ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಭಾರಿ ಕುತೂಹಲ ಮೂಡಿಸಿದ್ದ ರಾಜ್ಯದ ಪ್ರತಿಷ್ಠಿತ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ನಿಗದಿಪಡಿಸಿದ್ದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆರ್.ಟಿ. ದ್ಯಾವೇಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶ್ ಚೌಡುವಳ್ಳಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.ನಗರದ ಮಲೆನಾಡು ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಎಂಟಿಇಎಸ್ ಸಂಸ್ಥೆಯ ಅಧ್ಯಕ್ಷ ಸ್ಥಾನದ ಚುನಾವಣೆಯನ್ನು ಜಿ.ಎಲ್ ಮುದ್ದೇಗೌಡರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಅಧ್ಯಕ್ಷ ಸ್ಥಾನದ ನೇರ ಸ್ಪರ್ಧಿ ಆರ್.ಟಿ. ದ್ಯಾವೇಗೌಡ ವಿರುದ್ಧ ಯಾವುದೇ ಅಭ್ಯರ್ಥಿ ನಾಮಪತ್ರ ಸಲ್ಲಿಸದೆ ಹಿನ್ನೆಲೆಯಲ್ಲಿ ದ್ಯಾವೇಗೌಡರನ್ನು ೨೦ ನಿರ್ದೇಶಕರುಗಳ ಸಮ್ಮುಖದಲ್ಲಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಎಂಟಿಇಎಸ್ ಸಂಸ್ಥೆಯಲ್ಲಿ ೨೪ ನಿರ್ದೇಶಕರುಗಳಿದ್ದು, ನಾಲ್ವರು ಗೈರಾಗಿದ್ದು ಉಳಿದ ೨೦ ನಿರ್ದೇಶಕರುಗಳು ಆರ್.ಟಿ. ದ್ಯಾವೇಗೌಡರಿಗೆ ಬೆಂಬಲ ಸೂಚಿಸಿ ಅಧ್ಯಕ್ಷರಾಗಿ ಆಯ್ಕೆ ಮಾಡಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಯಾಗಿ ಜಗದಿಶ್ ಚೌಡುವಳ್ಳಿ, ಉಪಾಧ್ಯಕ್ಷರಾಗಿ ಗುರುದೇವ್, ಚೌಡುವಳ್ಳೀ ಪುಟ್ಟರಾಜು, ಗುರಪ್ಪ, ಖಜಾಂಚಿಯಾಗಿ ಎಚ್.ಡಿ. ಪಾರ್ಶ್ವನಾಥ್, ಜಂಟಿ ಕಾರ್ಯ ದರ್ಶಿಯಾಗಿ ಜಿ.ಆರ್. ಶ್ರೀನಿವಾಸ್ ಅವರನ್ನು ಒಮ್ಮತದ ಬೆಂಬಲದೊಂದಿಗೆ ಆಯ್ಕೆ ಮಾಡಲಾಯಿತು. ಮುನ್ನೆಚರಿಕ ಕ್ರಮವಾಗಿ ಪ್ರತಿ ನಿರ್ದೇಶಕರಿಗೂ ಖಾಸಗಿ ಅಂಗರಕ್ಷಕರನ್ನು ನೇಮಕ ಮಾಡಲಾಗಿತ್ತು. ಇದೇ ವೇಳೆ ನೂತನ ಅಧ್ಯಕ್ಷ ಆರ್.ಟಿ. ದ್ಯಾವೇಗೌಡ ಮಾತ ನಾಡಿ, ನಿಕಟಪೂರ್ವ ಅಧ್ಯಕ್ಷರಾದ ಅಶೋಕ್ ಹಾರನಹಳ್ಳಿ ಅವರು, ನನ್ನನ್ನು ಗೌರವ ಕಾರ್ಯದರ್ಶಿಯಾಗಿ ಸುಮಾರು ೧೨ ವರ್ಷ ಅವರ ನೇತೃತ್ವದಲ್ಲಿ ಕೆಲಸ ಮಾಡಲು ಅನುವು ಮಾಡಿಕೊಟ್ಟರು. ನನಗೆ ಸಂಸ್ಥೆಯ ಹೆಚ್ಚಿನ ಜವಾಬ್ದಾರಿಯನ್ನು ನೀಡಿ ಸಂಸ್ಥೆಯ ಕುಂದುಕೊರತೆ, ಅನುಭವಗಳನ್ನು ತಿಳಿದುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದರು. ಆದ್ದರಿಂದ ಅವರಿಗೆ ಮೊದಲ ಪ್ರಣಾಮವನ್ನು ಸಲ್ಲಿಸುತ್ತೇನೆ ಎಂದರು. ಪ್ರತಿಷ್ಠಿತ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಚುನಾಯಿತನಾಗಿದ್ದೇನೆ. ನನ್ನ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಅತ್ಯಂತ ಪ್ರಮಾಣಿಕ, ಪಾರದರ್ಶಕವಾಗಿ ಜನ ಮೆಚ್ಚುವ ರೀತಿಯಲ್ಲಿ ಕೆಲಸವನ್ನು ನನ್ನ ತಂಡದೊಂದಿಗೆ ಸೇರಿ ಕೆಲಸ ಮಾಡುವುದಾಗಿ ಅಭಿಪ್ರಾಯ ಪಟ್ಟರು. ಕಾಲೇಜಿನಲ್ಲಿ ಅನೇಕ ಕುಂದುಕೊರತೆ ಇದೆ. ನಮ್ಮ ತಂಡದೊಂದಿಗೆ ಚರ್ಚಿಸಿ ಕಾಲೇಜಿನ ಅಭಿವೃದ್ಧಿಗೆ ಎಲ್ಲಾ ಶ್ರಮಿಸುತ್ತೇವೆ ಎಂದರು. ಸದಸ್ಯರು, ಸಂಸ್ಥೆಯ ಆಡಳಿತ ಮಂಡಳಿ, ಸಹೋದ್ಯೋಗಿಗಳು ಹಾಗೂ ನಿರ್ದೇಶಕರುಗಳಿಗೆ ಕೃತಜ್ಞತೆ ಸಲ್ಲಿಸದರು.
ನೂತನ ಪ್ರಧಾನ ಕಾರ್ಯದರ್ಶಿ ಜಗದೀಶ್ ಚೌಡುವಳ್ಳಿ ಮಾತನಾಡಿ, ಎಂಟಿಇಎಸ್ ಚುನಾವಣೆ ಊಹಾಪೋಹಕ್ಕೆ ಕಾರಣವಾಗಿತ್ತು. ಇದರಲ್ಲಿ ಬಣ ವಿಂಗಡಣೆ ಮಾಡಿ ಕೆಟ್ಟ ಹೆಸರು ತರುವುದಕ್ಕಾಗಿ ಕೆಲ ಪತ್ರಿಕೆಗಳಿಗೆ ತಪ್ಪಾದ ಮಾಹಿತಿ ನೀಡುತ್ತಿದ್ದರು. ಈ ರೀತಿಯ ವರ್ತನೆ ಖಂಡನೀಯ. ಇದು ವಿದ್ಯಾಸಂಸ್ಥೆಯಾಗಿದ್ದು ಮಲೆನಾಡು ಕಾಲೇಜು ಶೈಕ್ಷಣಿಕವಾಗಿ ೨ನೇ ಸ್ಥಾನದಲ್ಲಿದ್ದು ಮೊದಲ ಸ್ಥಾನಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಕೆಲಸ ಮಾಡುವ ಭರವಸೆ ನೀಡಿದರು. ಕಾಲೇಜಿಗೆ ಕೆಟ್ಟ ಹೆಸರು ಬರುವ ರೀತಿಯಲ್ಲಿ ೫೦ ಲಕ್ಷ ೧ ಕೋಟಿ ಕೊಡುತ್ತಾರೆ ಎನ್ನುವ ವದಂತಿಗಳು ಹರಿದಾಡುತ್ತಿತ್ತು. ಆದರೆ ಆ ರೀತಿಯ ಊಹಾ ಪೋಹಗಳಿಗೆ ಇಂದು ತೆರೆ ಬಿದ್ದಿದೆ. ೨೪ ನಿರ್ದೇಶಕರ ಪೈಕಿ ಸುಮಾರು ೨೦ ಮಂದಿ ಹಾಜರಾಗಿ ಒಮ್ಮತದಿಂದ ಸರ್ವಾನುಮತದಿಂದ ನಮ್ಮನ್ನು ಆಯ್ಕೆ ಮಾಡಿದ್ದಾರೆ. ಜಾತ್ಯತೀತವಾಗಿ ಸಂಸ್ಥೆಯನ್ನು ಮುನ್ನಡೆಸುವ ಕೆಲಸ ಮಾಡಲಾಗುವುದು ಎಂದರು.ನಿಕಟಪೂರ್ವ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಅವರ ಅವಧಿಯಲ್ಲಿ ಉತ್ತಮ ಕೆಲಸ ನಿರ್ವಹಿಸಿದ್ದು, ಕಾಲೇಜಿಗೆ ರಾಜ್ಯದಲ್ಲಿ ಉತ್ತಮ ಹೆಸರು ಬರಲು ಅವರು ಪ್ರಮುಖ ಕಾರಣರಾಗಿದ್ದಾರೆ ಎಂದ ಅವರು, ನಮಗೂ ಮಾರ್ಗದರ್ಶನವನ್ನು ನೀಡಿದ್ದಾರೆ. ಈ ಕಾಲೇಜಿನ ಏಳಿಗೆಗೆ ಮುಂದೆಯೂ ಅಶೋಕ್ ಹಾರನಹಳ್ಳಿ ಅವರು ಕೈಜೋಡಿಸುತ್ತಾರೆ ಎಂಬ ಭರವಸೆಯನ್ನು ಹೊಂದಿದ್ದೇವೆ ಎಂದರು. ಸರ್ವ ಸಮ್ಮತವಾಗಿ ಆಯ್ಕೆ ಮಾಡಿದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.
ಇದೇ ವೇಳೆ ನಿರ್ದೇಶಕರುಗಳಾದ ಜಿ.ಟಿ. ಕುಮಾರ್, ಹೇಮಂತ್ ಕುಮಾರ್, ಶಾಂತಿಗ್ರಾಮ ಶಂಕರ್, ಸುರೇಶ್ ಬಸಟಿಕೊಪ್ಪಲು, ರಾಜಶೇಖರ್, ಬೂವನಹಳ್ಳಿ ಶ್ರೀನಿವಾಸ್, ನಾಗರಾಜ್ ನಾಗೇಂದ್ರಯ್ಯ, ಅರ್ಜುನ್, ಗುರುದೇವ್ ಡಾ. ಅರವಿಂದ್ ಸೇರಿದಂತೆ ಇನ್ನಿತರರು ಇದ್ದರು.*ಬಾಕ್ಸ್ : ಅಶೋಕ್ ಹಾರನಹಳ್ಳಿ ಗೈರು:ಆರ್.ಟಿ. ದ್ಯಾವೇಗೌಡ ವಿರೋದ ಬಣದ ನಿಕಟಪೂರ್ವ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಅವರು ನಿರ್ದೇಶಕ ಡಾ. ಅರವಿಂದ್ ಅವರನ್ನು ಅಧ್ಯಕ್ಷ ಸ್ಥಾನದ ಸ್ಪರ್ಧಿ ಎಂದು ಘೋಷಣೆ ಮಾಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಆದ ಬದಲಾವಣೆಯಿಂದ ಡಾ. ಅರವಿಂದ್ ನಾಮಪತ್ರ ಸಲ್ಲಿಸದೆ ಚುನಾವಣಾ ಕಣದಿಂದ ಹಿಂದುಳಿದರು. ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಂದು ಡಾ. ಅರವಿಂದ ಘೋಷಣೆ ಮಾಡಿದ್ದ ಅಶೋಕ್ ಹಾರನಹಳ್ಳಿ ಸೇರಿದಂತೆ ಅವರ ಬಣದ ನಾಲ್ವರು ನಿರ್ದೇಶಕರು ಚುನಾವಣೆ ಪ್ರಕ್ರಿಯೆಗೆ ಗೈರಾಗಿದ್ದರು.