ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ಸಿಂದಗಿಯ ವಿವಿಧ ತಾಲೂಕು ಕಚೇರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಭೇಟಿ ನೀಡಿ, ತಾಲೂಕು ಆಡಳಿತದ ಕಾರ್ಯನಿರ್ವಹಣೆಯ ಪ್ರಗತಿ ಪರಿಶೀಲನೆ ನಡೆಸಿದರು. ಸಿಂದಗಿಯ ತಹಸೀಲ್ದಾರ ಕಚೇರಿಗೆ ಭೇಟಿ ನೀಡಿದ ಅವರು ಆಧಾರ ನೋಂದಣಿ, ಕಂದಾಯ ಗ್ರಾಮಗಳ ಮಾಹಿತಿ, ಭೂಮಿ ಪ್ರಗತಿ, ಮೋಜಣಿ ಕಡತ, ದಾಖಲೆಗಳನ್ನು ಆಧಾರದೊಂದಿಗೆ ಜೋಡಣೆಯ ಪ್ರಗತಿ ಮಾಹಿತಿ, ಜಾತಿ-ಆದಾಯ ಪ್ರಮಾಣ ಪತ್ರಗಳ ವಿತರಣೆ ಹಾಗೂ ಕಡತಗಳ ವಿಲೇವಾರಿ ಪ್ರಕ್ರಿಯೆಗಳನ್ನು ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಸಿಂದಗಿಯ ವಿವಿಧ ತಾಲೂಕು ಕಚೇರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಭೇಟಿ ನೀಡಿ, ತಾಲೂಕು ಆಡಳಿತದ ಕಾರ್ಯನಿರ್ವಹಣೆಯ ಪ್ರಗತಿ ಪರಿಶೀಲನೆ ನಡೆಸಿದರು. ಸಿಂದಗಿಯ ತಹಸೀಲ್ದಾರ ಕಚೇರಿಗೆ ಭೇಟಿ ನೀಡಿದ ಅವರು ಆಧಾರ ನೋಂದಣಿ, ಕಂದಾಯ ಗ್ರಾಮಗಳ ಮಾಹಿತಿ, ಭೂಮಿ ಪ್ರಗತಿ, ಮೋಜಣಿ ಕಡತ, ದಾಖಲೆಗಳನ್ನು ಆಧಾರದೊಂದಿಗೆ ಜೋಡಣೆಯ ಪ್ರಗತಿ ಮಾಹಿತಿ, ಜಾತಿ-ಆದಾಯ ಪ್ರಮಾಣ ಪತ್ರಗಳ ವಿತರಣೆ ಹಾಗೂ ಕಡತಗಳ ವಿಲೇವಾರಿ ಪ್ರಕ್ರಿಯೆಗಳನ್ನು ಪರಿಶೀಲಿಸಿದರು. ಸಿಂದಗಿ ಉಪನೋಂದಣಾಧಿಕಾರಿಗಳ ಕಚೇರಿ ಹಾಗೂ ಪುರಸಭೆ ಕಚೇರಿಗಳಿಗೆ ಭೇಟಿ ನೀಡಿ ಕಾರ್ಯನಿರ್ವಹಣೆ ಕುರಿತು ಅವರು ಅವಲೋಕಿಸಿದರು.ಸಿಂದಗಿಯಲ್ಲಿನ ಇಂದಿರಾ ಕ್ಯಾಂಟೀನ್ ಕಟ್ಟಡ ಕಾಮಗಾರಿ ಪರಿಶೀಲನೆ ನಡೆಸಿದ ಅವರು, ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಿಂದಗಿ ಹಳೆ ಬಜಾರ್‌ನಲ್ಲಿರುವ ರಸ್ತೆ ಕಾಮಗಾರಿಯನ್ನು ಪರಿಶೀಲಿಸಿ, ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಸೂಚನೆ ನೀಡಿದರು. ಸಿಂದಗಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಂತೆಯೂ ಅವರು ಸೂಚಿಸಿದರು.
ನಂತರ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ಸುಧಾರಣೆಗೆ ಕ್ರಮ ಕೈಗೊಳ್ಳುವಂತೆ ಸಲಹೆ-ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಕಂದಾಯ, ನಗರಾಭಿವೃದ್ಧಿ, ಆರೋಗ್ಯ, ಪುರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.