ಕ್ರಷರ್‌ ಕೆಲಸ ಆರಂಭಿಸದಂತೆ ಡೀಸಿ ಸೂಚನೆ

| Published : Dec 13 2024, 12:47 AM IST

ಸಾರಾಂಶ

ಗುಂಡ್ಲುಪೇಟೆ ತಾಲೂಕಿನ ಅಗತಗೌಡನಹಳ್ಳಿಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಅಗತಗೌಡನಹಳ್ಳಿ ಗ್ರಾಮದ ಬಳಿ ಕ್ರಷರ್‌ ಮತ್ತು ಎಂ.ಸ್ಯಾಂಡ್‌ ಘಟಕ ವಿರೋಧ ಸಂಬಂಧ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತ ಗ್ರಾಮಕ್ಕೆ ಭೇಟಿ ನೀಡಿ ರೈತರು ಹಾಗೂ ಗ್ರಾಮಸ್ಥರಿಂದ ಮಾಹಿತಿ ಸಂಗ್ರಹಿಸಿದರು.

ಗ್ರಾಮದ ಅರಳಿಕಟ್ಟೆ ಬಳಿ ಗ್ರಾಮಸ್ಥರೊಂದಿಗೆ ಸಂವಾದದ ರೀತಿಯಲ್ಲಿ ಮಾಹಿತಿ ಕಲೆ ಹಾಕುವ ವೇಳೆ ಮಾಜಿ ಸಂಸದ ಎ.ಸಿದ್ದರಾಜು ಮಾತನಾಡಿ, ಗ್ರಾಮದ ಬಳಿ ಕ್ರಷರ್‌ ಇದೆ. ಇದರಿಂದ ಜನರಿಗೆ, ರೈತರಿಗೆ ತೊಂದರೆಯಾಗುತ್ತದೆ. ಕ್ರಷರ್‌ ಈಗ ನಿಗದಿಪಡಿಸಿದ ಸ್ಥಳದಲ್ಲಿ ಬೇಡ, ಬೇರೆ ಕಡೆ ಮಾಡಿಕೊಳ್ಳಲಿ ನಮ್ಮದೇನು ತಕರಾರಿಲ್ಲ ಎಂದರು. ಕ್ರಷರ್‌ ಆರಂಭಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಕ್ರಷರ್‌ ಮಾಲೀಕರು ಹೊರಗಡೆ ಜನ ಕರೆ ತಂದು ಗಲಾಟೆಗೆ ಕಾರಣರಾಗುತ್ತಿದ್ದಾರೆ. ಗ್ರಾಮದಲ್ಲಿ ನೆಮ್ಮದಿ ಬೇಕು. ಆ ಕೆಲಸಕ್ಕೆ ನೀವು ಕಾರಣರಾಗಬೇಕು ಎಂದು ಗ್ರಾಮಸ್ಥರು ಕೂಡ ಎಸ್ಪಿಯವರನ್ನು ಕೋರಿದರು.

ಕ್ರಷರ್‌ ಅನುಮತಿ ನೀಡಿದ್ದಾರೆ ಎಂದು ಕ್ರಷರ್‌ ಕೆಲಸ ಆರಂಭಿಸಲು ಹೊರಟಿದ್ದಾರೆ. ಆದರೆ ಕ್ರಷರ್‌ ಬಳಿಯ ರೈತರು ಹಾಗೂ ಜನರ ವಿರೋಧವಿದೆ. ಈ ಕಾರಣದಿಂದ ಕ್ರಷರ್‌ ಆರಂಭಕ್ಕೆ ನೀಡಿದ ಅನುಮತಿ ರದ್ದು ಪಡಿಸಬೇಕು ಎಂದು ಮನವಿ ಮಾಡಿದರು. ರೈತರು ಹಾಗೂ ಗ್ರಾಮಸ್ಥರ ಮನವಿ ಆಲಿಸಿದ ಬಳಿಕ ಮಾತನಾಡಿದ ಎಸ್ಪಿ ಡಾ.ಬಿ.ಟಿ.ಕವಿತ ಅವರು, ಜಿಲ್ಲಾಧಿಕಾರಿಗಳೇ ಕೆಲಸ ನಿಲ್ಲಿಸಿ ಎಂದು ಹೇಳಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಏಕೆ ಅನುಮತಿ ನೀಡಿದೆ ಎಂದು ರೈತರನ್ನೇ ಪ್ರಶ್ನಿಸಿದ ರೀತಿ ಕೇಳಿದರು.

ಕ್ರಷರ್‌ ಆರಂಭದಿಂದ ಗ್ರಾಮದಲ್ಲಿ ಶಾಂತಿ ಕದಡಿದೆ. ಈ ಕಾರಣದಿಂದ ಕ್ರಷರ್‌ ಅನುಮತಿ ರದ್ದು ಪಡಿಸಿ ಎಂದು ರೈತರು, ಗ್ರಾಮಸ್ಥರು ಕೋರಿರುವ ಕಾರಣ ಜಿಲ್ಲಾಧಿಕಾರಿ ಗಮನಕ್ಕೆ ತಂದು ಕ್ರಷರ್‌ ರದ್ದು ಪಡಿಸಲು ನಾನು ಹೇಳುವೆ ಎಂದರು. ಇಂದಿನಿಂದ ಕ್ರಷರ್‌ ಜಾಗದಲ್ಲಿ ಯಾವುದೇ ಕಾಮಗಾರಿ ನಡೆಯದಂತೆ ಜಿಲ್ಲಾಧಿಕಾರಿ ಕ್ರಷರ್‌ ಮಾಲೀಕರಿಗೆ ಹೇಳಿದ್ದಾರೆ. ಮತ್ತೇನಾದರೂ ಕೆಲಸ ನಡೆದರೆ ಪೊಲೀಸರು ನಿಲ್ಲಿಸಲಿದ್ದಾರೆ ಎಂದರು.ಈ ವೇಳೆ ರೈತಸಂಘದ ಮುಖಂಡರು, ಕ್ರಷರ್‌ ಸುತ್ತ ಮುತ್ತಲಿನ ರೈತರು, ಗ್ರಾಮಸ್ಥರೊಂದಿಗೆ ಡಿಎಸ್‌ಪಿ ಲಕ್ಷ್ಮಯ್ಯ, ಪೊಲೀಸ್‌ ಇನ್ಸ್‌ಪೆಕ್ಟರ್‌ ಎಸ್.ಪರಶಿವಮೂರ್ತಿ, ಸಬ್‌ ಇನ್ಸ್‌ಪೆಕ್ಟರ್‌ ಸಾಹೇಬಗೌಡ ಇದ್ದರು.