ಚಿಕ್ಕಮಗಳೂರುಕಳೆದ 25 ವರ್ಷದಿಂದ ನನೆಗುದಿಗೆ ಬಿದ್ದಿರುವ ಚಿಕ್ಕಮಗಳೂರು ತಾಲೂಕಿನ ಮಳಲೂರು ಏತನೀರಾವರಿ ಯೋಜನೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಭನ್ವರ್‌ ಸಿಂಗ್ ಮೀನಾ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ರೈತರು ಮತ್ತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕಳೆದ 25 ವರ್ಷದಿಂದ ನನೆಗುದಿಗೆ ಬಿದ್ದಿರುವ ಚಿಕ್ಕಮಗಳೂರು ತಾಲೂಕಿನ ಮಳಲೂರು ಏತನೀರಾವರಿ ಯೋಜನೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಭನ್ವರ್‌ ಸಿಂಗ್ ಮೀನಾ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ರೈತರು ಮತ್ತು ಅಧಿಕಾರಿಗಳಿಂದ ಮಾಹಿತಿ ಪಡೆದರು.

1996ರಲ್ಲಿ ಆರಂಭವಾಗಿದ್ದ ಮಳಲೂರು ಏತ ನೀರಾವರಿ ಯೋಜನೆಗೆ 2000ರಲ್ಲಿ ಶಂಕುಸ್ಥಾಪನೆ ಮಾಡಿ ಪಂಪ್‌ ಹೌಸ್‌ , ಕೊಳವೆಗಳ ಅಳವಡಿಕೆ ಸೇರಿದಂತೆ ಬಹುತೇಕ ಕಾಮಗಾರಿ ಪೂರ್ಣಗೊಳಿಸಲಾಗಿತ್ತು. ಅಷ್ಟೆಲ್ಲಾ ಕಾಮಗಾರಿ ಮಾಡಿದ ಬಳಿಕ ವಿವಿಧ ಕಾರಣ ನೀಡಿ, ಕನಿಷ್ಠ ಯೋಜನೆಗೆ ಪ್ರಾಯೋಗಿಕ ಚಾಲನೆ ನೀಡದೇ ಸ್ಥಗಿತಗೊಳಿಸಲಾಗಿದೆ ಎಂದು ರೈತರು ದೂರಿದರು.

ಜಿಲ್ಲಾಧಿಕಾರಿ ಭನ್ವರ್‌ ಸಿಂಗ್‌ ಮೀನಾ ಬಿರಂಜಿ ಹಳ್ಳಕ್ಕೆ ನಿರ್ಮಾಣದ ಜಾಕ್‌ವೆಲ್‌, ಪಂಪ್ ಹೌಸ್‌ ಹಾಗೂ ಕೊಳವೆ ಮಾರ್ಗ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದ ಮಳಲೂರು ಏತನೀರಾವರಿ ಕಾಮಗಾರಿ ಪೂರ್ಣಗೊಳಿಸಲು ಕಾವೇರಿ ನೀರಾವರಿ ನಿಗಮದಿಂದ (ಸಿಎನ್‌ಎನ್‌ಎಲ್) ₹21.5 ಕೋಟಿ ವೆಚ್ಚದಲ್ಲಿ ನೂತನ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗಿದೆ ಎಂದರು.

ಯೋಜನೆ ಪೂರ್ಣಗೊಳಿಸಲು ರೈತರಿಂದ ತೀವ್ರ ಬೇಡಿಕೆ ಹಾಗೂ ಪ್ರತಿಭಟನೆ ನಡೆದಿದ್ದವು. ಈ ಕುರಿತು ಸೆ.29ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ರೈತರೊಂದಿಗೆ ಸಭೆ ನಡೆಸಲಾಗಿತ್ತು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗಷ್ಟೇ ವಾಸ್ತವ ಸ್ಥಿತಿ ಮತ್ತು ತಾಂತ್ರಿಕ ತೊಡಕು ಸ್ಪಷ್ಟವಾಗುತ್ತವೆ ಎಂಬ ಕಾರಣಕ್ಕೆ ಇಂದು ನೀರಾವರಿ ಮೂಲದಿಂದ ಆರಂಭಿಸಿ ಪೈಪ್‌ಲೈನ್ ಮಾರ್ಗದುದ್ದಕ್ಕೂ ವೀಕ್ಷಿಸಲಾಗುತ್ತಿದೆ ಎಂದು ಹೇಳಿದರು.

ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ₹21.5 ಕೋಟಿ ಮೊತ್ತದ ನೂತನ ಅಂದಾಜು ಪಟ್ಟಿ ಸಿದ್ಧಪಡಿಸ ಲಾಗಿದೆ. ಅರ್ಧಕ್ಕೆ ನಿಂತ ಪಂಪ್‌ಹೌಸ್ ನಿರ್ಮಾಣ ಮತ್ತು ಬಾಕಿ ಉಳಿದ ಸಿವಿಲ್ ಕೆಲಸ ಪೂರ್ಣ ಗೊಳಿಸುವುದು.

ಪೈಪ್‌ಲೈನ್ ದುರಸ್ತಿ: ಹಿಂದೆ ಅಳವಡಿಸಲಾದ ಪೈಪ್‌ಲೈನ್‌ನಲ್ಲಿ ಕಂಡುಬಂದ ಸೋರಿಕೆ ಹಾಗೂ ಲೋಪ ದೋಷ ಸರಿಪಡಿಸಿ. ವಿದ್ಯುತ್ ಸಂಪರ್ಕ ಕಲ್ಪಿಸಿ (ಎನರ್ಜೈಸೇಶನ್) ಪ್ರಾಯೋಗಿಕ ನೀರು ಪೂರೈಕೆ (ಟ್ರಯಲ್ ರನ್) ನಡೆಸುವುದು. ಯೋಜನೆಗೆ ಜಮೀನು ನೀಡಿದ ರೈತರಿಗೆ ನೀಡಬೇಕಾದ ಭೂಸ್ವಾಧೀನ ಪರಿಹಾರದ ಬೇಡಿಕೆ ಇತ್ಯರ್ಥ ಪಡಿಸುವುದು. ಉನ್ನತಾಧಿಕಾರಿಗಳಿಗೆ ವರದಿ ಸಲ್ಲಿಕೆ, ಯೋಜನೆ ಬಹಳ ಹಳೆಯದಾಗಿದೆ. ಇದನ್ನು ಅಲ್ಪಸ್ವಲ್ಪ ಸರಿಪಡಿಸುವ ಬದಲು ಸಮಗ್ರವಾಗಿ ಕಾರ್ಯಗತಗೊಳಿಸುವ ಅಗತ್ಯವಿದೆ. ಸಿದ್ಧಪಡಿಸಲಾದ ನೂತನ ಡಿಪಿಆರ್ ರಾಜ್ಯಮಟ್ಟದ ಉನ್ನತಾ ಧಿಕಾರ ಸಮಿತಿ ಅನುಮೋದನೆಗೆ ಸಲ್ಲಿಕೆಯಾಗಲಿದೆ. ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಕ್ತ ಅಭಿಪ್ರಾಯ ಮತ್ತು ಶಿಫಾರಸ್ಸು ಕಳುಹಿಸಲಾಗುವುದು ಎಂದು ಡಿಸಿ ಭರವಸೆ ನೀಡಿದರು.

ಈ ವೇಳೆ ಕೆಎನ್‌ಎಲ್‌ಎಲ್‌ ಹಾಸನ ವಿಭಾಗದ ಸಹಾಯಕ ಕಾರ್ಯಪಾಲ ಎಂಜಿನಿಯರ್‌ ರಾಮಕೃಷ್ಣ, ಸಹಾಯಕ ಎಂಜಿನಿಯರ್‌ ಆನಂದ್‌ ಹಾಗೂ ರೈತರು ಉಪಸ್ಥಿತರಿದ್ದರು.---ಬಾಕ್ಸ್‌---ಹೊಸ ಪೈಪ್‌ಲೈನ್‌ ಕಾಮಗಾರಿ ರೈತರ ವಿರೋಧ2000ರಲ್ಲಿ ಕಾಮಗಾರಿ ಆರಂಭಗೊಂಡಾಗ ಸುಮಾರು 5-6 ವರ್ಷಗಳ ಕಾಲ ರೈತರ ಜಮೀನುಗಳಲ್ಲಿ ಕೊಳವೆ ಅಳವಡಿಕೆ ನೆಪದಲ್ಲಿ ಗುಂಡಿ ತೆಗೆದು ಬಿಟ್ಟಿದ್ದರು. ಇದೀಗ ಯೋಜನೆ ಪುನಾರಂಭಿಸಲು ಸಿದ್ಧತೆ ಮಾಡಲಾಗುತ್ತಿದೆ. ಹೊಸದಾಗಿ ಕೊಳವೆ ಅಳವಡಿಕೆ ಕಾಮಗಾರಿ ಮಾಡಬಾರದು. ಈಗಾಗಲೇ ಅಳವಡಿಸಿರುವ ಕೊಳವೆಗಳನ್ನು ಪುನರ್‌ ಪರಿಶೀಲನೆ ನಡೆಸಿ, ಅಗತ್ಯ ವಿರುವ ಕಡೆ ಮಾತ್ರ ದುರಸ್ತಿ ಕಾಮಗಾರಿ ಕೈಗೊಳ್ಳಬೇಕೆಂದು ರೈತರು, ಜಿಲ್ಲಾಧಿಕಾರಿಯನ್ನು ಆಗ್ರಹಿಸಿದರು.