ಪ್ರವಾಹ, ಸಿಡಿಲಿನಿಂದ ಜೀವ ಹಾನಿಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಡಿಸಿ ಸೂಚನೆ

| Published : May 15 2024, 01:32 AM IST

ಪ್ರವಾಹ, ಸಿಡಿಲಿನಿಂದ ಜೀವ ಹಾನಿಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಡಿಸಿ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಳೆ, ಗುಡುಗು, ಮಿಂಚು ಬಗ್ಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಪ್ರಚಾರ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಮಣಿಪಾಲ

ಪ್ರವಾಹ, ಸಿಡಿಲು ಮತ್ತಿತರ ಪ್ರಾಕೃತಿಕ ವಿಕೋಪಗಳಲ್ಲಿ ಜೀವ ಅಥವಾ ಆಸ್ತಿಪಾಸ್ತಿ ಹಾನಿ ತಪ್ಪಿಸಲು ಅಗತ್ಯವಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಸೂಚನೆ ನೀಡಿದರು.

ಅವರು ಮಂಗಳವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಮಳೆಯಿಂದಾಗುವ ಪ್ರವಾಹ ಸೇರಿದಂತೆ ಮತ್ತಿತರ ಅವಘಡಗಳ ಪರಿಸ್ಥಿತಿಗಳನ್ನು ಎದುರಿಸಲು ಎಲ್ಲ ಇಲಾಖಾ ಅಧಿಕಾರಿಗಳು ರಕ್ಷಣಾ ಸಾಮಗ್ರಿಗಳೊಂದಿಗೆ ಸನ್ನದ್ಧರಾಗುವುದರ ಜೊತೆಗೆ ನೆರೆ ಸಂಭವಿಸಬಹುದಾದ ಪ್ರದೇಶಗಳನ್ನು ಗುರುತಿಸಿ, ಅಗತ್ಯವಿರುವ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ವಿಕೋಪಗಳನ್ನು ನಿರಾಯಾಸವಾಗಿ ನಿಭಾಯಿಸಲು ಮುಂದಾಗಬೇಕು ಎಂದು ಸೂಚನೆ ನೀಡಿದರು.

ಮಳೆ, ಗುಡುಗು, ಮಿಂಚು ಬಗ್ಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಪ್ರಚಾರ ಕೈಗೊಳ್ಳುವಂತೆ ತಿಳಿಸಿದ ಅವರು, ನಗರ ಸ್ಥಳೀಯ ಸಂಸ್ಥೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಧ್ವನಿವರ್ಧಕಗಳ ಮೂಲಕ ಸುರಕ್ಷತಾ ಕ್ರಮ ಕೈಗೊಳ್ಳುವ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು ಎಂದರು.

ಮಳೆಗಾಲದಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಡೆಯಲು ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸಾಂಕ್ರಾಮಿಕ ರೋಗಗಳ ಚಿಕಿತ್ಸೆಗೆ ಅಗತ್ಯವಿರುವ ಔಷಧಿಗಳನ್ನು ದಾಸ್ತಾನು ಇಟ್ಟುಕೊಂಡಿರಬೇಕು. ಇವುಗಳ ಬಗ್ಗೆ ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣದ ಬಗ್ಗೆ ಮಾಹಿತಿ ನೀಡಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗಾಳಿಯಿಂದ ಮರಗಳು ಉರುಳಿ ಬಿದ್ದಾಗ ತಕ್ಷಣಕ್ಕೆ ಸ್ಪಂದಿಸಿ, ತೆರವುಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಹಾಗೂ ಇತರೆ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ, ಅಪಾಯಕಾರಿ ಮರಗಳನ್ನು ತೆರವುಗೊಳಿಸಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಳೆಗಾಲದ ಮೊದಲು ಯಾಂತ್ರೀಕೃತ ದೋಣಿ ಆಳ ಸಮುದ್ರದ ಮೀನುಗಾರಿಕೆಯನ್ನು ನಿಷೇಧಿಸಬೇಕು. ಹವಾಮಾನ ಇಲಾಖೆಯ ಸಂದೇಶಗಳನ್ನು ಮೀನುಗಾರರಿಗೆ ಸಕಾಲದಲ್ಲಿ ನೀಡಬೇಕು ಎಂದು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಕಂಟ್ರೋಲ್ ರೂಂಗಳು ದಿನದ 24 ಗಂಟೆಗಳಲ್ಲಿಯೂ ತೆರೆದಿದ್ದು, ದೂರುಗಳು ಬಂದಲ್ಲಿ ಕೂಡಲೇ ಸ್ಪಂದಿಸಬೇಕು ಎಂದರು.

ಸಭೆಯಲ್ಲಿ ಜಿಪಂ ಸಿಇಒ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್., ಸಹಾಯಕ ಕಮೀಷನರ್ ರಶ್ಮಿ ಎಸ್., ಪೌರಾಯುಕ್ತ ರಾಯಪ್ಪ, ವಿವಿಧ ಜಿಲ್ಲಾಮಟ್ಟದ ಅನುಷ್ಠಾನಾಧಿಕಾರಿಗಳು, ತಹಸೀಲ್ದಾರ್‌ಗಳು, ತಾಲೂಕು ಪಂಚಾಯಿತಿ ಇಒಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.