ನಗರಸಭೆಯಲ್ಲಿ ಚಿಕ್ಕಪುಟ್ಟ ಕಾರ್ಯಗಳಿಗೂ ಸಾರ್ವಜನಿಕರನ್ನು ವಿನಾಕಾರಣ ತಿಂಗಳಾನುಗಟ್ಟಲೆ ಅಲೆದಾಡಿಸುವುದು ಸರಿಯಲ್ಲ. ಸಾರ್ವಜನಿಕರ ಬಳಿ ಜವಾಬ್ದಾರಿಯಾಗಿ ನಡೆದುಕೊಳ್ಳಬೇಕು. ಗೌರವದಿಂದ ನಡೆದುಕೊಳ್ಳಬೇಕು, ಮಧ್ಯವರ್ತಿಗಳಿಗೆ ಅವಕಾಶ ನೀಡಬಾರದು,
ಕನ್ನಡಪ್ರಭ ವಾರ್ತೆ ಕೋಲಾರ
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ನಗರಸಭೆಗೆ ದಿಢೀರ್ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿ, ಸಿಬ್ಬಂದಿ ಕರ್ತವ್ಯ ನಿರ್ಲಕ್ಷ್ಯದ ವಿರುದ್ಧ ಕಿಡಿಕಾರಿದರು.ನಗರಸಭೆಯಲ್ಲಿದ್ದ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಅಹವಾಲು ಸ್ವೀಕರಿಸಿ, ಇ- ಖಾತೆ, ಖಾತೆ ತಿದ್ದುಪಡಿ, ಜನನ ಮರಣ, ವಿವಿಧ ಪರವಾನಗಿ, ಸ್ವಚ್ಛತೆ, ಕಸ ವಿಲೇವಾರಿ, ತೆರಿಗೆ ವಸೂಲಾತಿ, ನಗರಸಭೆ ಆಸ್ತಿ, ಬಾಡಿಗೆ ಹಾಗೂ ಬೀದಿ ಬದಿ ವ್ಯಾಪಾರಿಗಳ ಕರ ವಸೂಲಾತಿ, ವಿದ್ಯಾರ್ಥಿಗಳ ವೇತನ, ಕಾಮಗಾರಿಗಳು, ಟೆಂಡರ್‌ಗಳು ಇತ್ಯಾದಿಗಳಲ್ಲಿ ಲೋಪದೋಷಗಳು ಕಂಡುಬಂದಿರುವ ಕುರಿತು ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಣೆ ನಡೆಸಿ, ತರಾಟೆಗೆ ತೆಗೆದುಕೊಂಡರು.
ನಗರಸಭೆಯ ಆವರಣವನ್ನು ಸುತ್ತಾಡಿದ ಜಿಲ್ಲಾಧಿಕಾರಿಗಳು ಉಪಯೋಗಿಸದೆ ಇರುವಂಥ ವಾಹನಗಳು, ಟ್ಯಾಂಕರ್‌ಗಳು. ಕಂಟೈನರ್‌ಗಳು ಸೇರಿ ಇತರೆ ಪರಿಕರಗಳು ಎಲ್ಲೆಂದರಲ್ಲೇ ಇರುವುದನ್ನು ಕಂಡು ಇವುಗಳೆಲ್ಲಾ ಒಂದೇ ಕಡೆ ಇರಿಸಿ ಪುಸ್ತಕದಲ್ಲಿ ದಾಖಲಿಸಬೇಕು. ದುರಸ್ತಿ ಆಗುವುದನ್ನು ಮಾಡಿಸಿ ಮರುಬಳಕೆ ಮಾಡಬೇಕು. ಚಾಲನೆಯ ವಾಹನಗಳನ್ನು ಶೆಡ್‌ನಲ್ಲಿ ಕ್ರಮಬದ್ಧವಾಗಿ ನಿಲ್ಲಿಸಬೇಕು. ಸಾರ್ವಜನಿಕರ ವಾಹನಗಳನ್ನು ನಿಗದಿತ ಸ್ಥಳದಲ್ಲೇ ನಿಲುಗಡೆ ಮಾಡುವಂತೆ ಸೂಚಿಸಬೇಕು. ಫಲಕಗಳನ್ನು ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಕಚೇರಿಯ ಹಿಂಭಾಗದ ಆರೋಗ್ಯ ವಿಭಾಗದ ಕೊಠಡಿ, ದಾಸ್ತಾನು ಕೊಠಡಿಗಳನ್ನು ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದರು. ಕೊಠಡಿಗಳ ಮೇಲೆ ಫಲಕಗಳನ್ನು ಅಳವಡಿಸದಿದ್ದರೆ ಸಾರ್ವಜನಿಕರಿಗೆ ಗೊತ್ತಾಗುವುದಾದರೂ ಹೇಗೆಂದು ಪ್ರಶ್ನಿಸಿದರು.
ಕಚೇರಿಯ ಒಳಗಡೆಯ ಕೊಠಡಿಗಳಿಗೆ ಭೇಟಿ ನೀಡಿ, ಸಾರ್ವಜನಿಕರು ಕಚೇರಿಗೆ ಒಳಗೆ ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿಯಾಗಲು ಪರದಾಡುವಂತೆ ಇದೆ. ಕಚೇರಿಯ ಪ್ರಾರಂಭದ ಮುಂಭಾಗದಲ್ಲಿಯೇ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿಯಾಗಲು, ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಡಲು ಅನುಕೂಲವಾಗುವಂತೆ ಕ್ರಮ ಬದ್ಧವಾಗಿರಬೇಕು. ಯಾವುದೊಂದು ಯೋಜನೆಯನ್ನೂ ಬದ್ಧವಾಗಿ ರೂಪಿಸಿಲ್ಲ. ತೆರಿಗೆಗಳ ಪಾವತಿಸಲು ಸಾರ್ವಜನಿಕರು ಕಚೇರಿಯ ಒಳಗೆ ಪರದಾಡಬೇಕು, ನೀರಿನ ಸಿಬ್ಬಂದಿಯನ್ನು ಮಾಡಲು ಹುಡುಕಾಟ ನಡೆಸಬೇಕು, ಎಲ್ಲವೂ ಅವ್ಯವಸ್ಥೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಸಾರ್ವಜನಿಕರಿಗೆ ಸಂಬಂಧಪಟ್ಟ ದಾಖಲಾತಿ ಪುಸ್ತಕಗಳು ಟೇಬಲ್‌ಗಳಲ್ಲಿ ಎಲ್ಲೆಂದರಲ್ಲಿ ಹರಡಿರುವುದು ಕಂಡು ಕೆಂಡಾಮಂಡಲವಾದರು, ಸಾರ್ವಜನಿಕರು ಖಾತೆ ಮಾಡಿಸಲು ತಿಂಗಳಾನುಗಟ್ಟಲೇ ಅಲೆದಾಡಬೇಕಾ ಎಂದು ಪ್ರಶ್ನಿಸಿದ ಅವರು, ತೆರಿಗೆ ವಸೂಲಾತಿಯನ್ನು ನಿರೀಕ್ಷಿತ ಪ್ರಮಾಣದಲ್ಲಿ ಮಾಡುತ್ತಿಲ್ಲ. ಸಂಬಂಧಪಟ್ಟ ತೆರಿಗೆ ವಸೂಲಾತಿ ಮಾಡುವ ಸಿಬ್ಬಂದಿಗೆ ನಿಗದಿತ ತೆರಿಗೆ ವಸೂಲಾತಿಯ ಗುರಿ ನೀಡಬೇಕು. ತೆರಿಗೆ ಬಾಕಿಗಳನ್ನು ಕಟ್ಟುನಿಟ್ಟಾಗಿ ಕಾಲಕಾಲಕ್ಕೆ ವಸೂಲಾತಿ ಮಾಡಬೇಕು. ಬಾಕಿ ಇರುವವರಿಗೆ ನೋಟಿಸ್ ಜಾರಿ ಮಾಡಬೇಕು. ಬಾಡಿಗೆ ವಸೂಲಾತಿಗಳ ಬಗ್ಗೆ ನಿಗಾ ವಹಿಸದೆ ನಿರ್ಲಕ್ಷಿಸಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಬಾಕಿ ಇರಿಸಿಕೊಂಡಿರುವವರಿಗೆ ನೋಟಿಸ್ ಜಾರಿ ಮಾಡಿ ಎಂದು ಆಯುಕ್ತರಿಗೆ ಸೂಚಿಸಿದರು.
ನಗರಸಭಾ ವ್ಯಾಪ್ತಿಗೆ ಸೇರಿದ ಪಂಚಾಯಿತಿಗಳ ಆಸ್ತಿಗಳನ್ನು ನಗರಸಭೆಗೆ ಪರಿವರ್ತಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಕಂದಾಯಗಳನ್ನು ವಸೂಲಾತಿ ಮಾಡಬೇಕು. ನಗರಸಭೆ ಸೇರಿದ ೪- ೫ ಪಂಚಾಯಿತಿಗಳಲ್ಲಿ ತೆರಿಗೆಯನ್ನು ನಗರಸಭೆಯೇ ವಸೂಲಿ ಮಾಡ ಬೇಕಾಗಿದೆ. ನಗರಸಭೆಗೆ ಬರಬೇಕಾದ ಕೋಟ್ಯಾಂತರ ತೆರಿಗೆ ವಸೂಲಿ ಮಾಡದೆ ನಷ್ಟವುಂಟಾಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಕೂಡಲೇ ವಸೂಲಾತಿಗೆ ಕ್ರಮ ಜರುಗಿಸಬೇಕೆಂದು ಕಂದಾಯ ಅಧಿಕಾರಿಗೆ ಸೂಚಿಸಿದರು.ನಗರಸಭೆಯಲ್ಲಿ ಚಿಕ್ಕಪುಟ್ಟ ಕಾರ್ಯಗಳಿಗೂ ಸಾರ್ವಜನಿಕರನ್ನು ವಿನಾಕಾರಣ ತಿಂಗಳಾನುಗಟ್ಟಲೆ ಅಲೆದಾಡಿಸುವುದು ಸರಿಯಲ್ಲ. ಸಾರ್ವಜನಿಕರ ಬಳಿ ಜವಾಬ್ದಾರಿಯಾಗಿ ನಡೆದುಕೊಳ್ಳಬೇಕು. ಗೌರವದಿಂದ ನಡೆದುಕೊಳ್ಳಬೇಕು, ಮಧ್ಯವರ್ತಿಗಳಿಗೆ ಅವಕಾಶ ನೀಡಬಾರದು, ಕಚೇರಿಯಲ್ಲಿ ಸಿಬ್ಬಂದಿಯ ತಾತ್ಕಲಿಕವಾಗಿ ನೇಮಿಸಿಕೊಳ್ಳಲು ಪತ್ರ ಬರೆದು ಅನುಮತಿ ಪಡೆದುಕೊಂಡು ಕೆಲಸ ನಿರ್ವಹಿಸಬೇಕೆಂದು ಪೌರಾಯುಕ್ತ ನವೀನ್‌ಚಂದ್ರರಿಗೆ ಸಲಹೆ ನೀಡಿದರು.
ನ್ಯಾಯಾಲಯದ ಆದೇಶಗಳನ್ನುಕಟ್ಟುನಿಟ್ಟಾಗಿ ಪರಿಪಾಲಿಸಬೇಕು, ಕಾನೂನುಗಳನ್ನು ಯಾವುದೇ ಕಾರಣಕ್ಕೂ ಉಲ್ಲಂಘನೆಯಾಗದಂತೆ ಜಾಗೃತೆಯಿಂದ ಕಾರ್ಯನಿರ್ವಹಿಸಬೇಕು. ನ್ಯಾಯಾಲಯದಲ್ಲಿ ಬೇಕಾಬಿಟ್ಟಿ ಪ್ರಕರಣಗಳನ್ನು ದಾಖಲಿಸಿ ಕೈತೊಳೆದು ಕೊಳ್ಳದೆ ಪ್ರಕರಣಗಳ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ ಎಂದು ನೇಮಿಸಿಕೊಂಡಿರುವ ವಕೀಲರೊಡನೆ ಚರ್ಚಿಸಬೇಕು ಎಂದು ತಾಕೀತು ಮಾಡಿದರು.ಈ ವೇಳೆ ಪೌರಾಯುಕ್ತ ನವೀನ್‌ಚಂದ್ರ ಹಾಗೂ ಅಧಿಕಾರಿಗಳು, ಸಿಬ್ಬಂದಿ ಇನ್ನಿತರರಿದ್ದರು.