ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಕೋಲಾರದಲ್ಲಿ ಸೈಕಲ್ ಸವಾರಿ । ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳಿಗೆ ಗಡುವು

ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ನಗರದಲ್ಲಿ ಸೈಕಲ್ ಸಂಚಾರ ಮೂಲಕ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು. ಕೆಲವೆಡೆ ಸಾರ್ವಜನಿಕರ ಸಮಸ್ಯೆಗಳನ್ನು ಖುದ್ದಾಗಿ ವೀಕ್ಷಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸಮಸ್ಯೆಗಳನ್ನು ಪರಿಹರಿಸಲು ಕ್ರಮಕೈಗೊಳ್ಳಲು ಗಡುವು ನೀಡಿದರು. ನಗರದ ವಿವಿಧಡೆ ರಸ್ತೆ ಬದಿಯಲ್ಲಿ ತ್ಯಾಜ್ಯದ ರಾಶಿಗಳು ಕಂಡ ಜಿಲ್ಲಾಧಿಕಾರಿ ಆರೋಗ್ಯ ನಿರೀಕ್ಷಕ ನವಾಜ್, ಮಂಜುನಾಥ್‌ರನ್ನು ಹಿಗ್ಗಮುಗ್ಗ ತರಾಟೆಗೆ ತೆಗೆದುಕೊಂಡು ರಸ್ತೆ ಬದಿ ಗುಡ್ಡದಂತಿರುವ ಕಸ ಕೂಡಲೇ ತೆರವು ಮಾಡಿಸಬೇಕೆಂದು ತಾಕೀತು ಮಾಡಿದರು. ಸಾರ್ವಜನಿಕರಿಗೆ ಬ್ಲಾಕ್ ಪಾಯಿಂಟ್‌ಗಳಲ್ಲಿ ಕಸವನ್ನು ಸುರಿಯುವಂತ ಅರಿವು ಮೂಡಿಸಲಿಲ್ಲ ಏಕೆಂದು ಪ್ರಶ್ನಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು. ನಗರದ ಕಾರಂಜಿ ಕಟ್ಟೆಯ ರಸ್ತೆಯ ಅಗಲೀಕರಣ ಕುರಿತು ಜಿಲ್ಲಾ ನಗರಾಭಿವೃದ್ದಿ ಯೋಜನಾ ನಿರ್ದೇಶಕ ಅಂಬಿಕಾರಿಗೆ ಪ್ರಸ್ತಾವನೆ ಸಿದ್ಧಪಡಿಸಲು ಸೂಚಿಸಿದರು. ಬಸ್ ನಿಲ್ದಾಣದಿಂದ ವಾಹನಗಳು ನಿರ್ಗಮಿಸುವ ಸಂದರ್ಭದಲ್ಲಿ ವಾಹನಗಳ ದಟ್ಟಣೆಯಿಂದ ಜಾಮ್ ಆಗುತ್ತಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ ರಸ್ತೆ ಒಂದು ಬದಿಯಲ್ಲಿ ಆಟೋಗಳ ನಿಲ್ದಾಣ ಇದೆ, ಬೀದಿ ಬದಿ ವ್ಯಾಪಾರಿಗಳು, ತಳ್ಳುವ ಗಾಡಿಗಳ ನಿಲುಗಡೆಯಿಂದ ಸುಗಮವಾದ ಸಂಚಾರಕ್ಕೆ ಅಡಚಣೆಯಾಗುತ್ತಿರುವುದು ಹಾಗಾಗಿ ರಸ್ತೆ ಅಗಲೀಕರಣ ಅತ್ಯವಶ್ಯಕವೆಂದು ಅಭಿಪ್ರಾಯಪಟ್ಟರು. ಬಸ್ ನಿಲ್ದಾಣದಿಂದ ಕಾರಂಜಿಕಟ್ಟೆ ರಸ್ತೆ ಮೂಲಕ ಖಾದ್ರಿಪುರದವರೆಗೆ ಜೋಡಿ ರಸ್ತೆಯಾಗಿ ಕಾಮಗಾರಿ ಕೈಗೆತ್ತಿಕೊಳ್ಳಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಚರ್ಚೆ ನಡೆಸಿ ಕ್ರಮಕೈಗೊಳ್ಳಲು ಅಂಬಿಕಾರಿಗೆ ಸೂಚಿಸಿದರು. ಕೀಲುಕೋಟೆ ಆಂಜನೆಯ ಸ್ವಾಮಿ ದೇವಾಲಯದ ಕಾಂಪೌಂಡ್ ಗೋಡೆ ಸ್ವಲ್ಪ ಒಳಗೆ ನಿರ್ಮಿಸಿಕೊಂಡು ರಸ್ತೆಯ ಅಗಲೀಕರಣಕ್ಕೆ ಬಳಸಿಕೊಳ್ಳುವುದು ಅನಿವಾರ್ಯವಾಗಿದೆ. ಇದಕ್ಕೆ ಸಾರ್ವಜನಿಕರ ಹಾಗೂ ದೇವಾಲಯ ಸಮಿತಿ ವಿಶ್ವಾಸಕ್ಕೆ ಪಡೆದುಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲಹೆ ನೀಡಿದರು. ಕ್ಲಾಕ್ ಟವರ್ ಬಳಿ ತೆರೆದ ರಸ್ತೆಯೇ ಮಾಂಸದ ಅಂಗಡಿಗಳು ಇದ್ದು ಮಾಂಸದ ಗುಡ್ಡೆಗಳು ಇರುವುದು ಮಾಂಸ ನೇತು ಹಾಕಿರುವುದು ಕಂಡು ಜಿಲ್ಲಾಧಿಕಾರಿ ನಗರಸಭೆಯ ಆರೋಗ್ಯಾಧಿಕಾರಿಗಳ ವಿರುದ್ಧ ಕಿಡಿ ಕಾರಿದರು. ರಸ್ತೆಯಲ್ಲಿ ಧೂಳು, ಕಸವು ಮಾಂಸದ ಮೇಲೆ ಬಿದ್ದು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಟ ಪರಿಣಾಮ ಬೀರುವುದೆಂಬ ಕನಿಷ್ಟ ಪ್ರಜ್ಞೆಯು ಇಲ್ಲವೇನ್ರಿ ಇನ್ನೇನು ತಾನೇ ನೀವು ಕೆಲಸ ಮಾಡುತ್ತಿದ್ದೀರಿ ಎಂಬುವುದಕ್ಕೆ ಇವೆಲ್ಲಾ ನಿದರ್ಶವಾಗಿದೆ ಎಂದು ಆರೋಗ್ಯಾಧಿಕಾರಿಗೆ ಛೀಮಾರಿ ಹಾಕಿದರು.ಸ್ವಚ್ಛತೆ ಕಾಪಾಡುವ ದಿಸೆಯಲ್ಲಿ ಮಾಂಸಗಳನ್ನು ಗಾಜಿನ ಬಾಕ್ಸ್ ಒಳಗಿಟ್ಟು ವ್ಯಾಪಾರ ವಹಿವಾಟು ನಡೆಸಲು ಸಂಬಂಧಪಟ್ಟ ಅಂಗಡಿಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ, ಇವರೆಲ್ಲಾ ಪರವಾನಗಿ ಪಡೆದಿದ್ದಾರೆಯೇ ನಗರದಲ್ಲಿ ನಿಗದಿತ ಕಸಾಯಿಖಾನೆ ಇರುವ ಕಡೆ ಮಾರಾಟ ಮಾಡಲು ಹಾಗೂ ತ್ಯಾಜ್ಯಗಳಿಂದ ವಾಯು ಮಾಲಿನ್ಯ ಉಂಟಾಗದಂತೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಗರ ಹೊರವಲಯದಲ್ಲಿ ವಿಲೇವಾರಿ ಮಾಡಲು ಕ್ರಮ ವಹಿಸಲು ಪೌರಾಯುಕ್ತರಿಗೆ ಸೂಚಿಸಿದರು. ಕೋಲಾರಮ್ಮ ದೇವಾಲಯದ ರಸ್ತೆಯ ಎರಡು ಬದಿಗಳಲ್ಲಿ ಅಳವಡಿಸಿರುವ ಸಾಂಸ್ಕೃತಿಕ ದೀಪಗಳನ್ನು ವೀಕ್ಷಿಸಿದ ನಂತರ ಪ್ರಭಾತ್ ಚಿತ್ರಮಂದಿರ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪರಕ್ಕೆ ಅನುವು ಮಾಡಿ ಕೊಡಲು ಶೆಡ್‌ಗಳನ್ನು ನಿರ್ಮಿಸಲು ಸ್ಥಳ ಪರಿಶೀಲನೆ ನಡೆಸಿದರು. ಅಂತರಗಂಗೆ ರಸ್ತೆಯಲ್ಲಿ ನಗರಸಭೆಗೆ ಸೇರಿದ ೨೪ ವಾಣಿಜ್ಯ ಮಳಿಗೆಗಳ ಸಂಕೀರ್ಣದಲ್ಲಿ ಕೇವಲ ೧೦ ರಿಂದ ೧೨ ಅಂಗಡಿಗಳು ಮಾತ್ರ ಬಾಡಿಗೆ ನೀಡಲಾಗಿದೆ. ಉಳಿದ ಅಂಗಡಿಗಳನ್ನು ದುರಸ್ಥಿಪಡಿಸಿ ಹರಾಜು ಹಾಕುವ ಮೂಲಕ ನಗರಸಭೆಗೆ ಆದಾಯ ಮಾಡಿಕೊಳ್ಳಬೇಕೆಂದು ಸೂಚಿಸಿದ ಜಿಲ್ಲಾಧಿಕಾರಿ ಇಷ್ಟು ವರ್ಷದಿಂದ ಬಾಡಿಕೆ ನೀಡಲು ಕ್ರಮ ಕೈಗೊಳ್ಳದೆ ಲಕ್ಷಾಂತರ ರು. ನಷ್ಟಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕೆಂಡಕಾರಿದರು.ನಗರಸಭೆ ಸೇರಿದ ಖಾಲಿ ನಿವೇಶಗಳನ್ನು ಹಾಗೂ ಇತರೆ ಆಸ್ತಿ ಉಳಿಸಬೇಕು. ಅವುಗಳನ್ನು ಗುರುತಿಸಿ ಫೆನ್ಸಿಂಗ್ ಆಳವಡಿಸಿ ನಗರಸಭೆ ಆಸ್ತಿಯೆಂದು ಫಲಕಗಳನ್ನು ಅಳವಡಿಸಬೇಕು. ನಗರಸಭೆಗೆ ಸೇರಿದ ಕೊಳವೆಬಾವಿ ಗುರುತಿಸಿ ನೀರು ಇರುವ ಬೋರ್ ವೆಲ್‌ಗೆ ಹಸಿರು ಮತ್ತು ನೀರಿಲ್ಲದವುಗಳಿಗೆ ಕೆಂಪು ಬಣ್ಣ ಬಳಿಯಲು ಜಿಲ್ಲಾಧಿಕಾರಿ ನಗರಸಭೆಯ ಅಧಿಕಾರಿಗೆ ಸೂಚಿಸಿದರು.ನಗರಸಭೆ ಕಾರ್ಯಪಾಲಕ ಇಂಜಿನಿಯರ್ ಗಂಗಾಧರ್ ಇದ್ದರು.