ಸಾರಾಂಶ
ಕನ್ನಡಪ್ರಭ ವಾರ್ತೆ ಕೊಪ್ಪಳ
ಲೋಕಸಭಾ ಚುನಾವಣೆಯಲ್ಲಿ ಯುವ ಮತದಾರರಲ್ಲಿ ಮತದಾನ ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಪತ್ರಕರ್ತರೊಂದಿಗೆ ಕ್ರಿಕೆಟ್ ಪಂದ್ಯ ಗಮನ ಸೆಳೆದರು.ಪ್ರಸ್ತುತ ಯುವ ಸಮುದಾಯ ಕ್ರಿಕೆಟ್ ಪ್ರೇಮಿಗಳಾಗಿದ್ದಾರೆ. ಈ ಹಿನ್ನೆಲೆ ಯುವ ಮತದಾರರನ್ನು ಸೆಳೆಯಲು ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಧಿಕಾರಿ ನಲಿನ್ ಅತುಲ್ ಮತ್ತು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆ ಬ್ಯಾಟಿಂಗ್, ಬೌಲಿಂಗ್ , ಫೀಲ್ಡಿಂಗ್ ಮೂಲಕ ಎಲ್ಲರ ಗಮನ ಸೆಳೆದರು. ಜೊತೆಗೆ ಅಧಿಕಾರಿಗಳೊಂದಿಗೆ ದಿನಪತ್ರಿಕೆ, ಟಿವಿ ಮಾಧ್ಯಮದ ಪತ್ರಕರ್ತರು ಬ್ಯಾಟಿಂಗ್, ಬೌಲಿಂಗ್ ಮಾಡಿದರು.
ಸಾರ್ವತ್ರಿಕ ಲೋಕಸಭಾ ಚುನಾವಣೆ ಅಂಗವಾಗಿ ಜಿಲ್ಲೆಯ ಯುವ ಮತದಾರರು, ಹಿರಿಯ ನಾಗರಿಕರು, ವಿಶೇಷಚೇತನರು, ಮಹಿಳೆಯರು, ರೈತಾಪಿ ವರ್ಗದವರು, ಕ್ರೀಡಾಭಿಮಾನಿಗಳಿಂದ ಮತದಾನದ ಪ್ರಮಾಣ ಹೆಚ್ಚಿಸಲು ಈ ಬಾರಿ ವಿಶೇಷವಾಗಿ ಕೊಪ್ಪಳ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕೊಪ್ಪಳ ಮೀಡಿಯಾ ಕ್ಲಬ್ ಮತ್ತು ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯ-ಜಿಲ್ಲಾ-ತಾಲೂಕು ಸ್ವೀಪ್ ಸಮಿತಿಯ ಸಂಯುಕ್ತಾಶ್ರಯಗಳಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯಿತು.ಇದಕ್ಕೂ ಮುನ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ರಾಹುಲ್ ರತ್ನಂ ಪಾಂಡೆ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು.
ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ರಾಹುಲ್ ರತ್ನಂ ಪಾಂಡೆ ಉದ್ಘಾಟಿಸಿ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಿರಂತರವಾಗಿ ಸ್ವೀಪ್ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರಿಂದ ಹೆಚ್ಚಿನ ಮತದಾನ ಆಗಿತ್ತು. ಅದರಂತೆ ಈ ಬಾರಿಯೂ ಹೆಚ್ಚಿನ ಮತದಾನವಾಗಲು ಜಿಲ್ಲಾ ಸ್ವೀಪ್ ಸಮಿತಿಯಿಂದ ಮನೆ ಭೇಟಿ, ವಾಕಥಾನ್, ಬೈಕ್ ರಾಲಿ, ಎತ್ತಿನ ಬಂಡಿ ಅಭಿಯಾನ, ಮ್ಯಾರಾಥಾನ್, ಪಂಜಿನ ಮೆರವಣಿಗೆ, ಅಂಗವಿಕಲರ ಬೈಕ್ ರ್‍ಯಾಲಿ, ಆರೋಗ್ಯ ಶಿಬಿರ, ಮಹಿಳೆಯರಿಂದ ಮಾನವ ಸರಪಳಿ, ಕ್ಯಾಂಡಲ್ ಲೈಟ್ ಅಭಿಯಾನ ಮುಖಾಂತರ ವಿಶೇಷ-ವಿನೂತನ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.ಈ ಕಾರ್ಯಕ್ರಮದಲ್ಲಿ ಚುನಾವಣಾ ವೆಚ್ಚ ವೀಕ್ಷಕ ಚಂದ್ರಶೇಖರ್ ತಂಬವೇಕರ್, ಜಿಲ್ಲಾ ಚುನಾವಣಾ ರಾಯಭಾರಿಗಳಾದ ಡಾ. ಶಿವಕುಮಾರ್ ಮಾಲಿ ಪಾಟೀಲ್ & ಮೈಬೂಬು ಕಿಲ್ಲೆದಾರ, ಜಿಪಂ ಮುಖ್ಯ ಲೆಕ್ಕಾಧಿಕಾರಿ ಅಮೀನ್ ಅತ್ತಾರ್, ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರಾದ ದುಂಡಪ್ಪ ತುರಾದಿ, ಸಂತೋಷ ಪಾಟೀಲ್ ಬಿರಾದಾರ್, ತಾಪಂ ಇಒ ನಿಂಗಪ್ಪ ಮುಸಳಿ, ಪತ್ರಕರ್ತರು, ಯುವ ಮತದಾರರು, ಕ್ರೀಡಾಭಿಮಾನಿಗಳು ಹಾಜರಿದ್ದರು.