ಅರ್ಜಿಗಳ ಶೀಘ್ರ ವಿಲೇವಾರಿಗೆ ಡಿಸಿ ಗೋವಿಂದ ರೆಡ್ಡಿ ಸೂಚನೆ

| Published : Aug 07 2024, 01:04 AM IST

ಸಾರಾಂಶ

ಸಕಾಲದಲ್ಲಿ ಅರ್ಜಿಗಳ ವಿಲೇವಾರಿ ಸಮರ್ಪಕ ಕೆಲಸ ನಿರ್ವಹಣೆಯಾಗದಿದ್ದರೆ ಸಂಬಂಧಿಸಿದ ಅಧಿಕಾರಿಗಳಿಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು.

ಗದಗ: ಸಕಾಲ ಯೋಜನೆಯ ಅನುಷ್ಠಾನದಲ್ಲಿ ಜಿಲ್ಲೆ ಇನ್ನೂ ಉತ್ತಮ ಪ್ರಗತಿ ಸಾಧಿಸಲು ಸ್ವೀಕರಿಸಿದ ಅರ್ಜಿಗಳನ್ನು ನಿಗದಿತ ಸಮಯದಲ್ಲಿಯೇ ವಿಲೇವಾರಿ ಮಾಡಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.ಅವರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸಕಾಲ ಯೋಜನೆಯ ಜಿಲ್ಲಾ ಮಟ್ಟದ ವಿವಿಧ ಇಲಾಖಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಧಿಕಾರಿಗಳು ಸಕಾಲ ಯೋಜನೆ ಕುರಿತು ಹೆಚ್ಚು ನಿಗಾ ವಹಿಸುವ ಮೂಲಕ ಯಶಸ್ವಿಗೊಳಿಸುವುದರೊಂದಿಗೆ ಸಾರ್ವಜನಿಕರಿಗೆ ಸಕಾಲದಲ್ಲಿ ಸೇವೆ ಒದಗಿಸಬೇಕು. ಈ ಕುರಿತು ನಿರ್ಲಕ್ಷ್ಯ ಮಾಡಬಾರದು ಎಂದು ಸೂಚಿಸಿದರು.

ಪ್ರತಿದಿನ ಅಧಿಕಾರಿಗಳು ಕಚೇರಿಯಲ್ಲಿ ಸಕಾಲ ನಿರ್ವಹಿಸುವ ಕೆಲಸಗಾರರೊಂದಿಗೆ ಚರ್ಚಿಸುವ ಮೂಲಕ ಸಕಾಲ ಅರ್ಜಿಗಳ ವಿಲೇವಾರಿಗೆ ಆದ್ಯತೆ ವಹಿಸಬೇಕು. ಜಿಲ್ಲೆಯು ಸಕಾಲ ಯೋಜನೆಯಡಿ ಉತ್ತಮ ಪ್ರಗತಿಯ ಹಂತದಲಿರುವಂತೆ ನೋಡಿಕೊಳ್ಳುವುದು ಪ್ರತಿ ಅಧಿಕಾರಿ ನೌಕರರ ಜವಾಬ್ದಾರಿ ಎಂದರಿತು ಕರ್ತವ್ಯ ನಿರ್ವಹಿಸಬೇಕೆಂದರು.

ಸಕಾಲ ಯೋಜನೆಯಡಿ ಸ್ವೀಕರಿಸಿದ ಅರ್ಜಿಗಳನ್ನು ವಿನಾಕಾರಣ ತಿರಸ್ಕಾರ ಮಾಡಬಾರದು ಹಾಗೂ ಸ್ವೀಕರಿಸಿದ ಅರ್ಜಿಗಳಿಗೆ ಕಾಲಮಿತಿಯೊಳಗೆ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು. ಸಕಾಲದಲ್ಲಿ ಅರ್ಜಿಗಳ ವಿಲೇವಾರಿ ಸಮರ್ಪಕ ಕೆಲಸ ನಿರ್ವಹಣೆಯಾಗದಿದ್ದರೆ ಸಂಬಂಧಿಸಿದ ಅಧಿಕಾರಿಗಳಿಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಸಕಾಲ ಯೋಜನೆಯ ಯಶಸ್ವಿಗಾಗಿ ಅಧಿಕಾರಿಗಳು ಜವಾಬ್ದಾರಿಯಿಂದ ಕರ್ತವ್ಯನಿರ್ವಹಿಸುವಂತೆ ತಿಳಿಸಿದರು.

ಸಕಾಲ ನೋಡಲ್ ಅಧಿಕಾರಿಗಳು ಮಾತನಾಡಿ,ಜೂನ್ 2024ರ ಮಾಹೆಯಲ್ಲಿ ಜಿಲ್ಲೆಯಲ್ಲಿ ಸಕಾಲ ಯೋಜನೆಯಡಿ 52671 ಅರ್ಜಿಗಳು ಸ್ವೀಕೃತಗೊಂಡಿದ್ದು ಆ ಪೈಕಿ 51163 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 4020 ಅರ್ಜಿಗಳು ತಿರಸ್ಕೃತಗೊಂಡಿದ್ದು, 372 ಅರ್ಜಿಗಳನ್ನು ನಿಗದಿತ ಅವಧಿ ಮೀರಿದ ನಂತರ ವಿಲೇವಾರಿ ಮಾಡಲಾಗಿದೆ. ಜೂನ್ ಮಾಹೆಯಲ್ಲಿ ಸಕಾಲ ಯೋಜನೆಯ ಪ್ರಗತಿಯಲ್ಲಿ ಜಿಲ್ಲೆಯು 8ನೇ ಸ್ಥಾನದಲ್ಲಿತ್ತು. ಜುಲೈ 2024ರ ಮಾಹೆಯಲ್ಲಿ ಜಿಲ್ಲೆಯಲ್ಲಿ ಸಕಾಲ ಯೋಜನೆಯಡಿ 57502 ಅರ್ಜಿಗಳು ಸ್ವೀಕೃಗೊಂಡಿದ್ದು ಆ ಪೈಕಿ 55926 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 5676 ಅರ್ಜಿಗಳು ತಿರಸ್ಕೃತಗೊಂಡಿದ್ದು 888 ಅರ್ಜಿಗಳನ್ನು ನಿಗದಿತ ಅವಧಿ ಮೀರಿದ ನಂತರ ವಿಲೇವಾರಿ ಮಾಡಲಾಗಿದೆ. ಜುಲೈ 2024ರ ವರೆಗೆ ವಿವಿಧ ಇಲಾಖೆಗಳಡಿ ಸಕಾಲ ಯೋಜನೆಯಡಿ ಒಟ್ಟಾರೆ 59913 ಅರ್ಜಿಗಳನ್ನು ವಿಲೇವಾರಿಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು. ಈ ವೇಳೆ ಜಿಪಂ ಸಿಇಒ ಭರತ್.ಎಸ್., ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ.ಎಂ., ಉಪವಿಭಾಗಾಧಿಕಾರಿ ಗಂಗಪ್ಪ, ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಶಶಿಕಾಂತ ಕೋಟಿಮನಿ, ಹೆಸ್ಕಾಂ ಇಇ ರಾಜೇಶ ಕಲ್ಯಾಣ ಶೆಟ್ಟರ್, ಬಿಸಿಎಂ ಜಿಲ್ಲಾ ಅಧಿಕಾರಿ ರವಿ ಗುಂಜೀಕರ್, ಡಿಡಿಎಲ್‍ಆರ್ ರುದ್ರಣ್ಣಗೌಡ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಅಮಿತ ಬಿದರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.