ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಶುಕ್ರವಾರ ಬೆಳಿಗ್ಗೆ ಶಿರಾ ತಾಲೂಕು ಭುವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾನಂಗಿ ಗ್ರಾಮಕ್ಕೆ ಭೇಟಿ ನೀಡಿ ತುರ್ತಾಗಿ ಕುಡಿಯುವ ನೀರು ಸರಬರಾಜು ಮಾಡಲು ಸೂಕ್ತ ಕ್ರಮವಹಿಸುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ಜಿಲ್ಲಾಧಿಕಾರಿಗಳ ಭೇಟಿ ಸಮಯದಲ್ಲಿ ಪ್ರಸ್ತುತ ಮಾನಂಗಿ ಗ್ರಾಮದ ಕುಡಿಯುವ ನೀರು ಸರಬರಾಜು ಕೊಳವೆ ಬಾವಿ ವಿಫಲವಾಗಿದ್ದು, ಖಾಸಗಿ ಕೊಳವೆಬಾವಿ ಮೂಲಕ ನೀರು ಸರಬರಾಜು ಮಾಡುತ್ತಿರುವುದಾಗಿ ಗ್ರಾಮಸ್ಥರು ಮಾಹಿತಿ ನೀಡಿದರು.

ಗ್ರಾಮದ ಮನೆಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಗ್ರಾಮ ನೈರ್ಮಲ್ಯ ಕುಡಿಯವ ನೀರು ಕುರಿತು ಚರ್ಚಿಸಿದರು ಹಾಗೂ ಗ್ರಾಮದ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ನೀಡುತ್ತಿರುವ ಬೆಳಗಿನ ಸಾಯಿ ಶೂರ್ ಮಾಲ್ಟನ್ನು ತಾವು ಖುದ್ದು ಕುಡಿದು ಗುಣಮಟ್ಟ ಪರಿಶೀಲಿಸಿದರು.

ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಕುಡಿಯುವ ನೀರಿನ ಘಟಕ ಮಂಜೂರು ಮಾಡಲು ಮನವಿ ಮಾಡಿದರು ಹಾಗೂ ಆಹಾರ ಇಲಾಖೆಯಿಂದ ತಮ್ಮ ಗ್ರಾಮದಲ್ಲಿರುವ ಆಹಾರ ವಿತರಣೆಗೆ ಅನುಕೂಲ ಮಾಡಿಕೊಡಲು ಕೋರಿದರು. ಈ ಕುರಿತು ತ್ವರಿತವಾಗಿ ಸೂಕ್ತ ಕ್ರಮವಹಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಮಧುಗಿರಿ ವಿಭಾಗದ ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಶೀಲ್ದಾರ್, ಶಿರಾ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯ ಪಾಲಕ ಅಭಿಯಂತರರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸಿಬ್ಬಂದಿ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.