ಇಂದು ದಾವಿವಿ 12ನೇ ಘಟಿಕೋತ್ಸವ, ಪದವಿ ಪ್ರದಾನ

| Published : Apr 02 2025, 01:01 AM IST

ಸಾರಾಂಶ

ದಾವಣಗೆರೆ ವಿಶ್ವವಿದ್ಯಾನಿಲಯದ 12ನೇ ವಾರ್ಷಿಕ ಘಟಿಕೋತ್ಸವ-2025 ಸಮಾರಂಭ ಏ.2ರಂದು ತಾಲೂಕಿನ ಶಿವಗಂಗೋತ್ರಿಯ ದಾವಣಗೆರೆ ವಿ.ವಿ.ಯ ಜ್ಞಾನಸೌಧದಲ್ಲಿ ನಡೆಯಲಿದೆ. ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯ ಒಟ್ಟು 14,048 ವಿದ್ಯಾರ್ಥಿಗಳು ಪದವಿ ಪಡೆಯಲಿದ್ದು, 46 ವಿದ್ಯಾರ್ಥಿಗಳು 87 ಚಿನ್ನದ ಪದಕ ಪಡೆದರೆ, 57 ಸಂಶೋಧನಾ ವಿದ್ಯಾರ್ಥಿಗಳು ಪಿಎಚ್‌.ಡಿ ಪದವಿ ಪಡೆಯಲಿದ್ದಾರೆ.

- 14,048 ವಿದ್ಯಾರ್ಥಿಗಳಿಗೆ ಪದವಿ, 57 ಜನರಿಗೆ ಪಿಎಚ್‌.ಡಿ, ಮೂವರಿಗೆ ಗೌರವ ಡಾಕ್ಟರೇಟ್‌ - - -

- ರಾಜ್ಯಪಾಲ ಗೆಹ್ಲೋಟ್ ಅಧ್ಯಕ್ಷತೆ, ಪದ್ಮಶ್ರೀ ಪ್ರೊ. ಪಿ.ಬಲರಾಮ್‌ ಘಟಿಕೋತ್ಸವ ಭಾಷಣ

- ಪೊಲೀಸ್ ಕಾನ್‌ಸ್ಟೇಬಲ್‌ ಮಗಳು ಐ.ಕೆ.ರಿಯಾಗೆ 6 ಚಿನ್ನದ ಪದಕ: ಪ್ರೊ. ಬಿ.ಡಿ.ಕುಂಬಾರ

- 46 ವಿದ್ಯಾರ್ಥಿಗಳು 87 ಚಿನ್ನದ ಪದಕ ಪಡೆದರೆ, 57 ಸಂಶೋಧನಾ ವಿದ್ಯಾರ್ಥಿಗಳಿಗೆ ಪಿಎಚ್‌.ಡಿ ಪದವಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ವಿಶ್ವವಿದ್ಯಾನಿಲಯದ 12ನೇ ವಾರ್ಷಿಕ ಘಟಿಕೋತ್ಸವ-2025 ಸಮಾರಂಭ ಏ.2ರಂದು ತಾಲೂಕಿನ ಶಿವಗಂಗೋತ್ರಿಯ ದಾವಣಗೆರೆ ವಿ.ವಿ.ಯ ಜ್ಞಾನಸೌಧದಲ್ಲಿ ನಡೆಯಲಿದೆ. ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯ ಒಟ್ಟು 14,048 ವಿದ್ಯಾರ್ಥಿಗಳು ಪದವಿ ಪಡೆಯಲಿದ್ದು, 46 ವಿದ್ಯಾರ್ಥಿಗಳು 87 ಚಿನ್ನದ ಪದಕ ಪಡೆದರೆ, 57 ಸಂಶೋಧನಾ ವಿದ್ಯಾರ್ಥಿಗಳು ಪಿಎಚ್‌.ಡಿ ಪದವಿ ಪಡೆಯಲಿದ್ದಾರೆ.

ತಾಲೂಕಿನ ಶಿವಗಂಗೋತ್ರಿಯ ದಾವಣಗೆರೆ ವಿ.ವಿ.ಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕುಲಪತಿ ಪ್ರೊ. ಬಿ.ಡಿ. ಕುಂಬಾರ ಮಾತನಾಡಿ, ಬೆಳಗ್ಗೆ 11.30ಕ್ಕೆ ರಾಜ್ಯಪಾಲರು, ದಾವಿವಿ ಕುಲಾಧಿಪತಿ ಥಾವರ್ ಚಂದ್‌ ಗೆಹ್ಲೋಟ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಸಮ ಕುಲಾಧಿಪತಿ, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್‌ ಭಾಗವಹಿಸುವರು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಮಾಜಿ ನಿರ್ದೇಶಕ, ಭಾರತೀಯ ಜೀವ ರಸಾಯನಶಾಸ್ತ್ರಜ್ಞ ಪದ್ಮಭೂಷಣ ಪ್ರೊ. ಪಿ.ಬಲರಾಂ ಘಟಿಕೋತ್ಸವ ಭಾಷಣ ಮಾಡುವರು ಎಂದರು.

ಘಟಿಕೋತ್ಸವದಲ್ಲಿ 21 ಮಹಿಳೆಯರು, 36 ಪುರುಷರು ಸೇರಿದಂತೆ ಒಟ್ಟು 57 ಜನರು ಪಿಎಚ್‌.ಡಿ ಪದವಿ ಪಡೆಯಲಿದ್ದಾರೆ. ಒಟ್ಟು 23 ವಿವಿಧ ವಿಭಾಗಗಳಲ್ಲಿ ಸಂಶೋಧನೆ ಮಾಡಿದ್ದಾರೆ. ಈ ಮೂಲಕ ದಾವಿವಿ ಶಿಕ್ಷಣದ ಜೊತೆಗೆ ಸಂಶೋಧನೆಯಲ್ಲೂ ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಗೌರವ ಪಡೆಯಲು ಸಾಧ್ಯವಾಗಿದೆ ಎಂದರು.

ಕಳೆದ ಶೈಕ್ಷಣಿಕ ವರ್ಷದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಒಟ್ಟು 87 ಸ್ವರ್ಣ ಪದಕಗಳಿದ್ದು, 35 ವಿದ್ಯಾರ್ಥಿನಿಯರು, 11 ಪುರುಷರು ಸೇರಿ ಒಟ್ಟು 46 ವಿದ್ಯಾರ್ಥಿಗಳು ಪದಕ ಹಂಚಿಕೊಂಡಿದ್ದಾರೆ. ಈ ಸಲವೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಸ್ನಾತಕ ಪದವಿಯ 9 ಮತ್ತು ಸ್ನಾತಕೋತ್ತರ ಪದವಿಯ 26 ವಿದ್ಯಾರ್ಥಿನಿಯರು ಸಾಧನೆ ಮಾಡಿದ್ದಾರೆ ಎಂದು ಹೇಳಿದರು.

ಕಳೆದ ಶೈಕ್ಷಣಿಕ ವರ್ಷದ ಸ್ನಾತಕ ಪದವಿಯ ವಿವಿದ ಕೋರ್ಸ್‌ಗಳಲ್ಲಿ ಒಟ್ಟು 12,129 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದಾರೆ. ಅದರಲ್ಲಿ 7645 ಮಹಿಳೆಯರು, 4448 ಪುರುಷರು ಪದವೀಧರರಾಗಿದ್ದಾರೆ. ಅಲ್ಲದೇ, ಸ್ನಾತಕ ಪದವಿ ತೇರ್ಗಡೆಯ ಫಲಿತಾಂಶ ಶೇ.61.14ರಷ್ಟಾಗಿದೆ. ವಿ.ವಿ.ಯ 24 ಕೋರ್ಸ್‌ಗಳಲ್ಲಿ ಒಟ್ಟು 1919 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಗೆ ಅರ್ಹರಾಗಿದ್ದು,1192 ಮಹಿಳೆಯರು, 727 ಪುರುಷ ವಿದ್ಯಾರ್ಥಿಗಳಿದ್ದಾರೆ. ಸ್ನಾತಕೋತ್ತರ ಪದವಿಯಲ್ಲಿ ಶೇ.96.14 ಫಲಿತಾಂಶ ಬಂದಿದೆ ಎಂದು ತಿಳಿಸಿದರು.

ಐ.ಕೆ.ರಿಯಾಗೆ 6 ಚಿನ್ನದ ಪದಕ:

ಸ್ನಾತಕೋತ್ತರ ಪದವಿ ವಾಣಿಜ್ಯ ಶಾಸ್ತ್ರ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ಐ.ಕೆ.ರಿಯಾ 6 ಚಿನ್ನದ ಪದಕದೊಂದಿಗೆ ಸಾಧನೆ ಮಾಡಿದ್ದಾರೆ. ಸ್ನಾತಕ ಪದವಿಯಲ್ಲಿ ದಾವಣಗೆರೆ ಎವಿಕೆ ಕಾಲೇಜಿನ ರಕ್ಷಾ ವಿ.ಅಂಗಡಿ ಬಿಎಸ್ಸಿಯಲ್ಲಿ, ಹೊಳಲ್ಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಸ್‌.ಗಂಗಮ್ಮ (ಬಿಎ), ಚಿತ್ರದುರ್ಗ ಎಸ್ಆರ್‌ಎಸ್‌ ಶಿಕ್ಷಣ ಮಹಾವಿದ್ಯಾಲಯದ ಎನ್‌.ಪಿ. ಭವ್ಯಾಶ್ರೀ (ಶಿಕ್ಷಣ) ತಲಾ ಮೂರು ಪದಕಗಳೊಂದಿಗೆ ಅತ್ಯುತ್ತಮ ಸಾಧನೆ ಮಾಡಿದ್ದಾರೆ ಎಂದು ವಿವರಿಸಿದರು.

ಸ್ನಾತಕೋತ್ತರ ಪದವಿಯಲ್ಲಿ ಅರ್ಥಶಾಸ್ತ್ರ ವಿಭಾಗದ ಆರ್.ಟಿ. ಶಶ್ವಂತ, ವ್ಯವಹಾರ ನಿರ್ವಹಣೆ ವಿಭಾಗದ ಎಸ್.ಜಿ. ಸೌಂದರ್ಯ ತಲಾ 4 ಚಿನ್ನದ ಪದಕ ಪಡೆದಿದ್ದಾರೆ. ಕೆ.ಸ್ನೇಹಾ (ಇಂಗ್ಲಿಷ್), ಸಿ.ಎನ್. ಅಕ್ಷತಾ (ಕನ್ನಡ), ವರ್ಷಾ ಸಣ್ಣಪ್ಪನವರ (ಜೀವ ರಸಾಯನ ವಿಜ್ಞಾನ), ಡಿ.ಶ್ರೀಕಾಂತ ಅಂಗಡಿ (ರಸಾಯನ ಶಾಸ್ತ್ರ), ಗೌರಿ ಮಣ್ಣೂರ (ಗಣಿತ ಶಾಸ್ತ್ರ), ಎಚ್.ಮೇಘನಾ (ಭೌತಶಾಸ್ತ್ರ), ಕೆ.ಸಿಂಧು (ಜೀವಶಾಸ್ತ್ರ) ತಲಾ 3 ಚಿನ್ನದ ಪದಕ ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಆರ್.ಲಕ್ಷ್ಮಣ (ಪತ್ರಿಕೋದ್ಯಮ), ಸಿ.ಗುರುಪ್ರಸಾದ (ಬಿವಿಎ), ಎವಿಕೆ ಕಾಲೇಜಿನ ಖುಷಿ ಕೊಥಾರಿ (ಬಿಕಾಂ), ಚಿತ್ರದುರ್ಗ ಎಸ್‌ಆರ್‌ಎಸ್ ಶಿಕ್ಷಣ ಕಾಲೇಜಿನ ಇ.ಚೈತ್ರಾ (ಶಿಕ್ಷಣ), ಆರ್.ಅಂಜು (ಎಂಪಿಇಡಿ), ಎನ್.ಎನ್. ಯಶ್ವಂತೆ (ಜೈವಿಕ ತಂತ್ರಜ್ಞಾನ), ಎ.ಪ್ರೀತಿ (ಸಸ್ಯಶಾಸ್ತ್ರ), ಶರ್ಮಿಳಾ (ಕಂಪ್ಯೂಟರ್ ವಿಜ್ಞಾನ), ರುಚಿತಾ ಪಾಟೀಲ (ಸೂಕ್ಷ್ಮಜೀವ ವಿಜ್ಞಾನ), ಬಾಪೂಜಿ ಹೈಟೆಕ್ ಕಾಲೇಜಿನ ಎಚ್.ಟಿ. ಶ್ರವಣಕುಮಾರಿ (ಬಿಸಿಎ) ಅವರು ತಲಾ 2 ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ ಎಂದು ಪ್ರೊ. ಬಿ.ಡಿ.ಕುಂಬಾರ ತಿಳಿಸಿದರು.

ದಾವಿವಿ ಕುಲಸಚಿವ ಪ್ರೊ. ಆರ್.ಶಶಿಧರ, ಪರೀಕ್ಷಾಂಗ ಕುಲ ಸಚಿವ ಪ್ರೊ. ಸಿ.ಕೆ.ರಮೇಶ, ಪತ್ರಿಕೋದ್ಯಮ ವಿಭಾಗದ ಡಾ.ಶಿವಕುಮಾರ ಕಣಸೋಗಿ, ವಿವಿಧ ಅಧಿಕಾರಿಗಳು, ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು, ಸಿಬ್ಬಂದಿ ಇದ್ದರು.

- - -

(ಬಾಕ್ಸ್‌) * ಕಾಗಿನೆಲೆ ಶ್ರೀ ಸೇರಿ ಮೂವರಿಗೆ ಗೌರವ ಡಾಕ್ಟರೇಟ್‌ ದಾವಣಗೆರೆ ವಿಶ್ವವಿದ್ಯಾನಿಲಯ ಘಟಿಕೋತ್ಸವ ಸಮಾರಂಭದಲ್ಲಿ ಮೂವರು ಗಣ್ಯರು, ಸಾಧಕರಿಗೆ ಈ ಸಲ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು.

ಶಿಕ್ಷಣ ಕ್ಷೇತ್ರದಿಂದ ಜಾಗತಿಕ ಮಟ್ಟದ ವೈಜ್ಞಾನಿಕ ಸಂಶೋಧನೆ ಮತ್ತು ಆಡಳಿತ ನಿರ್ವಹಣೆಯಲ್ಲಿ ಗುರುತರ ಸೇವೆ ಸಲ್ಲಿಸಿದ ಪ್ರೊ. ಎಸ್.ಆರ್‌.ನಿರಂಜನ, ರಾಜ್ಯ- ರಾಷ್ಟ್ರಮಟ್ಟದಲ್ಲಿ ಸಮುದಾಯ ಜಾಗೃತಿ ಜೊತೆಗೆ ಶಿಕ್ಷಣ, ಆರೋಗ್ಯ, ಸಮಾಜ ಸೇವಾ ಕ್ಷೇತ್ರದ ಸೇವೆಯಲ್ಲಿ ತೊಡಗಿರುವ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಹಾಗೂ ಹಿರಿಯ ರಾಜಕೀಯ ಮುತ್ಸದ್ದಿ, ರೈತ ನಾಯಕ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ ಅವರಿಗೆ ದಾವಣಗೆರೆ ವಿ.ವಿ.ಯಿಂದ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ ಎಂದು ದಾವಿವಿ ಕುಲಪತಿ ಪ್ರೊ.ಬಿ.ಡಿ.ಕುಂಬಾರ ತಿಳಿಸಿದರು.

- - - -1ಕೆಡಿವಿಜಿ3, 4, 5.ಜೆಪಿಜಿ: ದಾವಣಗೆರೆ ತಾಲೂಕಿನ ಶಿವಗಂಗೋತ್ರಿಯ ದಾವಣಗೆರೆ ವಿ.ವಿ.ಯಲ್ಲಿ ಕುಲಪತಿ ಪ್ರೊ. ಬಿ.ಡಿ.ಕುಂಬಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

-1ಕೆಡಿವಿಜಿ6.ಜೆಪಿಜಿ: ಐ.ಕೆ.ರಿಯಾ.

-1ಕೆಡಿವಿಜಿ7.ಜೆಪಿಜಿ: ಪ್ರೊ.ಎಸ್.ಆರ್.ನಿರಂಜನ.

-1ಕೆಡಿವಿಜಿ8: ಕಾಗಿನೆಲೆ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ.

-1ಕೆಡಿವಿಜಿ9: ಎಸ್.ಎ.ರವೀಂದ್ರನಾಥ, ಮಾಜಿ ಸಚಿವ