ಕನ್ನಡ ಮಾಧ್ಯಮ ಶಾಲೆಗಳ ಬಲವರ್ಧನೆಗೆ ಮುಂದಾಗಿ: ಶಾಸಕ ಎಚ್.ಟಿ.ಮಂಜು

| Published : Aug 07 2025, 12:46 AM IST

ಸಾರಾಂಶ

ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲೇ ಮಕ್ಕಳಿಗೆ ಕೊಡಿಸಬೇಕು. ಸರ್ಕಾರಿ ಶಾಲೆಗಳಿಗೆ ನಿಮ್ಮ ಮಕ್ಕಳನ್ನು ದಾಖಲು ಮಾಡಿ ಶಾಲೆಗಳ ಬಲವರ್ಧನೆಗೆ ಮುಂದಾಗಬೇಕು. 20 ಲಕ್ಷ ರು. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಯ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪೋಷಕರು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಡ್ಡಾಯವಾಗಿ ದಾಖಲಿಸುವ ಮೂಲಕ ಕನ್ನಡ ಮಾಧ್ಯಮ ಶಾಲೆಗಳ ಬಲವರ್ಧನೆಗೆ ಮುಂದಾಗಬೇಕು ಎಂದು ಶಾಸಕ ಎಚ್.ಟಿ.ಮಂಜು ಕರೆ ನೀಡಿದರು.

ತಾಲೂಕಿನ ಮಡುವಿನಕೋಡಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಅಂಗನವಾಡಿ ಕಟ್ಟಡದ ಉದ್ಘಾಟನೆ ಮತ್ತು ಗ್ರಾಮದ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಗ್ರಾಮೀಣ ಜನರು ಕಾನ್ವೆಂಟ್‌ಗಳ ವ್ಯಾಮೋಹ ಹಾಗೂ ಆಂಗ್ಲ ಮಾಧ್ಯಮದ ಪ್ರೇಮದಿಂದ ಹೊರಬಂದು ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲೇ ಮಕ್ಕಳಿಗೆ ಕೊಡಿಸಬೇಕು. ಸರ್ಕಾರಿ ಶಾಲೆಗಳಿಗೆ ನಿಮ್ಮ ಮಕ್ಕಳನ್ನು ದಾಖಲು ಮಾಡಿ ಶಾಲೆಗಳ ಬಲವರ್ಧನೆಗೆ ಮುಂದಾಗಬೇಕು. 20 ಲಕ್ಷ ರು. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಯ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ವೇಳೆ ತಾಪಂ ಇಒ ಸುಷ್ಮಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ವಿದ್ಯಾವತಿ, ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆನಂದ್, ಪಿಎಸ್ ಎಸ್ ಕೆ ಮಾಜಿ ನಿರ್ದೇಶಕ ಚಂದ್ರಶೇಖರ್, ಗ್ರಾಪಂ ಅಧ್ಯಕ್ಷೆ ಪ್ರೀತಿ ಬೈರನಾಯಕ, ಉಪಾಧ್ಯಕ್ಷ ನಾಗರಾಜು, ಸದಸ್ಯರಾದ ರತಿ ಮಹದೇವ, ಮಂಜುನಾಥ್, ರವಿಕುಮಾರ್, ಮುಖಂಡರಾದ ಶ್ರೀನಿವಾಸ್, ವಿಜಯಕುಮಾರ್, ಸಂಜು, ಆನಂದ, ಚೇತನ್, ಪಿಡಿಒ ಅಭಿನಯ ಸೇರಿದಂತೆ ಮಡುವಿನ ಕೋಡಿ ಗ್ರಾಮಸ್ಥರು ಇದ್ದರು.

ಇದಕ್ಕೂ ಮುನ್ನ ಮಡುವಿನಕೋಡಿ ಗ್ರಾಮಕ್ಕೆ ಆಗಮಿಸಿದ ಶಾಸಕ ಹೆಚ್.ಟಿ.ಮಂಜು ಅವರನ್ನು ಗ್ರಾಮಸ್ಥರು ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಂಡರು.

ಜಿ.ಆರ್‌.ಚಿಕ್ಕೇಗೌಡರಿಗೆ ಆತ್ಮೀಯ ಬೀಳ್ಕೊಡುಗೆ

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣದ ಆದಿಚುಂಚನಗಿರಿ ವಿದ್ಯಾ ಸಂಸ್ಥೆಯಲ್ಲಿ ಕಳೆದ 27 ವರ್ಷಗಳ ಕಾಲ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ ಹಾಗೂ ಸೂಪರ್‌ ವೈಸರ್‌ ಆಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ ಜಿ.ಆರ್.ಚಿಕ್ಕೇಗೌಡ ಅವರಿಗೆ ತಾಲೂಕಿನ ವಿವಿಧ ಸಂಘ ಸಂಸ್ಥೆಗಳು ಆತ್ಮೀಯವಾಗಿ ಅಭಿನಂದಿಸಿ ಬೀಳ್ಕೊಟ್ಟವು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಜಿ.ಆರ್.ಚಿಕ್ಕೇಗೌಡ, ನಾನು ಬಿ.ಜಿ.ಎಸ್. ಸಂಸ್ಥೆಯಲ್ಲಿ 27 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಬೋಧನೆ ಮಾಡುವ ಸಂದರ್ಭದಲ್ಲಿ ನಾನು ನನ್ನ ಶಕ್ತಿ ಮೀರಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬೆಳವಣಿಗೆಗೆ ಶ್ರಮಿಸಿದ್ದೇನೆ. ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ ಸರ್ಕಾರಿ ಹುದ್ದೆಗಳನ್ನು ಪಡೆದು ಪೋಷಕರಿಗೆ ನೆರವಾಗಬೇಕು. ಉತ್ತಮ ಜೀವನ ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.

ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ವಳಗೆರೆ ಮೆಣಸಕುಮಾರ್, ಸಮಾಜ ಸೇವಕ ಪುರುಷೋತ್ತಮ್, ಪುರಸಭಾ ಮಾಜಿ ಅಧ್ಯಕ್ಷ ಕೆ.ಟಿ.ಗಂಗಾಧರ್, ಮಾಜಿ ಸದಸ್ಯ ಹರಿಪ್ರಸಾದ್, ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಕಾರ್ಯದರ್ಶಿ ಟಿ.ವೈ.ಆನಂದ್, ಗುತ್ತಿಗೆದಾರ ಅಗ್ರಹಾರಬಾಚಹಳ್ಳಿ ಲೋಕೇಶ್, ಪುಟ್ಟಸ್ವಾಮಿ, ಜಯಶಂಕರ್, ಮೈಸೂರು ಶಂಕರೇಗೌಡ, ರಾಯಸಮುದ್ರ ಮಂಜು, ಉಪನ್ಯಾಸಕರಾದ ಸುರೇಶ್, ಎಸ್.ಎಂ.ಲಿಂಗಪ್ಪ ಬಿ.ಎಡ್ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಸುರೇಶ್ ಮತ್ತು ಸಿಬ್ಬಂದಿ, ವಕೀಲರಾದ ಧನುಷ್‌ ಗೌಡ, ಚಂದನ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಅಭಿಮಾನಿಗಳು ಭಾಗವಹಿಸಿದ್ದರು.