ಪೇಯ್ಡ್‌ ಪಾರ್ಕಿಂಗ್‌ ಹೆಸರಲ್ಲಿ ಜನರಿಂದ ಹಗಲು ದರೋಡೆ

| Published : Jul 13 2025, 01:18 AM IST

ಪೇಯ್ಡ್‌ ಪಾರ್ಕಿಂಗ್‌ ಹೆಸರಲ್ಲಿ ಜನರಿಂದ ಹಗಲು ದರೋಡೆ
Share this Article
  • FB
  • TW
  • Linkdin
  • Email

ಸಾರಾಂಶ

ದ್ವಿಚಕ್ರ ವಾಹನಕ್ಕೆ ₹5 ನಿಗದಿ ಮಾಡಿದ್ದರೆ ₹10 ಮತ್ತು ನಾಲ್ಕು ಚಕ್ರದ ವಾಹನಗಳಿಗೆ ₹10 ನಿಗದಿ ಮಾಡಿದ್ದರೆ ₹20 ವಸೂಲಿ ಮಾಡಲಾಗುತ್ತಿದೆ. ವಿಪರ್ಯಾಸವೆಂದರ ನಿಗದಿಗಿಂತ ಹೆಚ್ಚು ಹಣ ವಸೂಲಿ ಮಾಡಿದರೆ ಗುತ್ತಿಗೆ ರದ್ದಾಗುತ್ತದೆ ಎಂದು ಟೆಂಡರ್ ಪ್ರತಿಯಲ್ಲೇ ಕರಾರು ಇದ್ದು, ನಿಗದಿಗಿಂತ ಹೆಚ್ಚು ಶುಲ್ಕ ವಸೂಲಿ ಮಾಡುತ್ತಿದ್ದರೂ ಪಾಲಿಕೆ ಕಣ್ಮುಚ್ಚಿ ಕುಳಿತಿದೆ.

ಮಹಮ್ಮದ ರಫೀಕ್ ಬೀಳಗಿ

ಹುಬ್ಬಳ್ಳಿ: ನಗರದಲ್ಲಿ ವಾಹನ ದಟ್ಟಣೆ ಮತ್ತು ಸುವ್ಯವಸ್ಥಿತ ಪಾರ್ಕಿಂಗ್‌ಗಾಗಿ ಆರಂಭಿಸಿದ ಪೇಡ್ ಪಾರ್ಕಿಂಗ್ ನಲ್ಲಿ ಜನರಿಂದ ಹಗಲು ದರೋಡೆ ನಡೆದಿದೆ. ಪಾರ್ಕಿಂಗ್‌ ಟೆಂಡರ್‌ ಪ್ರತಿಯಲ್ಲಿ ನಮೂದಿಸಿದ ಶುಲ್ಕಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಿ ಸಾರ್ವಜನಿಕರಿಂದ ಹಣ ದೋಚುತ್ತಿರುವುದಲ್ಲದೆ ಪಾಲಿಕೆ ಲಕ್ಷಾಂತರ ನಷ್ಟವುಂಟಾಗುತ್ತಿದೆ.

ದ್ವಿಚಕ್ರ ವಾಹನಕ್ಕೆ ₹5 ನಿಗದಿ ಮಾಡಿದ್ದರೆ ₹10 ಮತ್ತು ನಾಲ್ಕು ಚಕ್ರದ ವಾಹನಗಳಿಗೆ ₹10 ನಿಗದಿ ಮಾಡಿದ್ದರೆ ₹20 ವಸೂಲಿ ಮಾಡಲಾಗುತ್ತಿದೆ. ವಿಪರ್ಯಾಸವೆಂದರ ನಿಗದಿಗಿಂತ ಹೆಚ್ಚು ಹಣ ವಸೂಲಿ ಮಾಡಿದರೆ ಗುತ್ತಿಗೆ ರದ್ದಾಗುತ್ತದೆ ಎಂದು ಟೆಂಡರ್ ಪ್ರತಿಯಲ್ಲೇ ಕರಾರು ಇದ್ದು, ನಿಗದಿಗಿಂತ ಹೆಚ್ಚು ಶುಲ್ಕ ವಸೂಲಿ ಮಾಡುತ್ತಿದ್ದರೂ ಪಾಲಿಕೆ ಕಣ್ಮುಚ್ಚಿ ಕುಳಿತಿದೆ.

ಇಲ್ಲಿನ ಕೊಪ್ಪಿಕರ ರಸ್ತೆ, ಕೊಯಿನ್ ರೋಡ್, ಬ್ರಾಡ್ ವೇ, ದುರ್ಗದ ಬೈಲ್, ಬೆಳಗಾಂ ಗಲ್ಲಿ, ಜವಳಿ ಸಾಲ, ಪೆಂಡಾರ ಓಣಿ, ಕಾಳಮ್ಮನ ಅಗಸಿ, ಕುಬುಸದ ಗಲ್ಲಿ, ಮೂರು ಸಾವಿರ ಮಠ. ಹರಪನಹಳ್ಳಿ ರೋಡ್, ವಿಕ್ಟೋರಿಯಾ ರಸ್ತೆ, ಅಂಚಟಗೇರಿ ಓಣಿಯಲ್ಲಿ ಪೇಡ್ ಪಾರ್ಕಿಂಗ್ ಜಾರಿ ತರಲಾಗಿದೆ.

ಇಲ್ಲಿ ಕಡಿಮೆ ವಾಹನ ದಟ್ಟಣೆ ಇರುವ, ಹೆಚ್ಚಿನ ವಾಹನ ದಟ್ಟಣೆ ಇರುವ ಮತ್ತು ಸಾಮಾನ್ಯ ವಾಹನ ದಟ್ಟಣೆ ಸಮಯ ಗುರುತಿಸಿ ಶುಲ್ಕ ನಿಗದಿ ಮಾಡಲಾಗಿದೆ.

ಬೆಳಗಿನ 7ರಿಂದ 11 ಮತ್ತು ಮಧ್ಯಾಹ್ನ 1ರಿಂದ 3 ಗಂಟೆ ರಾತ್ರಿ 7ರಿಂದ 10ರ ವರೆಗೆ ದ್ವಿಚಕ್ರ ವಾಹನಗಳಿಗೆ ₹5, ನಾಲ್ಕು ಚಕ್ರದ ವಾಹನಗಳಿಗೆ ₹10 ನಿಗದಿ ಮಾಡಲಾಗಿದೆ. ಇನ್ನು ಬೆಳಗ್ಗೆ 11ರಿಂದ ಮಧ್ಯಾಹ್ನ 1, ಮಧ್ಯಾಹ್ನ 3 ರಿಂದ 5ರ ವರೆಗೆ ದ್ವಿಚಕ್ರ ವಾಹನಗಳಿಗೆ ₹7.50 ರು. ಮತ್ತು ನಾಲ್ಕು ಚಕ್ರದ ವಾಹನಗಳಿಗೆ ₹15 ನಿಗದಿ ಮಾಡಲಾಗಿದೆ. ಇನ್ನು ಹೆಚ್ಚು ವಾಹನ ದಟ್ಟಣೆ ಇರುವ ಸಮಯ ಅಂದರೆ ಸಂಜೆ 5ರಿಂದ 7ರ ವರೆಗೆ ದ್ವಿಚಕ್ರ ವಾಹನಗಳಿಗೆ ₹10 ಮತ್ತು ನಾಲ್ಕು ಚಕ್ರದ ವಾಹನಗಳಿಗೆ ₹20 ನಿಗದಿ ಮಾಡಲಾಗಿದೆ.

ಈ ದರ ಕೇವಲ ಆದೇಶಕ್ಕೆ ಸೀಮಿತವಾಗಿದೆ. ಇಲ್ಲಿ ಯಾವುದೇ ವೇಳೆ ವಾಹನ ನಿಲ್ಲಿಸಿದರೂ ಗುತ್ತಿಗೆ ಪಡೆದವರು ದ್ವಿಚಕ್ರವಾಹನಗಳಿಗೆ ₹10 ಮತ್ತು ನಾಲ್ಕು ಚಕ್ರದ ವಾಹನಗಳಿಗೆ ₹20 ಶುಲ್ಕ ಪಡೆಯುತ್ತಿದ್ದಾರೆ. ಈ ಕುರಿತಂತೆ ಇಲ್ಲಿನ ಸಿಬ್ಬಂದಿಗೆ ಕೇಳಿದರೆ ಅದು ನಮಗೆ ಗೊತ್ತಿಲ್ಲ. ನಮ್ಮ ಮಾಲೀಕರು ಬೈಕ್ ಗಳಿಗೆ ₹10 ಮತ್ತು ಕಾರುಗಳಿಗೆ ₹20 ಪಡೆಯುವಂತೆ ಹೇಳಿದ್ದಾರೆ. ಹೀಗಾಗಿ, ನಾವೂ ಅಷ್ಟೇ ಶುಲ್ಕ ಪಡೆಯುತ್ತಿದ್ದೇವೆ ಎನ್ನುತ್ತಾರೆ.

ಆದೇಶ ಗೊತ್ತಿಲ್ಲದ ಜನ ಅಲ್ಲಿನ ಸಿಬ್ಬಂದಿ ಕೇಳಿದಷ್ಟು ದುಡ್ಡು ಕೊಟ್ಟು ಹೋಗುವಂತಾಗಿದೆ. ಈ ಹಣ ಇತ್ತ ಪಾಲಿಕೆಗೆ ಹೋಗದೆ ಗುತ್ತಿಗೆದಾರರ ಜೇಬು ತುಂಬಿಸುತ್ತಿದೆ. ಇನ್ನು ಪಾಲಿಕೆಗೂ ಲಕ್ಷಾಂತರ ರುಪಾಯಿ ನಷ್ಟವಾಗುತ್ತಿದೆ.

ತಾಸಿಗೆ ದರ ನಿಗದಿಗೆ ಆಕ್ರೋಶ: ಇಲ್ಲಿನ ಮಾರುಕಟ್ಟೆಗೆ ಹೆಚ್ಚಾಗಿ ಸ್ಥಳಿಯರೇ ಪ್ರತಿನಿತ್ಯ ಬರುತ್ತಾರೆ. ಪ್ರತಿದಿನವೂ ₹10 ಕೊಡುವುದು ಹೊರೆಯಾಗುತ್ತದೆ. 5ರಿಂದ 10 ನಿಮಿಷ ನಿಲ್ಲಿಸಿದರೂ ಪೂರ್ತಿ ಹಣ ನೀಡಬೇಕು. ಹೀಗಾಗಿ, ಪಾರ್ಕಿಂಗ್ ಶುಲ್ಕ ಇಳಿಸಬೇಕು ಎಂದು ವಾಹನ ಸವಾರರು ಆಗ್ರಹಿಸಿದ್ದಾರೆ.

50 ಪೈಸೆ ನಿಗದಿ ಯಾಕೆ?: ₹10 ಮತ್ತು ₹20 ನಿಗದಿ ಮಾಡಿರುವುದೇನೋ ಸರಿ. ಆದರೆ, ಮಾರುಕಟ್ಟೆಯಲ್ಲಿ ಈಗ 50 ಪೈಸೆ ಚಲಾವಣೆಯಲ್ಲಿಲ್ಲ. ಹೀಗಿದ್ದರೂ ಬೈಕ್‌ ನಿಲುಗಡೆಗೆ ₹7.50 ಪೈಸೆ ನಿಗದಿ ಮಾಡಿರುವುದು ಏಕೆ ಎನ್ನುವ ಪ್ರಶ್ನೆ ಜನರನ್ನು ಕಾಡುತ್ತಿದೆ. ಹಾಗೊಂದು ಟೆಂಡರ್ ಪ್ರಕಾರ ಶುಲ್ಕ ವಸೂಲಿ ಮಾಡಿದರೆ ನಗದು ಕೊಡುವವರು ಜನ ₹7 ಕೊಡಬೇಕು ಇಲ್ಲವೇ ₹8 ಕೊಡಬೇಕು. ₹7 ಕೊಟ್ಟರೆ ಅಲ್ಲಿನ ಸಿಬ್ಬಂದಿ ಪಡೆಯಲ್ಲ. ₹8 ಕೊಟ್ಟರೆ ಗುತ್ತಿಗೆದಾರರಿಗೆ ಲಾಭ. ಇಲ್ಲೂ ಪಾಲಿಕೆಗೆ ಹಾನಿಯೇ.

ಮಾಲೀಕರು ಹೇಳಿದಂತೆ ದ್ವಿಚಕ್ರ ವಾಹನಗಳಿಗೆ ಒಂದು ಗಂಟೆಗೆ ₹10 ಮತ್ತು ನಾಲ್ಕು ಚಕ್ರದ ವಾಹನಗಳಿಗೆ ₹20 ಶುಲ್ಕ ಪಡೆಯುತ್ತಿದ್ದೇವೆ. ಒಂದೂಂದು ಸಮಯದಲ್ಲಿ ಒಂದೂಂದು ರೀತಿಯ ಶುಲ್ಕ ಪಡೆಯುವ ಕುರಿತಂತೆ ನಮಗೆ ಮಾಹಿತಿ ಇಲ್ಲ ಎಂದು ಪಾರ್ಕಿಂಗ್ ಶುಲ್ಕ ಪಡೆಯುವ ಸಿಬ್ಬಂದಿ ಹೇಳಿದರು.

ನಿಯಮ ಮೀರಿ ವಾಹನಗಳ ಪಾರ್ಕಿಂಗ್‌ಗೆ ಹಣ ವಸೂಲಿ ಮಾಡುತ್ತಿರುವುದು ಕಂಡುಬಂದರೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು. ಹಾಗೊಂದು ವೇಳೆ ಹೆಚ್ಚಿನ ಹಣ ಪಡೆಯುತ್ತಿದ್ದರೆ ನಿಯಮದಂತೆ ಟೆಂಡರ್‌ ರದ್ದು ಮಾಡಿ ಬೇರೆಯವರಿಗೆ ಟೆಂಡರ್ ನೀಡಲಾಗುವುದು ಎಂದು ಪಾಲಿಕೆ ಮೇಯರ್‌ ಜ್ಯೋತಿ ಪಾಟೀಲ ಹೇಳಿದರು.