ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಪ್ರತಿ ದಿನ ವಿವಿಧ ಕೆಲಸಗಳ ನಿಮಿತ್ತ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡುವ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವಂತೆ ಅಧಿಕಾರಿ, ಸಿಬ್ಬಂದಿಗಳಿಗೆ ಡೀಸಿ ಶುಭ ಕಲ್ಯಾಣ್ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯ ವಿವಿಧ ಶಾಖೆಗಳಿಗೆ ಕಚೇರಿ ವೇಳೆಯಲ್ಲಿ ಸೋಮವಾರ ಬೆಳಿಗ್ಗೆ ಭೇಟಿ ನೀಡಿ ಅಧಿಕಾರಿ/ಸಿಬ್ಬಂದಿಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದ ಅವರು, ಸಮಸ್ಯೆಗಳನ್ನು ಹೊತ್ತು ಬರುವ ಸಾರ್ವಜನಿಕರನ್ನು ಸಮಾಧಾನದಿಂದ ಮಾತನಾಡಿಸಿ ಸ್ಪಂದಿಸಬೇಕು. ತಕ್ಷಣವೇ ಪರಿಹಾರ ಕೊಡಿಸಲು ಸಾಧ್ಯವಾಗದಿದ್ದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಕ್ರಮವಹಿಸಬೇಕೆಂದು ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನೌಕರಿ ಮಾಡುವ ಅವಕಾಶ ಎಲ್ಲರಿಗೂ ದೊರೆಯುವುದಿಲ್ಲ. ಜನರ ಸೇವೆ ಮಾಡುವ ಅವಕಾಶವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಸಿಬ್ಬಂದಿಗಳು ಸಕಾಲದಲ್ಲಿ ಸಾರ್ವಜನಿಕರ ಕೆಲಸ ಮಾಡಿಕೊಡದೇ ಹೋದರೆ ಅದರ ಪರಿಣಾಮ ಜಿಲ್ಲಾಡಳಿತದ ಮೇಲೆ ಬೀರುತ್ತದೆ. ಈ ನಿಟ್ಟಿನಲ್ಲಿ ದೂರದ ಊರಿನಿಂದ ಬರುವ ರೈತರು/ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸುವ ಗುಣ ಬೆಳೆಸಿಕೊಳ್ಳಬೇಕೆಂದು ನಿರ್ದೇಶಿಸಿದರು. ಹಳೆಯ ಕಡತ ಅಭಿಲೇಖಾಲಯಕ್ಕೆ ನೀಡಲು ಸೂಚನೆ:
ಕಳೆದ ವಾರ ಕಚೇರಿಯ ವಿವಿಧ ಶಾಖೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನೌಕರರು ತಮ್ಮ ಶಾಖೆಗೆ ಸಂಬಂಧಿಸಿದ ಕಡತಗಳನ್ನು ಅಭಿಲೇಖಾಲಯಕ್ಕೆ (ರೆಕಾರ್ಡ್ ರೂಂ) ನೀಡದೆ ಕೊಠಡಿಯಲ್ಲಿರಿಸಿಕೊಂಡಿರುವುದು ಗಮನಕ್ಕೆ ಬಂದಾಗ ಕೂಡಲೇ ವಿಲೇವಾರಿಯಾಗಿರುವ ಹಳೆಯ ಕಡತಗಳನ್ನು ಅಭಿಲೇಖಾಲಯಕ್ಕೆ ನೀಡಬೇಕೆಂದು ಸೂಚಿಸಲಾಗಿತ್ತು ಎಂದು ತಿಳಿಸಿದರು.ಅಧಿಕಾರಿ, ಸಿಬ್ಬಂದಿಗಳು ಶನಿವಾರ ಹಾಗೂ ಭಾನುವಾರ ತಮ್ಮ ಸೂಚನೆ ಮೇರೆಗೆ ಚಾಲ್ತಿಯಲ್ಲಿರುವ ಕಡತಗಳನ್ನು ಮಾತ್ರ ಉಳಿಸಿಕೊಂಡು ಹಳೆಯ ಕಡತಗಳನ್ನು ಅಭಿಲೇಖಾಲಯಕ್ಕೆ ನೀಡಿದ್ದಾರೆ. ಅಲ್ಲದೆ, ಇ-ಕಚೇರಿ ಲಾಗಿನ್‌ನಲ್ಲಿ ಬಾಕಿಯಿದ್ದ ಎಲ್ಲಾ ಕಡತಗಳನ್ನು ಅಭಿಯಾನದ ಮಾದರಿಯಲ್ಲಿ ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದರು.