ಗೋವನಕೊಪ್ಪ ಗ್ರಾಮದಲ್ಲಿ ಬೆಳೆಹಾನಿ ವೀಕ್ಷಿಸಿದ ಡಿಸಿ

| Published : Aug 29 2025, 01:00 AM IST

ಗೋವನಕೊಪ್ಪ ಗ್ರಾಮದಲ್ಲಿ ಬೆಳೆಹಾನಿ ವೀಕ್ಷಿಸಿದ ಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಮಲಪ್ರಭಾ ನದಿ ಪ್ರವಾಹದಿಂದ ಹಾನಿಗೊಳಗಾದ ಬಾದಾಮಿ ತಾಲೂಕಿನ ಗೋವನಕೊಪ್ಪದ ಗ್ರಾಮ ವಿವಿಧ ಕೃಷಿ, ತೋಟಗಾರಿಕೆ ಬೆಳೆ ಹಾಗೂ ಶಾಲಾ ಕೊಠಡಿಗಳನ್ನು ಜಿಲ್ಲಾಧಿಕಾರಿ ಸಂಗಪ್ಪ ಗುರುವಾರ ವೀಕ್ಷಣೆ ಮಾಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮಲಪ್ರಭಾ ನದಿ ಪ್ರವಾಹದಿಂದ ಹಾನಿಗೊಳಗಾದ ಬಾದಾಮಿ ತಾಲೂಕಿನ ಗೋವನಕೊಪ್ಪದ ಗ್ರಾಮ ವಿವಿಧ ಕೃಷಿ, ತೋಟಗಾರಿಕೆ ಬೆಳೆ ಹಾಗೂ ಶಾಲಾ ಕೊಠಡಿಗಳನ್ನು ಜಿಲ್ಲಾಧಿಕಾರಿ ಸಂಗಪ್ಪ ಗುರುವಾರ ವೀಕ್ಷಣೆ ಮಾಡಿದರು.

ಗೋವನಕೊಪ್ಪ ಗ್ರಾಮಕ್ಕೆ ಬೇಟಿ ನೀಡಿದ ಜಿಲ್ಲಾಧಿಕಾರಿಗಳು ಅತಿವೃಷ್ಟಿ, ಪ್ರವಾಹದಿಂದ ಸರ್ವೇ ನಂ.11/1ರ ಭೀಮಪ್ಪ ಹೂವಪ್ಪ ಯರಗೊಪ್ಪ ಅವರ ಜಮೀನಿನಲ್ಲಿ ಹಾನಿಯಾದ ಈರುಳ್ಳಿ ಬೆಳೆ ವೀಕ್ಷಣೆ ಮಾಡಿದರು. ಸರ್ವೇ ನಂ.49/2ರ ಬಾಳಪ್ಪ ಕೊಟಗಿ ಜಮೀನಿನಲ್ಲಿ ಬೆಳೆದ ಪೇರಲ, ಸರ್ವೇ ನಂ.50/3ರ ತುಳಸಿಗಿರೆಪ್ಪ ಸಣ್ಣಪ್ಪನವರ, ಸರ್ವೇ ನಂ.50/4ರ ಹೂಳಿಯಪ್ಪ ಸಣ್ಣಪ್ಪನವರ ಜಮೀನಿನಲ್ಲಿ ಬೆಳೆದ ಕಬ್ಬು ಹಾಗೂ ಸರ್ವೇ ನಂ.8/6 ಯಂಕಪ್ಪ ಕರಕಿಕಟ್ಟಿ ಅವರ ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳ ಹಾನಿಯಾಗಿರುವುದನ್ನು ವೀಕ್ಷಣೆ ಮಾಡಿದರು. ಜಮೀನಿನಲ್ಲಿ ನೀರಿನ ಮಟ್ಟ ಕಡಿಮೆಯಾದ ನಂತರ ವಿವಿಧ ಇಲಾಖೆಯಿಂದ ಜಂಟಿ ಸಮೀಕ್ಷೆ ಕೈಗೊಂಡು ಸೂಕ್ತ ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಗೋವನಕೊಪ್ಪ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ ಶಾಲಾ ಕೊಠಡಿಗಳು ಶಿಥಿಲಗೊಂಡಿರುವುದನ್ನು ಕಂಡು ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಾಣ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಪಾಠ ಬೋಧನೆಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಮುಖ್ಯಶಿಕ್ಷಕರಿಗೆ ಸೂಚನೆ ನೀಡಿದರು. ನಂತರ ಗ್ರಾಮದಲ್ಲಿರುವ ಸೇತುವೆಗೆ ಭೇಟಿ ನೀಡಿ ನೀರಿನಮಟ್ಟ ಪರಿಶೀಲಿಸಿದರು. ನದಿ ಪಾತ್ರದಲ್ಲಿ ಒತ್ತುವರಿಯಾಗಿರುವುದನ್ನು ಗಮನಿಸಿ, ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯ ಕೇಂದ್ರ ದಿಂದ ಕೂಡಲೇ ನಕಾಶೆಯನ್ನು ಪಡೆದು ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಬಾದಾಮಿ ತಹಶೀಲ್ದಾರ ಕಾವ್ಯಶ್ರೀಗೆ ಸೂಚಿಸಿದರು.

ಹಾನಿ ವೀಕ್ಷಣೆ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕ ಅಶೋಕ ತಿರಕನ್ನವರ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಬಾಳನಗೌಡ ಪಾಟೀಲ, ಕುಳಗೇರಿ ಹೋಬಳಿ ಮಟ್ಟದ ಕಂದಾಯ ನಿರೀಕ್ಷಕ ಶ್ರೀಧರ ವಿಶ್ವಕರ್ಮ ಹಾಗೂ ಗ್ರಾಮ ಲೆಕ್ಕಾಧಿಕಾರಿ ಬಸವರಾಜ ಹಳ್ಳೂರ ಸೇರಿದಂತೆ ಇತರರು ಇದ್ದರು.