್ಲಿ ಎಂದಿನಂತೆ ಮುಂದುವರಿದ ಹೆಣ್ಣುಮಕ್ಕಳ ಪಾರಮ್ಯ: ಪ್ರೊ. ಡಾ. ಬಿ.ಡಿ.ಕುಂಬಾರ

- - -

- ಪ್ರೊ. ಸಿ.ಎಚ್.ಮುರುಗೇಂದ್ರಪ್ಪ, ಎಂ.ರಾಮಪ್ಪ, ಎಲ್.ರೇವಣಸಿದ್ದಯ್ಯಗೆ ಗೌರವ ಡಾಕ್ಟರೇಟ್ - ದಾವಿವಿ ಕ್ಯಾಂಪಸ್‌ನ ಎಂ.ಕಾಂ. ವಿದ್ಯಾರ್ಥಿನಿ ಎನ್‌.ಬಿ. ನಯನಾಗೆ 7 ಚಿನ್ನದ ಪದಕಗಳ ವೃಷ್ಟಿ- ರಾಜ್ಯಪಾಲ ಗೆಹ್ಲೋಟ್ ಭಾಗಿ, ಪದ್ಮವಿಭೂಷಣ ಡಾ.ವಾಸುದೇವ ಅತ್ರೆ ಘಟಿಕೋತ್ಸವ ಭಾಷಣ - 30 ಮಹಿಳಾ, 40 ಪುರುಷರು ಸೇರಿ ಒಟ್ಟು 70 ಅಭ್ಯರ್ಥಿಗಳಿಗೆ ಡಾಕ್ಟರ್ ಆಫ್ ಫಿಲಾಸಫಿ ಪದವಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ವಿಶ್ವವಿದ್ಯಾನಿಲಯದ 13ನೇ ಘಟಿಕೋತ್ಸವ ಕಾರ್ಯಕ್ರಮ ಜ.30ರಂದು ವಿ.ವಿ.ಯ ಜ್ಞಾನಸೌಧ ಪ್ರಾಂಗಣದಲ್ಲಿ ಜ.30ರಂದು ನಡೆಯಲಿದ್ದು, ಓರ್ವ ವಿದ್ಯಾರ್ಥಿನಿ 7 ಚಿನ್ನದ ಪದಕ ಪಡೆದರೆ, ಚಿನ್ನದ ಪದಕ ಗಳಿಕೆಯಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ ಎಂದು ದಾವಣಗೆರೆ ವಿ.ವಿ. ಕುಲಪತಿ ಪ್ರೊ. ಬಿ.ಡಿ.ಕುಂಬಾರ ಹೇಳಿದರು.

ತಾಲೂಕಿನ ತೋಳಹುಣಸೆಯ ಶಿವಗಂಗೋತ್ರಿಯ ದಾವಣಗೆರೆ ವಿ.ವಿ. ಎಂಬಿಎ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯಾಹ್ನ 12 ಗಂಟೆಗೆ ವಿ.ವಿ. ಕುಲಾಧಿಪತಿ, ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅಧ್ಯಕ್ಷತೆಯಲ್ಲಿ 13ನೇ ಘಟಿಕೋತ್ಸವ ಸಮಾರಂಭ, ಪದವಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದರು.

ಮೂವರಿಗೆ ಗೌರವ ಡಾಕ್ಟರೇಟ್:

ವಿ.ವಿ. ಸಮ ಕುಲಾಧಿಪತಿ ಡಾ. ಎಂ.ಸಿ.ಸುಧಾಕರ್ ಉಪಸ್ಥಿತರಿರುತ್ತಾರೆ. ಡಿಆರ್‌ಡಿಒ ಮಾಜಿ ಮಹಾ ನಿರ್ದೇಶಕ, ಕೇಂದ್ರ ರಕ್ಷಣಾ ಸಚಿವಾಲಯದ ಕಾರ್ಯದರ್ಶಿ, ಸಲಹೆಗಾರರಾಗಿದ್ದ ಪದ್ಮ ವಿಭೂಷಣ ಡಾ.ವಾಸುದೇವ ಕೆ.ಅತ್ರೆ ಘಟಿಕೋತ್ಸವ ಭಾಷಣ ಮಾಡುವರು. 13ನೇ ಘಟಿಕೋತ್ಸವದಲ್ಲಿ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ಅವರು ಹೇಳಿದರು.

ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ನಿವೃತ್ತ ಪ್ರಾಧ್ಯಾಪಕ ಪ್ರೊ. ಸಿ.ಎಚ್. ಮುರುಗೇಂದ್ರಪ್ಪ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಎಂ.ರಾಮಪ್ಪ ಹಾಗೂ ಪೊಲೀಸ್ ಇಲಾಖೆಯಲ್ಲಿ ಸುಧಾರಣೆ ತಂದು, ಸೇವೆಯಿಂದ ನಿವೃತ್ತರಾದ ಎಲ್.ರೇವಣಸಿದ್ದಯ್ಯ ಅವರಿಗೆ ದಾವಣಗೆರೆ ವಿ.ವಿ.ಯಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು. ಗೌರವ ಡಾಕ್ಟರೇಟ್‌ಗಾಗಿ 9 ಅರ್ಜಿಗಳು ಸ್ವೀಕೃತವಾಗಿದ್ದವು ಎಂದು ಅವರು ತಿಳಿಸಿದರು.

ಪದಕಗಳ ವಿಜೇತರು:

2024-25ನೇ ಸಾಲಿನ ಪರೀಕ್ಷೆಗಳಲ್ಲಿ ದಾವಣಗೆರೆ ವಿವಿ ಕ್ಯಾಂಪಸ್‍ನ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ (ಎಂ.ಕಾಂ) ವಿಭಾಗದ ಪ್ರಥಮ ರ್ಯಾಂಕ್ ವಿದ್ಯಾರ್ಥಿನಿ ಎನ್.ಬಿ. ನಯನ 7 ಸ್ವರ್ಣ ಪದಕ ಪಡೆದು, ಸಾಧನೆ ಮಾಡಿದ್ದಾರೆ. ಎಂಬಿಎ ವಿದ್ಯಾರ್ಥಿ ಆರ್.ದೀಪ 4 ಸ್ವರ್ಣ ಪದಕ, ಗಣಿತ ಶಾಸ್ತ್ರದಲ್ಲಿ ಕವನ, ರುಚಿತ ಬಯೋ ಕೆಮಿಸ್ಟ್ರಿ, ಎಂ.ಆರ್. ಪುಟ್ಟರಾಜ ಭೌತಶಾಸ್ತ್ರ, ಜೆ.ಪುಷ್ಪಾ ಪ್ರಾಣಿಶಾಸ್ತ್ರ ವಿಭಾಗ, ಎಂ.ವಿಜಯಲಕ್ಷ್ಮೀ ಆಂಗ್ಲ ವಿಭಾಗ, ಅನುಷಾ ಕನ್ನಡ ವಿಭಾಗದಲ್ಲಿ ತಲಾ 3 ಸ್ವರ್ಣ ಪದಕ ಗಳಿಸಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ವಿ.ಎಂ. ಚಂದನ್ 2 ಸ್ವರ್ಣ ಪದಕ ಪಡೆದಿದ್ದಾರೆ ಅವರು ಹೇಳಿದರು.

ವಿ.ವಿ.ಯಿಂದ 2024-25ನೇ ಸಾಲಿನಲ್ಲಿ ಒಟ್ಟು 87 ಸ್ವರ್ಣ ಪದಕ ವಿದ್ಯಾರ್ಥಿಗಳು ಪಡೆದಿದ್ದಾರೆ. ಸ್ನಾತಕ ಪದವಿಯಲ್ಲಿ 11 ಮಹಿಳಾ, 2 ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 13 ವಿಧ್ಯಾರ್ಥಿಗಳು 22 ಸ್ವರ್ಣ ಪದಕ ಪಡೆಯಲಿದ್ದಾರೆ. ಸ್ನಾತಕೋತ್ತರ ಪದವಿಯಲ್ಲಿ 24 ಮಹಿಳಾ ಹಾಗೂ 8 ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 32 ವಿದ್ಯಾರ್ಥಿಗಳು 65 ಸ್ವರ್ಣ ಪದಕ ಪಡೆಯಲಿದ್ದಾರೆ. ಒಟ್ಟಾರೆ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಒಟ್ಟು 35 ಮಹಿಳಾ ವಿದ್ಯಾರ್ಥಿನಿಯರು ಹಾಗೂ 10 ಪುರುಷ ವಿದ್ಯಾರ್ಥಿಗಳೂ ಸೇರಿ ಒಟ್ಟು 45 ವಿದ್ಯಾರ್ಥಿಗಳು 87 ಚಿನ್ನದ ಪದಕ ಹಂಚಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

70 ಅಭ್ಯರ್ಥಿಗಳಿಗೆ ಪಿಎಚ್‌ಡಿ ಪ್ರದಾನ:

ಘಟಿಕೋತ್ಸವದಲ್ಲಿ 30 ಮಹಿಳಾ ಹಾಗೂ 40 ಪುರುಷರು ಸೇರಿ ಒಟ್ಟು 70 ಅಭ್ಯರ್ಥಿಗಳಿಗೆ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್‌.ಡಿ) ಪದವಿ ಪ್ರದಾನ ಮಾಡಲಾಗುವುದು. 2024-25ನೇ ಸಾಲಿನ ಸ್ನಾತಕ ಬಿ.ಎ., ಬಿ.ಎಸ್.ಡಬ್ಲೂ, ಬಿ.ವಿ.ಎ, ಬಿ.ಕಾಂ, ಬಿಬಿಎ, ಬಿ.ಇಡಿ., ಬಿ.ಪಿ.ಇಡಿ.,ಬಿ.ಎಸ್ಸಿ ಹಾಗೂ ಬಿ.ಸಿ.ಎ ಪದವಿಗಳಲ್ಲಿ 6401 ಮಹಿಳಾ ಹಾಗೂ 4283 ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 10684 ವಿದ್ಯಾರ್ಥಿಗಳು ಸ್ನಾತಕ ಪದವಿ ಪಡೆಯಲು ಅರ್ಹರಾಗಿದ್ದಾರೆ ಎಂದು ವಿವರಿಸಿದರು.

2024-25 ನೇ ಸಾಲಿನ ಸ್ನಾತಕೋತ್ತರ ಎಂ.ಎ., ಎಂ.ಎಸ್.ಡಬ್ಲೂ,ಎಂ.ವಿ.ಎ,ಎಂ.ಕಾಂ,ಎಂಬಿಎ, ಎಂ.ಇಡಿ. ಎಂ.ಪಿ.ಇಡಿ., ಎಂ.ಎಸ್ಸಿ ಹಾಗೂ ಎಂ.ಸಿ.ಎ. ಪದವಿಗಳಲ್ಲಿ 1191 ಮಹಿಳಾ ಹಾಗೂ 831 ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 2022 ವಿಧ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆಯಲು ಅರ್ಹರಾಗಿದ್ದಾರೆ. ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳು ಸೇರಿ ಒಟ್ಟು 12706 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿರುತ್ತಾರೆ ಎಂದು ಪ್ರೊ. ಬಿ.ಡಿ.ಕುಂಬಾರ ವಿವರಿಸಿದರು.

ದಾವಿವಿ ಕುಲ ಸಚಿವ ಎಸ್.ಬಿ. ಗಂಟಿ, ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಕೆ.ರಮೇಶ, ಹಣಕಾಸು ಅಧಿಕಾರಿ ವಂದನಾ, ಡೀನ್‌ಗಳಾದ ಪ್ರೊ. ಕೆ.ವೆಂಕಟೇಶ, ಪ್ರೊ. ಎಂ.ಯು. ಲೋಕೇಶ, ಪ್ರೊ. ಗೋವಿಂದಪ್ಪ, ಪ್ರೊ.ಶ್ರೀನಿವಾಸ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಶಿವಕುಮಾರ ಕಣಸೋಗಿ, ದಾವಣಗೆರೆ ಸಿಂಡಿಕೇಟ್ ಮತ್ತು ಅಕಾಡೆಮಿಕ ಕೌನ್ಸಿಲ್ ಸದಸ್ಯರು ಇದ್ದರು.

- - -

-29ಕೆಡಿವಿಜಿ10, 11: ದಾವಣಗೆರೆ ವಿವಿಯಲ್ಲಿ ಗುರುವಾರ ಕುಲಪತಿ ಪ್ರೊ. ಬಿ.ಡಿ.ಕುಂಬಾರ ವಿವಿಯ 13ನೇ ಘಟಿಕೋತ್ಸವದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. -29ಕೆಡಿವಿಜಿ12: ದಾವಣಗೆರೆ ವಿವಿ ಕ್ಯಾಂಪಸ್‌ನ ಎಂಕಾಂ ವಿದ್ಯಾರ್ಥಿನಿ ಎನ್‌.ಬಿ.ನಯನಾಗೆ 7 ಚಿನ್ನದ ಪದಕ ತನ್ನದಾಗಿಸಿಕೊಂಡು, ಚಿನ್ನದ ಹುಡುಗಿಯೆಂಬ ಕೀರ್ತಿ ಗಳಿಸಿದ್ದಾರೆ. -29ಕೆಡಿವಿಜಿ13: ದಾವಣಗೆರೆ ವಿವಿ ಗೌರವ ಡಾಕ್ಟರೇಟ್‌ಗೆ ಪಾತ್ರರಾದ ಪ್ರೊ. ಸಿ.ಎಚ್. ಮುರುಗೇಂದ್ರಪ್ಪ. -29ಕೆಡಿವಿಜಿ14: ದಾವಣಗೆರೆ ವಿವಿ ಗೌರವ ಡಾಕ್ಟರೇಟ್‌ಗೆ ಪಾತ್ರರಾದ ಚಿತ್ರದುರ್ಗ ಜಿಲ್ಲೆ ಎಂ.ರಾಮಪ್ಪ. -29ಕೆಡಿವಿಜಿ15: ದಾವಣಗೆರೆ ವಿವಿ ಗೌರವ ಡಾಕ್ಟರೇಟ್‌ಗೆ ಪಾತ್ರರಾದ ನಿವೃತ್ತ ಐಪಿಎಸ್ ಅಧಿಕಾರಿ ಎಲ್.ರೇವಣಸಿದ್ದಯ್ಯ. -29ಕೆಡಿವಿಜಿ16: ದಾವಣಗೆರೆ ವಿವಿಯಲ್ಲಿ ಘಟಿಕೋತ್ಸವ ಭಾಷಣ ಮಾಡಲಿರುವ ಪದ್ಮವಿಭೂಷಣ ಡಾ.ವಾಸುದೇವ ಅತ್ರೆ.

- - -