ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ತಲಾ 10 ಬೆಡ್‌ಗಳ ಡೇ ಕೇರ್ ಕಿಮೋಥೆರಪಿ ಸೆಂಟರ್ ತೆರೆಯಲಾಗುತ್ತಿದ್ದು, ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಆರೋಗ್ಯ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.ನಗರದ ಲೇಡಿಗೋಶನ್ ಆಸ್ಪತ್ರೆಯಲ್ಲಿ ಶನಿವಾರ ವೆನ್ಲಾಕ್ ಜಿಲ್ಲಾಸ್ಪತ್ರೆ ಮತ್ತು ಲೇಡಿಗೋಶನ್ ಆಸ್ಪತ್ರೆಗಳ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಡೇ ಕೇರ್ ಕಿಮೋಥೆರಪಿ ಸೆಂಟರ್‌ಗಳಿಗೆ ಮುಂದಿನ ತಿಂಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಈ ಕೇಂದ್ರಗಳು ಆರಂಭವಾದ ಬಳಿಕ ಬಡ ರೋಗಿಗಳು ದುಬಾರಿ ಕಿಮೋಥೆರಪಿ ಚಿಕಿತ್ಸೆಗಾಗಿ ದೂರದೂರುಗಳಿಗೆ ಅಲೆದಾಡುವುದು ತಪ್ಪಲಿದೆ ಎಂದರು.ದ.ಕ. ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಈ ಕೇಂದ್ರ ಆರಂಭಿಸಲು ಬೇಕಾದ ಎಲ್ಲ ಸೌಲಭ್ಯಗಳನ್ನು ಸಜ್ಜುಗೊಳಿಸಲಾಗಿದೆ. ಕಿಮೋಥೆರಪಿಗೆ ನುರಿತ ತಜ್ಞರ ಅಗತ್ಯ ಇರುವುದರಿಂದ ಪ್ರತಿ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುವುದು. ಮಂಗಳೂರಿನಲ್ಲಿ ಯೇನೆಪೋಯ ಆಸ್ಪತ್ರೆ ಜತೆ ಒಪ್ಪಂದ ಮಾಡಲಾಗಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.ನೂತನ ಒಪಿಡಿ ಬ್ಲಾಕ್:
ವೆನ್ಲಾಕ್‌ನಲ್ಲಿ ನೂತನ ಒಪಿಡಿ ಬ್ಲಾಕ್ ಬೇಡಿಕೆಯಿದ್ದು, 2017ರ ಒಪ್ಪಂದದ ಪ್ರಕಾರ ಕೆಎಂಸಿ ಸಂಸ್ಥೆಯು ಇದನ್ನು ಮಾಡಬೇಕಾಗಿದೆ. ಈ ಕುರಿತು ಕೆಎಂಸಿ ಆಡಳಿತದ ಜತೆ ಮಾತುಕತೆ ನಡೆಸಲಿದ್ದೇನೆ ಎಂದ ದಿನೇಶ್ ಗುಂಡೂರಾವ್, ಸುಮಾರು 1 ಕೋಟಿ ರು. ವೆಚ್ಚದ ಇಂಟೆಗ್ರೇಟೆಡ್ ಪಬ್ಲಿಕ್ ಹೆಲ್ತ್‌ಕೇರ್ ಲ್ಯಾಬ್ ಕಾಮಗಾರಿಯನ್ನು ಶೀಘ್ರ ಆರಂಭಿಸಲಾಗುವುದು. ಅದೇ ರೀತಿ ವೆನ್ಲಾಕ್‌ನಲ್ಲಿ 24 ಕೋಟಿ ರು. ವೆಚ್ಚದ ಕ್ರಿಟಿಕಲ್ ಕೇರ್ ಬ್ಲಾಕ್ ಕಟ್ಟಡ ಕಾಮಗಾರಿಯನ್ನೂ ಶೀಘ್ರ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ, ಲೇಡಿಗೋಶನ್ ಆಸ್ಪತ್ರೆ ಅಧೀಕ್ಷಕ ಡಾ. ದುರ್ಗಾಪ್ರಸಾದ್, ವೆನ್ಲಾಕ್ ಆಸ್ಪತ್ರೆ ಅಧೀಕ್ಷಕ ಡಾ. ಶಿವಕುಮಾರ್ ಇದ್ದರು.
ಪೊಳಲಿ ಸೇತುವೆ 6.10 ಕೋಟಿ, ಉಳಾಯಿಬೆಟ್ಟು 5 ಕೋಟಿ ರೂ.ನಲ್ಲಿ ದುರಸ್ತಿಶಿಥಿಲಗೊಂಡಿರುವ ಅಡ್ಡೂರು- ಪೊಳಲಿ ಸೇತುವೆಯನ್ನು 6.10 ಕೋಟಿ ರು. ವೆಚ್ಚದಲ್ಲಿ ಹಾಗೂ ಉಳಾಯಿಬೆಟ್ಟು ಸೇತುವೆಯನ್ನು 5 ಕೋಟಿ ರು.ಗಳಲ್ಲಿ ದುರಸ್ತಿಗೊಳಿಸುವ ಬಗ್ಗೆ ಅಂದಾಜು ಪಟ್ಟಿ ತಯಾರಿಸಲಾಗಿದೆ. ಈ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಜತೆಗೆ ಚರ್ಚಿಸಲಾಗಿದ್ದು, ಶೀಘ್ರ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಪೊಳಲಿಯಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಸುಮಾರು 60 ಕೋಟಿ ರು. ಅಗತ್ಯವಿದ್ದು, ಇದಕ್ಕೂ ಮುಂದಿನ ದಿನಗಳಲ್ಲಿ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.