ಸಾರಾಂಶ
ಹಾವೇರಿ: ನಗರದ ವಿವಿಧ ರಸಗೊಬ್ಬರ ಮಾರಾಟ ಮಳಿಗೆಗಳಿಗೆ ಹಾಗೂ ದಾಸ್ತಾನು ಗೋದಾಮುಗಳಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರು ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶುಕ್ರವಾರ ಬೆಳಗ್ಗೆ ನಗರದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ, ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸುವ ಪರಿಕರಗಳ ಕುರಿತು ಮಾಹಿತಿ ಪಡೆದರು. ನಂತರ ಅಧಿಕಾರಿಗಳೊಂದಿಗೆ ನಗರದ ರಸಗೊಬ್ಬರ ಮಾರಾಟಗಾರರಾದ ಮೃತ್ಯುಂಜಯ ಅಗ್ರೋ ಕೇಂದ್ರ ಹಾಗೂ ಮಹೇಶ ಟ್ರೇಡರ್ಸ್ ಮಾರಾಟ ಕೇಂದ್ರಗಳಿಗೆ ಭೇಟಿ ನೀಡಿ ದಾಖಲಾತಿಗಳನ್ನು ಪರಿಶೀಲಿಸಿದರು.ಕೇಂದ್ರ ಸರ್ಕಾರದ ಸಬ್ಸಿಡಿ ಯೋಜನೆಯಡಿ ವಿತರಿಸುವ ರಸಗೊಬ್ಬರಗಳನ್ನು ಕಡ್ಡಾಯವಾಗಿ ಪಿಒಎಸ್ ಯಂತ್ರದ ಮೂಲಕ ರೈತರ ಆಧಾರ ಸಂಖ್ಯೆ ಬಳಸಿ ಬಯೋಮೆಟ್ರಿಕ್ ಅಥವಾ ಮೊಬೈಲ್ ಒಟಿಪಿ ಸಂಖ್ಯೆಯನ್ನು ದೃಢೀಕರಿಸಿ ಮಾರಾಟ ಮಾಡಬೇಕು ಎಂದು ಮಾರಾಟಗಾರರಿಗೆ ಸೂಚನೆ ನೀಡಿದರು. ಭೌತಿಕ ದಾಸ್ತಾನು ವ್ಯತ್ಯಾಸವಿದ್ದಲ್ಲಿ ಕ್ರಮ ಜರುಗಿಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ರಸಗೊಬ್ಬರ ದಾಸ್ತಾನು ಗೋದಾಮುಗಳಿಗೆ ಭೇಟಿ ನೀಡಿ, ವಿವಿಧ ಕಂಪನಿಗಳ ವಿವಿಧ ಗ್ರೇಡ್‌ಗಳ ರಸಗೊಬ್ಬರಗಳ ದಾಸ್ತಾನು ತಪಾಸಣೆ ನಡೆಸಲಾಯಿತು. ಯುರಿಯಾ, ಡಿಎಪಿ, ಎಂಒಪಿ, ಹಾಗೂ ವಿವಿಧ ಕಾಂಪ್ಲೆಕ್ಸ್ ರಸಗೊಬ್ಬರ ದಾಸ್ತಾನಿದ್ದು, ಜತೆಗೆ ಲಘು ಪೋಷಕಾಂಶಗಳಾದ ಜಿಂಕ್ ಸಲ್ಪೇಟ್, ಕ್ಯಾಲ್ಸಿಯಂ ಮ್ಯಾಗ್ನೆಷಿಯಂ ಸಲ್ಪೇಟ್, ಗಂಧಕ, ಬೋರಾನ್, ಬೇವಿನ ಹಿಂಡಿ ಗೊಬ್ಬರ ಹಾಗೂ ಇತರೆ ಅವಶ್ಯಕ ಕೃಷಿ ಪರಿಕರಗಳನ್ನು ಮಾರಾಟ ಮಳಿಗೆಗಳಲ್ಲಿ ದಾಸ್ತಾನು ಮಾಡಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.ಭಾರತ್ ಬ್ರ್ಯಾಂಡ್: ಸರ್ಕಾರದ ನಿರ್ದೇಶನದಂತೆ ವಿವಿಧ ಕಂಪನಿಗಳ ಸಬ್ಸಿಡಿ ರಸಗೊಬ್ಬರಗಳು ಈಗ ಭಾರತ್ ಬ್ರ್ಯಾಂಡ್‌ನಡಿ ಮಾರಾಟ ಮಾಡಲಾಗುತ್ತಿದೆ. ರಸಗೊಬ್ಬರಗಳ ಚೀಲಗಳ ಮೇಲೆ ಭಾರತ್ ಯುರಿಯಾ, ಭಾರತ್ ಡಿಎಪಿ., ಭಾರತ್ 10:26:26 ಹೀಗೆ ವಿವಿಧ ಗ್ರೇಡ್‌ಗಳ ರಸಗೊಬ್ಬರ ಈಗ ಭಾರತ್ ಬ್ರ್ಯಾಂಡ್‌ನಡಿ ಮಾರಾಟ ಮಾಡಲಾಗುತ್ತಿದೆ. ಸರ್ಕಾರ ನೀಡುವ ಸಬ್ಸಿಡಿ ಮೊತ್ತ ಹಾಗೂ ಎಂಆರ್‌ಪಿ ಬೆಳೆಗಳನ್ನು ಪ್ರತಿ ಚೀಲಗಳ ಮೇಲೆ ಪ್ರಿಂಟ್ ಮಾಡಲಾಗಿರುತ್ತದೆ ಹಾಗೂ ಉತ್ಪಾದಕರ ವಿವರಗಳನ್ನೂ ನಮೂದು ಮಾಡಲಾಗಿರುತ್ತದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.ಪ್ರತ್ಯೇಕ ಬಣ್ಣದ ಚೀಲಗಳು: ವಿವಿಧ ಗ್ರೇಡ್ ಸಬ್ಸಿಡಿ ರಸಗೊಬ್ಬರಕ್ಕೆ ಪ್ರತ್ಯೇಕ ಬಣ್ಣದ ಚೀಲಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಯುರಿಯಾ ರಸಗೊಬ್ಬರಕ್ಕೆ ಹಳದಿ ಬಣ್ಣದ ಚೀಲ, ಡಿಎಪಿ ರಸಗೊಬ್ಬರಕ್ಕೆ ಹಸಿರು ಬಣ್ಣದ ಚೀಲ, ಪೊಟ್ಯಾಷ್ ರಸಗೊಬ್ಬರಕ್ಕೆ ಕೆಂಪು ಬಣ್ಣದ ಚೀಲ ಹಾಗೂ ಕಾಂಪ್ಲೆಕ್ಸ್ ರಸಗೊಬ್ಬರವನ್ನು ನೀಲಿ ಬಣ್ಣದ ಚೀಲಗಳಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿದೆ. ಯಾವುದೇ ಕಂಪನಿಯ ರಸಗೊಬ್ಬರ ನಿರ್ದಿಷ್ಟ ಬಣ್ಣದ ಚೀಲಗಳಲ್ಲಿ ಭಾರತ್ ಬ್ರಾಂಡ್‌ನಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಡಾ. ಮಲ್ಲಿಕಾರ್ಜುನ ಕೆ., ತಾಲೂಕು ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ ಬಿ.ಎಚ್., ಕೃಷಿ ಅಧಿಕಾರಿ ಬಸನಗೌಡ ಪಾಟೀಲ ಇದ್ದರು.