ಸಾರಾಂಶ
ಕನ್ನಡಪ್ರಘ ವಾರ್ತೆ ಮಳವಳ್ಳಿ
ಪಟ್ಟಣದ ತಾಲೂಕು ಕಚೇರಿಗೆ ಬುಧವಾರ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಕುಮಾರ, ಸಾರ್ವಜನಿಕ ಅಹವಾಲು ಆಲಿಸಿ ಅರ್ಜಿಗಳ ತ್ವರಿತ ವಿಲೇವಾರಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಚಿಸಿದರು.ನಂತರ ವಿವಿಧ ವಿಭಾಗಗಳಿಗೆ ಭೇಟಿ ನೀಡಿದ ಅವರು, ಆರ್‌ಟಿಸಿ ತಿದ್ದುಪಡಿ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ಟಪಾಲುನಲ್ಲಿ ಸ್ವೀಕೃತವಾದ ಅರ್ಜಿಗಳನ್ನು ಪರಿಶೀಲಿಸಿ ಇ-ಆಫೀಸ್ ತಂತ್ರಾಂಶದಲ್ಲಿ ನಮೂದಿಸಬೇಕು. ಕಡತಗಳ ನಿರ್ವಹಣೆಯು ಸಕಾಲಕ್ಕೆ ನಡೆಯಬೇಕು ಎಂದು ಸೂಚಿಸಿದರು.
ಅಭಿಲೇಖಾಲಯದ ದಾಖಲೆಗಳನ್ನು ಡಿಜಿಟಲ್‌ನಲ್ಲಿಯೇ ನೀಡಬೇಕು. ಜಿಲ್ಲಾಧಿಕಾರಿಗಳ ಕಚೇರಿ, ಮೇಲ್ಮಟ್ಟ ಯಾವುದೇ ಕಚೇರಿಗಳಿಂದ ಕೋರುವ ಮಾಹಿತಿ ವಿಳಂಬ ಮಾಡಬಾರದು. ವಂಶವೃಕ್ಷ, ಆರ್‌ಟಿಸಿ ಸೇರಿದಂತೆ ಇತರೆ ದಾಖಲೆಗಳನ್ನು ತ್ವರಿತವಾಗಿ ನೀಡಲು ಶಿರಸ್ತೇದಾರರಿಗೆ ಸೂಚನೆ ನೀಡಿದ ಅವರು, ಕಂದಾಯ ಇಲಾಖೆ ಸೇವೆಗಳು ನ್ಯಾಯಯುತವಾಗಿ ಜನರಿಗೆ ತಲುಪುವಂತೆ ಮಾಡಬೇಕು ಎಂದರು.ಸ್ಥಳದಲ್ಲಿದ್ದ ಸಾರ್ವಜನಿಕರ ಕುಂದುಕೊರತೆಯ ಅರ್ಜಿ ಸ್ವೀಕರಿಸಿದ ಅವರು, ನಿಗದಿತ ಅವಧಿಯಲ್ಲಿ ನಿಯಮಾನುಸಾರ ಪರಿಶೀಲಿಸಿ ವಿಲೇವಾರಿ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ, ಸಿಬ್ಬಂದಿಯೊಂದಿಗೆ ಚರ್ಚಿಸಿ ಕೆಲ ನಿರ್ದೇಶನಗಳನ್ನು ನೀಡಿದರು.
ಈ ವೇಳೆ ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಎಸ್.ವಿ.ಲೋಕೇಶ್ ಉಪಸ್ಥಿತರಿದ್ದರು.12ರಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ
ಮಂಡ್ಯ:ಜಿಲ್ಲೆಯಲ್ಲಿ ಆಟೋರಿಕ್ಷಾ ವಾಹನಗಳ ಪ್ರಯಾಣ ದರವನ್ನು ಪರಿಷ್ಕರಿಸುವಂತೆ ಮತ್ತು ಇತರೆ ಬೇಡಿಕೆಯನ್ನು ಪೂರ್ಣಗೊಳಿಸುವಂತೆ ಕರ್ನಾಟಕ ರಾಜೀವ್ ಗಾಂಧಿ ಆಟೋ, ಟ್ಯಾಕ್ಸಿ ಚಾಲಕರ ವೇದಿಕೆಯಿಂದ ಜು.20ರಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಗೆ ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಆಟೋರಿಕ್ಷಾ ವಾಹನಗಳ ಪ್ರಯಾಣ ದರವನ್ನು ಪರಿಷ್ಕರಿಸುವ ಸಂಬಂಧ ಜಿಲ್ಲಾಧಿಕಾರಿ ಆ.12 ರಂದು ಬೆಳಗ್ಗೆ 10-30 ಗಂಟೆಗೆ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ನಿಗದಿಪಡಿಸಿದೆ. ಈ ಸಭೆಗೆ ಎಲ್ಲಾ ಜಿಲ್ಲಾ ಆಟೋರಿಕ್ಷಾ ಚಾಲಕರ ಸಂಘ-ಸಂಸ್ಥೆಯವರು ತಪ್ಪದೇ ಸಭೆಗೆ ಹಾಜರಾಗಬೇಕು. ಆಟೋರಿಕ್ಷಾ ವಾಹನಗಳ ಪ್ರಯಾಣದರ ಪರಿಷ್ಕರಿಸುವಂತೆ ಮತ್ತು ಇತರೆ ಬೇಡಿಕೆಯನ್ನು ಪೂರ್ಣಗೊಳಿಸುವ ವಿಷಯ ಕುರಿತಂತೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಮೂರು ದಿನಗಳ ಒಳಗಾಗಿ ವಿವರಗಳೊಂದಿಗೆ ಲಿಖಿತ ರೂಪದಲ್ಲಿ ಹೇಳಿಕೆಯನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಸಲ್ಲಿಸಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.