ಕೂಸಿನ ಮನೆ: ವರ್ಷಪೂರ್ತಿ ಕಾರ್ಯ ನಿರ್ವಹಣೆಗೆ ಸೂಚನೆ

| Published : Nov 25 2024, 01:00 AM IST

ಸಾರಾಂಶ

ಕೂಸಿನ ಮನೆಯಲ್ಲಿಯೇ ಅಡುಗೆಮನೆ ಇರುವುದು ಮತ್ತು ಮಕ್ಕಳ ಸ್ನೇಹಿ ಶೌಚಾಲಯ ಇಲ್ಲದಿರುವುದು ಕಂಡು ಸಿಡಿಮಿಡಿಕೊಂಡರು.

ಕುರುಗೋಡು: ಬೆಂಗಳೂರಿನ ಮೊಬೈಲ್ ಕ್ರಸ್ ಸಂಸ್ಥೆಯ ಭವಾನಿ ಮತ್ತು ತಂಡ ತಾಲೂಕಿನ ಕಲ್ಲುಕಂಭ ಮತ್ತು ಎಚ್. ವೀರಾಪುರ ಗ್ರಾಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನರೇಗಾ ಕೂಸಿನ ಮನೆಗೆ ಗುರುವಾರ ಭೇಟಿ ನೀಡಿ ಕಾರ್ಯ ಚಟುವಟಿಕೆ ಪರಿಶೀಲನೆ ನಡೆಸಿತು.ಕೂಸಿನ ಮನೆಯಲ್ಲಿಯೇ ಅಡುಗೆಮನೆ ಇರುವುದು ಮತ್ತು ಮಕ್ಕಳ ಸ್ನೇಹಿ ಶೌಚಾಲಯ ಇಲ್ಲದಿರುವುದು ಕಂಡು ಸಿಡಿಮಿಡಿಕೊಂಡರು.

ಪ್ರತ್ಯೇಕ ಅಡುಗೆಮನೆ ಮತ್ತು ಮಕ್ಕಳಸ್ನೇಹಿ ಶೌಚಾಲಯ ನಿರ್ಮಾಣಕ್ಕೆ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

ಕೂಸಿನ ಮನೆ ಕೇವಲ ಮೂರು ತಿಂಗಳು ಮಾತ್ರ ಕಾರ್ಯ ನಿರ್ವಹಿಸುವುದರಿಂದ ಪ್ರಯೋಜನವಿಲ್ಲ. ವರ್ಷದ ೧೨ ತಿಂಗಳು ಕಾರ್ಯ ನಿರ್ವಹಿಸಬೇಕು. ಮನೆಯಲ್ಲಿ ಜರುಗುವ ಕಾರ್ಯ ಚಟುವಟಿಕೆ, ವಿತರಿಸುವ ಪೌಷ್ಟಿಕ ಆಹಾರ ಕುರಿತು ಪ್ರತಿನಿತ್ಯ ಪುಸ್ತಕಗಳಲ್ಲಿ ದಾಖಲು ಮಾಡಬೇಕು ಎಂದು ಸೂಚಿಸಿದರು.

ಮಕ್ಕಳ ಶುಚಿತ್ವಕ್ಕೆ ಹೆಚ್ಚು ಮಹತ್ವ ನೀಡಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು.

ಕೂಸಿನ ಮನೆಯಲ್ಲಿ ಕಾರ್ಯ ನಿರ್ವಹಿಸುವ ಕೇರ್ ಟೇಕರ್ಸ್‌ಗೆ ಮೂರು ತಿಂಗಳು ಮಾತ್ರ ಪ್ರೋತ್ಸಾಹಧನ ನೀಡುತ್ತಿದ್ದಾರೆ. ವರ್ಷದ ೧೨ ತಿಂಗಳು ಕೊಡಬೇಕು. ಈಗ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಕಾಯಂಗೊಳಿಸಬೇಕು ಎಂದು ತಾಲೂಕಿನ ಕಲ್ಲುಕಂಭ ಗ್ರಾಮದ ಕೂಸಿನಮನೆ ಕೇರ್ ಟೇಕರ್ಸ್ ಉಮಾದೇವಿ ಮನವಿ ಮಾಡಿದರು.

ತಾಪಂ ಇಒ ಕೆ.ವಿ. ನಿರ್ಮಲಾ, ಕಚೇರಿ ವ್ಯವಸ್ಥಾಪಕ ಅನಿಲ್, ಗ್ರಾಪಂ ಅಧ್ಯಕ್ಷ ಬಸವರಾಜ, ಅಭಿವೃದ್ಧಿ ಅಧಿಕಾರಿ ದೇವರಾಜ್, ಐಇಸಿ ಸಂಯೋಜಕ ಚಂದ್ರಶೇಖರ, ಅಂಗನವಾಡಿ ಮೇಲ್ವಿಚಾರಕಿ ಎರೆಮ್ಮ ಮತ್ತು ಜ್ಯೋತಿ ಇದ್ದರು.