ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಕ್ಯಾತಮಾರನಹಳ್ಳಿ ರಸ್ತೆಯ ಗಾಯತ್ರಿಪುರಂ-2ನೇ ಹಂತದಲ್ಲಿರುವ ಮಸೀದಿಯ ಬೀಗ ತೆಗೆಯುವ ನ್ಯಾಯಾಲಯದ ನಿರ್ದೇಶನದಂತೆ ಶುಕ್ರವಾರ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಸಭೆ ನಡೆಸಿ, ಹಿಂದೂ ಮತ್ತು ಮುಸ್ಲಿಂ ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸಿದರು.ಸಿದ್ದಾರ್ಥನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಈ ಸಭೆಯಲ್ಲಿ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್, ಡಿಸಿಪಿ ಎಂ. ಮುತ್ತುರಾಜು, ವಿವಿಧ ಇಲಾಖೆಯ ಅಧಿಕಾರಿಗಳು, ಹಿಂದೂ ಮತ್ತು ಮುಸ್ಲಿಂ ಮುಖಂಡರು ಪಾಲ್ಗೊಂಡಿದ್ದರು.
ಹೈಕೋರ್ಟ್ ಸೂಚನೆ:ಅಲೀಮಾ ಸಾದಿಯಾ ಎಜುಕೇಷನ್ ಇನ್ಸ್ ಟಿಟ್ಯೂಷನ್ ಮತ್ತು ಮಸ್ಜೀದ್ ಇ ಸಿದ್ದಿಕ್ ಇ ಅಕ್ಬರ್ ಟ್ರಸ್ಟ್ ನಡೆಸುತ್ತಿದ್ದ ಈ ಕಟ್ಟಡಕ್ಕೆ ದಶಕದಿಂದ ಬೀಗ ಹಾಕಲಾಗಿದೆ. ಅದರ ಪುನರಾರಂಭಕ್ಕೆ ಅನುಮತಿ ಕೋರಿ ಕೆಲವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದಕ್ಕೆ ಮದರಸಾ ಹೆಸರಿನಲ್ಲಿ ಮಸೀದಿ ನಡೆಸುತ್ತಿದ್ದು, ಇದಕ್ಕೆ ಅನುಮತಿ ನೀಡಬಾರದು ಎಂದು ಕೆಲವರು ನ್ಯಾಯಾಲಯದಲ್ಲಿ ಆಕ್ಷೇಪಣೆ ಸಲ್ಲಿಸಿದ್ದರು. ವಾದ– ಪ್ರತಿವಾದ ಆಲಿಸಿದ ನ್ಯಾಯಾಲಯವು ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಿ 12 ವಾರದೊಳಗೆ ಮುಚ್ಚಿದ ಲಕೋಟೆಯಲ್ಲಿ ವರದಿ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿತ್ತು.
ನ್ಯಾಯಾಲಯದ ಸೂಚನೆ ಮೇರೆಗೆ ಅಭಿಪ್ರಾಯ ಸಂಗ್ರಹಿಸಲು ಆಯೋಜಿಸಿದ್ದ ಸಭೆಯಲ್ಲಿ ಹಿಂದೂ ಹಾಗೂ ಮುಸ್ಲಿಂ ಪ್ರತಿನಿಧಿಗಳನ್ನು ಜಿಲ್ಲಾಧಿಕಾರಿ ಪ್ರತ್ಯೇಕವಾಗಿ ಕರೆದು ಅಭಿಪ್ರಾಯ ಪಡೆದರು. ಕೆಲವರು ಮೌಖಿಕವಾಗಿ ಅಭಿಪ್ರಾಯ ತಿಳಿಸಿದರೆ, ಮತ್ತೆ ಕೆಲವರು ಮನವಿ ಪತ್ರ ಸಲ್ಲಿಸಿದರು.ಮಸೀದಿ ಪುನರಾರಂಭ ಸಂಬಂಧ ನ್ಯಾಯಾಲಯದ ಮೆಟ್ಟಿಲೇರಿದ್ದ ದೂರುದಾರ ಮುನಾವರ್ ಪಾಷ ಸಭೆಗೆ ಗೈರಾಗಿದ್ದರು. ಸಭೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ಪೊಲೀಸರು ಭದ್ರತೆ ಕೈಗೊಂಡಿದ್ದರು.
ಅದು ಮಸೀದಿಯಲ್ಲ ಮದರಸ ಅಷ್ಟೇ:ಸಭೆಯ ಬಳಿಕ ನಗರ ಪಾಲಿಕೆ ಮಾಜಿ ಸದಸ್ಯ ಶೌಕತ್ ಪಾಷ ಸುದ್ದಿಗಾರರೊಂದಿಗೆ ಮಾತನಾಡಿ, 2006ರಲ್ಲಿ ಕ್ಯಾತಮಾರನಹಳ್ಳಿ ರಸ್ತೆಯಲ್ಲಿನ ಎರಡು ಮನೆಗಳನ್ನು ಟ್ರಸ್ಟ್ ಹೆಸರಿನಲ್ಲಿ ಖರೀದಿಸಿದ್ದು, 2009ರಲ್ಲಿ ಇದನ್ನು ಮದರಸಾವಾಗಿ ಪರಿವರ್ತಿಸಲು ಟ್ರಸ್ಟ್ ನಿಂದ ಅನುಮತಿ ಪಡೆಯಲಾಗಿತ್ತು. ಕೆಲವು ವರ್ಷ ಇಲ್ಲಿ ಮದರಸಾ ನಡೆಸಲಾಗಿತ್ತು. ನಂತರದಲ್ಲಿ ಇದು ಮಸೀದಿ ಎಂದು ಕೆಲವರು ಗಲಾಟೆ ನಡೆಸಿದರು ಎಂದರು.
ಆ ನಂತರ ನಡೆಯಬಾರದ ಒಂದು ಘಟನೆ ನಡೆಯಿತು. ರಾಜು ಹತ್ಯೆ ಕಾರಣಕ್ಕೆ ಮದರಸಾಕ್ಕೆ ಬೀಗ ಹಾಕಲಾಗಿದೆ. ಈಗ ನಮಗೆ ಸೌಹರ್ಧಯುತವಾಗಿ ಮತ್ತೆ ಮದರಸ ನಡೆಸಲು ಅವಕಾಶ ಮಾಡಿಕೊಡಿ ಎಂದು ಕೇಳಿದ್ದೇವೆ. ಇದರಲ್ಲಿ ಯಾವ ರಾಜಕೀಯವೂ ಇಲ್ಲ. ನಮಗೆ ಮದರಸ ನಡೆಸಲು ಅವಕಾಶ ಕೊಡಿ. ಅದು ಮಸೀದಿ ಎಂಬ ಭಾವನೆಯಿಂದ ಕೆಲವರು ವಿರೋಧ ಮಾಡುತ್ತಿದ್ದಾರೆ ಅಷ್ಟೇ. ಆದರೆ, ಅದು ಮಸೀದಿಯಲ್ಲ ಮದರಸ ಅಷ್ಟೇ ಎಂದು ಸ್ಪಷ್ಪಡಿಸಿದರು.ಯಥಾಸ್ಥಿತಿ ಕಾಯ್ದುಕೊಳ್ಳಬೇಕು:
ಹುಲಿಯಮ್ಮ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ಕಾರ್ಯದರ್ಶಿ ಶಿವಕುಮಾರ್ ಮಾತನಾಡಿ, ಜಿಲ್ಲಾಡಳಿತ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬೇಕು. ಮಸೀದಿ ಮತ್ತೊಂದು ಯಾವುದನ್ನೂ ತೆರೆಯುವುದು ಬೇಡ. ಅದರಿಂದ ಬಹಳ ದೊಡ್ಡ ಕೆಟ್ಟ ಘಟನೆಗಳು ನಡೆದು ಹೋಗಿವೆ. ಶಾಂತಿ ಸೌಹರ್ಧತೆಯ ದೃಷ್ಟಿಯಿಂದ ಆ ಸ್ಥಳದಲ್ಲಿ ಯಾವ ಚಟುವಟಿಕೆಯೂ ಆರಂಭವಾಗುವುದು ಬೇಡ. ಈ ಬಗ್ಗೆ ನಾವು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದೇವೆ. ಎಲ್ಲರೂ ಶಾಂತಿಯುತವಾಗಿ ಬದುಕುತ್ತಿದ್ದೇವೆ , ಅದೇ ರೀತಿ ಮುಂದುವರೆಬೇಕೆಂದು ಬಯಸುತ್ತೇವೆ. ಜಿಲ್ಲಾಧಿಕಾರಿ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದು ಹೇಳಿದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))