ವಿಶೇಷ ತೀವ್ರ ಪರಿಷ್ಕರಣೆಯ ಪ್ರತಿಯೊಂದು ಹಂತದಲ್ಲಿಯೂ ಭಾರತ ಚುನಾವಣಾ ಆಯೋಗ ನಿಗದಿಪಡಿಸಿರುವ ಮಾರ್ಗಸೂಚಿ ಹಾಗೂ ವಿಧಾನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನೋಟಿಸ್ ಪಡೆದ ಮತದಾರರಿಗೆ ತಮ್ಮ ದಾಖಲೆ ಸಲ್ಲಿಸಲು ಹಾಗೂ ತಮ್ಮ ಅಹವಾಲು ತಿಳಿಸಲು ಸೂಕ್ತ ಅವಕಾಶ ಕಲ್ಪಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಡಿ ಮತದಾರರ ಪಟ್ಟಿಗೆ ಸಂಬಂಧಿಸಿದ ನೋಟಿಸ್‌ಗಳ ವಿಚಾರಣೆಯನ್ನು ಹೆಚ್ಚುವರಿ ಮತದಾರ ನೋಂದಣಾಧಿಕಾರಿಗಳ (ಎಇಆರ್‌ಒ) ಹಂತದಲ್ಲಿ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಬಾಲ ಭವನದಲ್ಲಿ ನಡೆಯುತ್ತಿದ್ದ ನೋಟಿಸ್ ವಿಚಾರಣಾ ಪ್ರಕ್ರಿಯೆ ಸ್ಥಳಕ್ಕೆ ಡೀಸಿ ಭೇಟಿ ನೀಡಿ ವಿಚಾರಣೆಗೆ ಹಾಜರಾಗಿದ್ದ ಮತದಾರರೊಂದಿಗೆ ಸಂವಾದ ನಡೆಸಿದರು.

ನೋಟಿಸ್‌ಗೆ ಸಂಬಂಸಿದಂತೆ ಸಲ್ಲಿಸಲಾಗುತ್ತಿರುವ ದಾಖಲೆಗಳ ಪರಿಶೀಲನೆ, ಅರ್ಜಿಗಳ ಸ್ವೀಕಾರ ಹಾಗೂ ಪ್ರಕರಣಗಳ ವಿಲೇವಾರಿಗೆ ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ವಯ ಅನುಸರಿಸಲಾಗುತ್ತಿರುವ ಕ್ರಮಗಳ ಕುರಿತು ಪರಿಶೀಲಿಸಿದರು.

ವಿಚಾರಣೆಗೆ ಆಗಮಿಸುವ ಮತದಾರರಿಗೆ ಅಗತ್ಯ ಮಾಹಿತಿ ಮತ್ತು ಮಾರ್ಗದರ್ಶನವನ್ನು ಸಮರ್ಪಕವಾಗಿ ಒದಗಿಸಬೇಕು. ಮತದಾರರ ಪಟ್ಟಿ ನಿಖರತೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸುವುದು ಅತ್ಯಂತ ಮಹತ್ವದ್ದಾಗಿದೆ ಎಂದರು.

ವಿಶೇಷ ತೀವ್ರ ಪರಿಷ್ಕರಣೆಯ ಪ್ರತಿಯೊಂದು ಹಂತದಲ್ಲಿಯೂ ಭಾರತ ಚುನಾವಣಾ ಆಯೋಗ ನಿಗದಿಪಡಿಸಿರುವ ಮಾರ್ಗಸೂಚಿ ಹಾಗೂ ವಿಧಾನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನೋಟಿಸ್ ಪಡೆದ ಮತದಾರರಿಗೆ ತಮ್ಮ ದಾಖಲೆ ಸಲ್ಲಿಸಲು ಹಾಗೂ ತಮ್ಮ ಅಹವಾಲು ತಿಳಿಸಲು ಸೂಕ್ತ ಅವಕಾಶ ಕಲ್ಪಿಸಬೇಕು. ಯಾವುದೇ ಅರ್ಹ ಮತದಾರರಿಗೆ ಅನಗತ್ಯ ತೊಂದರೆಯಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸ್ವೀಕರಿಸಲಾದ ದಾಖಲೆಗಳನ್ನು ನಿಯಮಾನುಸಾರ ಪರಿಶೀಲಿಸಿ, ಬಾಕಿ ಇರುವ ಪ್ರಕರಣಗಳನ್ನು ನಿಗದಿತ ಕಾಲಮಿತಿಯೊಳಗೆ ಪಾರದರ್ಶಕ, ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ವಿಚಾರಣಾ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದರು.

ನಗರದ ಹೊಸಹಳ್ಳಿಯಲ್ಲಿ ನಡೆಯುತ್ತಿದ್ದ ವಿಚಾರಣಾ ಪ್ರಕ್ರಿಯೆಗೆ ಡೀಸಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಉಪವಿಭಾಗಾಕಾರಿ ಶಿವಮೂರ್ತಿ, ಹೆಚ್ಚುವರಿ ಮತದಾರ ನೋಂದಣಾಧಿಕಾರಿಗಳು ಹಾಗೂ ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾದ ಸಂಬಂಧಪಟ್ಟ ಅಧಿಕಾರಿಗಳು ಹಾಜರಿದ್ದರು.ಯುವ ಮುಖಂಡ ಸಿ.ಪಿ.ಶಿವರಾಜುಗೆ ಚಿಕ್ಕಮರಳಿ ಗ್ರಾಮಸ್ಥರಿಂದ ಅಭಿನಂದನೆ

ಪಾಂಡವಪುರ:ಶ್ರೀಚನ್ನಿಗರಾಯ ಬೀರೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಜೆಡಿಎಸ್ ಯುವ ಮುಖಂಡ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಪುತ್ರ ಸಿ.ಪಿ.ಶಿವರಾಜು ಅವರನ್ನು ತಾಲೂಕಿನ ಚಿಕ್ಕಮರಳಿ ಗ್ರಾಮಸ್ಥರು ಅಭಿನಂದಿಸಿದರು.

ಚಿಕ್ಕಮರಳಿ ಗ್ರಾಮದ ಹೊರವಲಯದಲ್ಲಿ ಶ್ರೀಚನ್ನಿಗರಾಯಬೀರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಗ್ರಾಮಸ್ಥರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಯುವ ಮುಖಂಡ ಸಿ.ಪಿ.ಶಿವರಾಜು, ಗ್ರಾಮಸ್ಥರು ನನ್ನ ತಂದೆ ಸಿ.ಎಸ್.ಪುಟ್ಟರಾಜು ಅವರ ಮೇಲಿನ ಪ್ರೀತಿ, ಅಭಿಮಾನದಿಂದ ನನ್ನನ್ನು ಆಹ್ವಾನಿಸಿ ಅಭಿನಂದಿಸಿದಕ್ಕೆ ಧನ್ಯವಾದ ಅರ್ಪಿಸಿ,ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಪ್ರೀತಿ, ನಂಬಿಕೆಯನ್ನು ಉಳಿಸಿಕೊಳ್ಳುವ ಕೆಲಸ ಮಾಡುತ್ತೇನೆ ಎಂದರು.

ಈ ವೇಳೆ ಕನಗನಮರಡಿ ಸೊಸೈಟಿ ಮಾಜಿ ಅಧ್ಯಕ್ಷ ಹೆಚ್.ಜೆ.ರಾಮಕೃಷ್ಣ, ಗ್ರಾಪಂ ಮಾಜಿ ಅಧ್ಯಕ್ಷರಾದ ಪಿ.ರಮೇಶ್, ರುಕ್ಮಣಿ ಚಂದ್ರಶೇಖರ್, ಮುಖಂಡರಾದ ಸ್ವಾಮೀಗೌಡ, ಶಿವಲಿಂಗೇಗೌಡ, ಸೋಮಶೇಖರ್, ಸಿ.ಕೆ.ಪಾರ್ಥ, ಸತೀಶ್, ಸುಜೇಂದ್ರ, ಚಂದ್ರಶೇಖರ್, ಕೃಷ್ಣ, ಚಂದ್ರಮೌಳಿ, ಸುರೇಂದ್ರ, ಸಿ.ಎಸ್.ಪಾರ್ಥ, ಚೇತನ್, ಕೃಷ್ಣಕುಮಾರ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.