ಉದ್ಯಾನವನಗಳ ಸೌಂದರ್ಯಕ್ಕೆ ಆದ್ಯತೆ ನೀಡಲು ಡೀಸಿ ಡಾ.ಎಂ.ಆರ್.ರವಿ ಸೂಚನೆ

| Published : Sep 08 2025, 01:00 AM IST

ಉದ್ಯಾನವನಗಳ ಸೌಂದರ್ಯಕ್ಕೆ ಆದ್ಯತೆ ನೀಡಲು ಡೀಸಿ ಡಾ.ಎಂ.ಆರ್.ರವಿ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಅಧಿಕಾರಿಗಳು ಎಷ್ಟೇ ಕೆಲಸ ಮಾಡಿದರೂ ಸಾರ್ವಜನಿಕರ ಸಹಕಾರ ಇಲ್ಲದೆ ಸ್ವಚ್ಛತೆ ಸಾಧ್ಯವಿಲ್ಲ. ಆದ್ದರಿಂದ, ನಗರಸಭೆ ಅಧಿಕಾರಿಗಳೊಂದಿಗೆ ನಾಗರಿಕರು ಕೈಜೋಡಿಸಬೇಕು. ಪಾರ್ಕ್‌ಗಳನ್ನು ಸ್ವಚ್ಛವಾಗಿಡುವಂತೆ ಮನವಿ ಮಾಡುವ ಹಾಗೂ ವ್ಯಾಯಾಮ ಪರಿಕರಗಳನ್ನು ಬಳಸುವ ಕ್ರಮ ಕುರಿತ ಫಲಕಗಳನ್ನು ಅಳವಡಿಸುವಂತೆಯೂ ಸೂಚಿಸಲಾಯಿತು.

ಕನ್ನಡಪ್ರಭ ವಾರ್ತೆ ಕೋಲಾರ

ನಗರದ ಪ್ರಮುಖ ಉದ್ಯಾನವನಗಳ ಸ್ಥಿತಿಗತಿ ಪರಿಶೀಲನೆಗಾಗಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಭಾನುವಾರ ಬೆಳಗ್ಗೆ ಸೈಕಲ್ ರೌಂಡ್ಸ್ ನಡೆಸಿ, ಜಿಲ್ಲಾಕೇಂದ್ರವಾದ ಕೋಲಾರದಲ್ಲಿರುವ ಪಾರ್ಕ್‌ಗಳ ಸ್ಥಿತಿಗತಿ ವೀಕ್ಷಿಸಿದರು. ಈ ವೇಳೆ ನಗರಸಭೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸಾಥ್ ನೀಡಿದರು.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸರ್ವಜ್ಞ ಪಾರ್ಕ್, ಅಂಬೇಡ್ಕರ್ ಪಾರ್ಕ್, ಕುವೆಂಪು ಪಾರ್ಕ್ ಸೇರಿದಂತೆ ನಗರದ ವಿವಿಧ ಉದ್ಯಾನವನಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಭೇಟಿಯು ಭಾನುವಾರದಿಂದ ನಡೆದ ‘ಸ್ವಚ್ಛತಾ ಹೀ ಸೇವಾ’ ಆಂದೋಲನದ ಭಾಗವಾಗಿತ್ತು. ಅ.೨ರವರೆಗೆ ನಡೆಯಲಿರುವ ಈ ಅಭಿಯಾನದಲ್ಲಿ ಪ್ರತಿ ಭಾನುವಾರ ನಗರದ ಎಲ್ಲಾ ಉದ್ಯಾನವನಗಳನ್ನು ಸಾರ್ವಜನಿಕರ ಸಹಭಾಗಿತ್ವದಲ್ಲಿ ಸ್ವಚ್ಛಗೊಳಿಸಲು ನಿರ್ಧರಿಸಲಾಗಿದೆ.

ಪಾರ್ಕ್‌ಗಳ ನಿರ್ವಹಣೆಗೆ ಆಯುಕ್ತರಿಗೆ ಸೂಚನೆ:

ಕೋಲಾರದಲ್ಲಿ ಒಟ್ಟು ೧೯ ಪಾರ್ಕ್‌ಗಳಿವೆ, ಪಾರ್ಕ್‌ಗಳಲ್ಲಿ ಅನಿಯಮಿತವಾಗಿ ಬೆಳೆದ ಗಿಡ- ಮರಗಳನ್ನು ಕತ್ತರಿಸಿ ಸರಿಪಡಿಸಲು ಡೀಸಿ ಸೂಚಿಸಿದರು. ಅಲ್ಲದೆ, ನಡಿಗೆ ಪಥವನ್ನು (ವಾಕಿಂಗ್ ಟ್ರ್ಯಾಕ್) ಸಮತಟ್ಟುಗೊಳಿಸಿ, ನಡೆದಾಡುವವರಿಗೆ ಅನುಕೂಲ ಕಲ್ಪಿಸಲು ತಿಳಿಸಲಾಯಿತು.

ಸುಮಾರು ೮೫ ವರ್ಷಗಳಷ್ಟು ಹಳೆಯದಾದ ಸರ್ವಜ್ಞ ಪಾರ್ಕ್‌ನಲ್ಲಿರುವ ಬ್ಯಾಂಡ್ ಸ್ಟ್ಯಾಂಡ್ ಮತ್ತು ರೇಡಿಯೋ ಕಿಯೋಸ್ಕ್‌ನನ್ನು ದುರಸ್ಥಿಪಡಿಸಿ ಬಣ್ಣ ಹಚ್ಚಿಸುವಂತೆ ತಿಳಿಸಿದರು. ವಾರಾಂತ್ಯದಲ್ಲಿ ಇಂತಹ ಸ್ಥಳಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲು ಚಿಂತಿಸುವಂತೆಯೂ ಸಲಹೆ ನೀಡಿದರು.

ಎಲ್ಲಾ ಪಾರ್ಕ್‌ಗಳಲ್ಲಿ ಕುಳಿತುಕೊಳ್ಳಲು ಕಲ್ಲಿನ ಬೆಂಚುಗಳು, ಕಾರಂಜಿಗಳು ಹಾಗೂ ವಿದ್ಯುತ್ ದೀಪಗಳನ್ನು ಸರಿಪಡಿಸಿ ಉತ್ತಮವಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮಳೆಗಾಲದಲ್ಲಿ ಪಾರ್ಕ್‌ಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಹಾಗೂ ಕೊಳಚೆ ನೀರು ಕಾಲುವೆಗಳಲ್ಲಿ ಕಸ ಸೇರದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.

ಕಸ ಸುರಿಯುವವರ ವಿರುದ್ಧ ಕ್ರಮ:

ಕೋಲಾರಮ್ಮ ಸ್ವಚ್ಛತಾ ಕಾರ್ಯಪಡೆ ರಚಿಸಿ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಕಸ ಸುರಿಯುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಡೀಸಿ ಸೂಚಿಸಿದರು. ಇಂತಹ ಸ್ಥಳಗಳಲ್ಲಿ ನಗರಸಭೆ ಅಧಿಕಾರಿಗಳು ‘ಕೋಲಾರಮ್ಮ ಸ್ವಚ್ಛತಾ ಕಾರ್ಯಪಡೆ’ಯನ್ನು ನಿಯೋಜಿಸಿ ಕಣ್ಗಾವಲು ವಹಿಸುವಂತೆ ನಿರ್ದೇಶನ ನೀಡಿದರು.

ಅಮೃತ್ ಯೋಜನೆಯಡಿ ಉದ್ಯಾನಗಳಿಗೆ ಕಾಯಕಲ್ಪ:

೧೫ನೇ ಹಣಕಾಸು ಯೋಜನೆಯಡಿ ‘ಅಮೃತ್ ನಗರೋತ್ಥಾನ’ ಕಾರ್ಯಕ್ರಮದಡಿಯಲ್ಲಿ ಉದ್ಯಾನಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರಲ್ಲದೆ, ಪಾರ್ಕ್‌ಗಳಲ್ಲಿ ಸಂಗ್ರಹವಾಗುವ ಉದುರಿದ ಎಲೆಗಳು ಮತ್ತು ಹಸಿ ಕಸವನ್ನು ಪಾರ್ಕ್‌ನ ಒಂದು ಮೂಲೆಯಲ್ಲಿ ಗುಂಡಿ ತೋಡಿ ಸಂಗ್ರಹಿಸಿದರೆ ಅದರಿಂದ ಸಾವಯವ ಗೊಬ್ಬರ ತಯಾರಿಸಬಹುದು ಎಂದು ಸಲಹೆ ನೀಡಿದರು.

ಸಾರ್ವಜನಿಕ ಸಹಭಾಗಿತ್ವಕ್ಕೆ ಒತ್ತು:

ಅಧಿಕಾರಿಗಳು ಎಷ್ಟೇ ಕೆಲಸ ಮಾಡಿದರೂ ಸಾರ್ವಜನಿಕರ ಸಹಕಾರ ಇಲ್ಲದೆ ಸ್ವಚ್ಛತೆ ಸಾಧ್ಯವಿಲ್ಲ. ಆದ್ದರಿಂದ, ನಗರಸಭೆ ಅಧಿಕಾರಿಗಳೊಂದಿಗೆ ನಾಗರಿಕರು ಕೈಜೋಡಿಸಬೇಕು. ಪಾರ್ಕ್‌ಗಳನ್ನು ಸ್ವಚ್ಛವಾಗಿಡುವಂತೆ ಮನವಿ ಮಾಡುವ ಹಾಗೂ ವ್ಯಾಯಾಮ ಪರಿಕರಗಳನ್ನು ಬಳಸುವ ಕ್ರಮ ಕುರಿತ ಫಲಕಗಳನ್ನು ಅಳವಡಿಸುವಂತೆಯೂ ಸೂಚಿಸಲಾಯಿತು.

ನಾಗರಿಕ ವೇದಿಕೆ ರಚನೆಗೆ ಕರೆ:

ನಗರದ ಸಮಾನ ಮನಸ್ಕರು ಸೇರಿ ಸಮಿತಿ ರಚಿಸಿಕೊಂಡು ಉದ್ಯಾನಗಳ ನಿರ್ವಹಣೆ ಮತ್ತು ಸ್ವಚ್ಛತಾ ಪಾಲನೆಗೆ ಆಸಕ್ತಿ ವಹಿಸುವಂತೆ ಡೀಸಿ ಮನವಿ ಮಾಡಿ, ಮಕ್ಕಳಿಗೆ ಇದಕ್ಕಿಂತ ಉತ್ತಮ ಸ್ಥಳ ಸಿಗಲು ಸಾಧ್ಯವಿಲ್ಲ ಎಂದರು.

ಸ್ವಚ್ಛತಾ ಆಂದೋಲನವು ಅಕ್ಟೋಬರ್ ೨ರವರೆಗೆ ನಡೆಯಲಿದ್ದು, ಪ್ರತಿಯೊಬ್ಬರೂ ‘ಸ್ವಚ್ಛ ಭಾರತ, ಸ್ವಚ್ಛ ಕೋಲಾರ’ ಎಂಬ ಧ್ಯೇಯದೊಂದಿಗೆ ಇದರಲ್ಲಿ ಪಾಲ್ಗೊಳ್ಳಬೇಕು. ಸ್ವಚ್ಛತೆ ಅಭಿಯಾನ ವ್ಯಕ್ತಿ ಮತ್ತು ಮನೆಗಳಿಂದಲೇ ಆರಂಭವಾಗಬೇಕು ಎಂದು ಡಾ.ಎಂ.ಆರ್.ರವಿ ತಿಳಿಸಿದರು.

ಸ್ವಚ್ಛತಾ ಹೀ ಸೇವಾ ಅಭಿಯಾನದ ನೆನಪಿಗಾಗಿ ಎಲ್ಲಾ ಉದ್ಯಾನಗಳಲ್ಲಿ ಸಸಿಗಳನ್ನು ನೆಡಲಾಯಿತು.

ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ರಮೇಶ್, ಉಪಾಧ್ಯಕ್ಷೆ ಸಂಗೀತಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಅಂಬಿಕಾ, ಶ್ರೀನಿವಾಸ್, ನಗರಸಭೆ ಆಯುಕ್ತ ನವೀನ್ ಚಂದ್ರ, ಆರೋಗ್ಯ ನಿರೀಕ್ಷಕ ನವಾಜ್ ಇದ್ದರು.