ಸಿಎಂ ಜತೆಗಿನ ಸಭೆಗೆ ಸಿದ್ಧತೆ ಕೈಗೊಳ್ಳಲು ಡಿಸಿ ದಿವಾಕರ ಸೂಚನೆ

| Published : Jun 16 2024, 01:46 AM IST

ಸಿಎಂ ಜತೆಗಿನ ಸಭೆಗೆ ಸಿದ್ಧತೆ ಕೈಗೊಳ್ಳಲು ಡಿಸಿ ದಿವಾಕರ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯನಗರ ಜಿಲ್ಲೆ ನೂತನವಾಗಿ ರಚನೆಯಾಗಿ ಕೆಲವೇ ವರ್ಷಗಳು ಗತಿಸಿದ್ದು, ಜಿಲ್ಲೆಯ ಪ್ರಗತಿಗೆ ವೇಗ ಕೊಡಬೇಕು.

ಹೊಸಪೇಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜೂ.೨೧ರಂದು ಕೆಡಿಪಿ ಸಭೆ ನಡೆಯಲಿದ್ದು, ಅಧಿಕಾರಿಗಳು ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಹೇಳಿದರು.ಜಿಲ್ಲಾಡಳಿತ ಭವನದ ಕೆಸ್ವಾನ್ ಹಾಲ್‌ನಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಕೆಡಿಪಿ ಸಭೆಯ ಗಂಭೀರತೆಯನ್ನು ಅಧಿಕಾರಿಗಳು ಅರಿಯಬೇಕು ಎಂದರು.

ವಿಜಯನಗರ ಜಿಲ್ಲೆ ನೂತನವಾಗಿ ರಚನೆಯಾಗಿ ಕೆಲವೇ ವರ್ಷಗಳು ಗತಿಸಿದ್ದು, ಜಿಲ್ಲೆಯ ಪ್ರಗತಿಗೆ ವೇಗ ಕೊಡಬೇಕು ಎಂದು ಉದ್ದೇಶಿಸಿ ಜಿಲ್ಲಾ ಉಸ್ತುವಾರಿ ಸಚಿವರ ಮನವಿ ಮೇರೆಗೆ ಮುಖ್ಯಮಂತ್ರಿ ಜಿಲ್ಲೆಯ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ವಿಜಯನಗರ ಜಿಲ್ಲೆಯಾದ ಬಳಿಕ ಸಿಎಂ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿರುವುದು ಜಿಲ್ಲೆಯ ಪ್ರಗತಿಯ ಇತಿಹಾಸದಲ್ಲಿ ಹೊಸ ಮೈಲುಗಲ್ಲಾಗಲಿದೆ. ನೂತನ ಜಿಲ್ಲೆಯ ಪ್ರಗತಿಯ ವೇಗಕ್ಕೆ ಸಿಎಂ ನಡೆಸುವ ಸಭೆಯು ಹೊಸ ಮುನ್ನುಡಿ ಬರೆಯಲಿದೆ. ಈ ಸಭೆಯಿಂದಾಗಿ ಪ್ರಗತಿಯ ಕಾರ್ಯಗಳಿಗೆ ವೇಗ ಸಿಗಲಿದೆ. ಈ ವಿಷಯವನ್ನು ಎಲ್ಲ ಅಧಿಕಾರಿಗಳು ಅರಿತು ಪ್ರಗತಿ ಪರಿಶೀಲನಾ ಸಭೆಗೆ ಮಾಹಿತಿ ಸಿದ್ಧಪಡಿಸಬೇಕು ಎಂದು ಸಭೆಯ ಮಹತ್ವ ತಿಳಿಸಿದರು.

ಸಭೆಯಲ್ಲಿ ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಯಲಿದೆ. ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಮಾಹಿತಿಯನ್ನು ಶಿಸ್ತುಬದ್ಧವಾಗಿ, ಸ್ಫುಟವಾಗಿ ಸಿದ್ಧಪಡಿಸಿ ತುರ್ತಾಗಿ ಸಲ್ಲಿಸಬೇಕು. ಅಧಿಕಾರಿಗಳು ಮಾಹಿತಿಯನ್ನು ಸರಿಯಾಗಿ ನೀಡಬೇಕು. ತಪ್ಪು ಮಾಹಿತಿಯನ್ನು ನೀಡಬಾರದು ಎಂದು ತಿಳಿಸಿದರು.ಸಿಎಂ ನಡೆಸುವ ಸಭೆಗೆ ಕಡ್ಡಾಯವಾಗಿ ಅಧಿಕಾರಿಗಳೇ ಹಾಜರಿರಬೇಕು. ಸಿಎಂ ನಡೆಸುವ ಪ್ರಗತಿ ಪರಿಶೀಲನಾ ಸಭೆಯ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಬಾರದು. ಯಾರಾದರು ತಪ್ಪು ಮಾಹಿತಿ ನೀಡಿರುವುದು ಮತ್ತು ಸಭೆಗೆ ಗೈರು ಹಾಜರಾಗಿರುವುದು ಕಂಡು ಬಂದಲ್ಲಿ ಯಾವುದೇ ಮುಲಾಜಿಲ್ಲದೇ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಪಂ ಸಿಇಒ ಸದಾಶಿವ ಪ್ರಭು ಮಾತನಾಡಿ, ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದ ಹಾಗೆ ಮಾಹಿತಿ ಸಿದ್ಧಪಡಿಸಬೇಕು. ಓದಲು ಮತ್ತು ತಿಳಿಯಲು ಅನುಕೂಲವಾಗುವಂತೆ ಸರಿಯಾದ ಮಾದರಿಯಲ್ಲಿ ಮಾಹಿತಿ ಸಿದ್ಧಪಡಿಸಿ ನೀಡಬೇಕು. ಸಭೆ ನಡೆಸುವಾಗ ಬರಬಹುದಾದ ಅನಿರೀಕ್ಷಿತ ಪ್ರಶ್ನೆಗಳಿಗೆ ಸ್ಥಳದಲ್ಲಿಯೇ ಉತ್ತರಿಸುವ ಹಾಗೆ ಅಧಿಕಾರಿಗಳು ತಮ್ಮ ಇಲಾಖೆಯ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ಅನ್ನದಾನೇಶ್ವರ ಸ್ವಾಮಿ, ವಿಜಯನಗರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಈರಣ್ಣ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಮಚಂದ್ರಪ್ಪ, ಆಹಾರ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಅಧಿಕಾರಿ ಡಾ.ಶಂಕರ ನಾಯಕ ಇದ್ದರು.