ನುಗ್ಗೇಹಳ್ಳಿ ಹಾಸ್ಟೆಲ್‌ಗಳಿಗೆ ಡಿಸಿ ದಿಢೀರ್‌ ಭೇಟಿ

| Published : Mar 06 2025, 12:30 AM IST

ಸಾರಾಂಶ

ನುಗ್ಗೇಹಳ್ಳಿ ಹೋಬಳಿ ಕೇಂದ್ರದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕಿಯರು ಹಾಗೂ ಬಾಲಕರ ವಸತಿ ನಿಲಯಗಳಿಗೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಂಗಳವಾರ ಸಂಜೆ ಜಿಲ್ಲಾಧಿಕಾರಿ ಸತ್ಯಭಾಮ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಸತಿ ನಿಲಯಗಳಲ್ಲಿನ ವಿದ್ಯಾರ್ಥಿಗಳ ಕೊಠಡಿ, ಶೌಚಾಲಯ, ಅಡುಗೆ ಮನೆಯ ನಿರ್ವಹಣೆ, ಆಹಾರ ಪದಾರ್ಥಗಳಿರುವ ಕೊಠಡಿ ಸೇರಿದಂತೆ ಕಟ್ಟಡದ ದುಸ್ಥಿತಿಯ ಬಗ್ಗೆಯೂ ಪರಿಶೀಲನೆ ನಡೆಸಿ ಉತ್ತಮವಾಗಿ ನಿರ್ವಹಣೆ ಮಾಡುವಂತೆ ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ಹೋಬಳಿ ಕೇಂದ್ರದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕಿಯರು ಹಾಗೂ ಬಾಲಕರ ವಸತಿ ನಿಲಯಗಳಿಗೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಂಗಳವಾರ ಸಂಜೆ ಜಿಲ್ಲಾಧಿಕಾರಿ ಸತ್ಯಭಾಮ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಾಲಕಿಯರು ಹಾಗೂ ಬಾಲಕರ ವಸತಿ ನಿಲಯಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಸತ್ಯಭಾಮ, ವಸತಿ ನಿಲಯಗಳಲ್ಲಿನ ವಿದ್ಯಾರ್ಥಿಗಳ ಕೊಠಡಿ, ಶೌಚಾಲಯ, ಅಡುಗೆ ಮನೆಯ ನಿರ್ವಹಣೆ, ಆಹಾರ ಪದಾರ್ಥಗಳಿರುವ ಕೊಠಡಿ ಸೇರಿದಂತೆ ಕಟ್ಟಡದ ದುಸ್ಥಿತಿಯ ಬಗ್ಗೆಯೂ ಪರಿಶೀಲನೆ ನಡೆಸಿ ಉತ್ತಮವಾಗಿ ನಿರ್ವಹಣೆ ಮಾಡುವಂತೆ ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ವಸತಿ ನಿಲಯದಲ್ಲಿರುವ ವಿದ್ಯಾರ್ಥಿನಿಯರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ವಸತಿ ನಿಲಯಗಳಲ್ಲಿ ಗುಣಮಟ್ಟದ ಆಹಾರ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಿರುವ ಕುರಿತು ವಿದ್ಯಾರ್ಥಿನಿಯರಿಂದ ಮಾಹಿತಿ ಪಡೆದರು.

ವಸತಿ ನಿಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ವಿದ್ಯಾರ್ಥಿನಿಯರಿಗೆ ಇಂಗ್ಲೀಷ್‌ ಪಠ್ಯಪುಸ್ತಕವನ್ನು ತರುವಂತೆ ತಿಳಿಸಿದರು. ನಂತರ ಓದುವಂತೆ ತಿಳಿಸಿದಾಗ ಕೆಲ ವಿದ್ಯಾರ್ಥಿಗಳು ಇಂಗ್ಲಿಷ್ ಪದಗಳನ್ನು ಗುರುತಿಸಲು ಸಾಧ್ಯವಾಗದೆ ಓದಲು ತಡಬಡಾಯಿಸಿದರು. ಇದರಿಂದ ಅಸಮಾಧಾನಗೊಂಡ ಜಿಲ್ಲಾಧಿಕಾರಿಗಳು ಈ ವಸತಿ ನಿಲಯದ ವಿದ್ಯಾರ್ಥಿಗಳು ಯಾವ ಶಾಲೆಗಳಲ್ಲಿ ಓದುತ್ತಿದ್ದಾರೆ ಎಂದು ಮಾಹಿತಿ ಪಡೆದರು. ಇದಕ್ಕೆ ವಸತಿ ನಿಲಯದ ಅಧಿಕಾರಿಗಳು ಮಾಹಿತಿ ನೀಡಿ ಕರ್ನಾಟಕ ಪಬ್ಲಿಕ್ ಶಾಲೆ ಹಾಗೂ ದರ್ಶಿನಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯರು ಓದುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಇದರಿಂದ ಅಸಮಾಧಾನಗೊಂಡ ಅವರು ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡದೆ ಹೋದರೆ ಹೇಗೆ, 9ನೇ ತರಗತಿ ವಿದ್ಯಾರ್ಥಿನಿಗೆ ಪಠ್ಯಪುಸ್ತಕದಲ್ಲಿರುವ ಪದವನ್ನೇ ಜೋಡಿಸಿ ಓದಲು ಬರದಿದ್ದರೆ ಮುಂಬರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೇಗೆ ಉತ್ತೀರ್ಣರಾಗುತ್ತಾರೆ. ಈ ಬಗ್ಗೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಕಡೆ ಹೆಚ್ಚು ಗಮನಹರಿಸುವಂತೆ ಹೇಳಿದರು.

ಬಾಲಕರ ವಸತಿ ನಿಲಯದ ಉತ್ತಮ ನಿರ್ವಹಣೆಯ ಬಗ್ಗೆ ಜಿಲ್ಲಾಧಿಕಾರಿ ಸತ್ಯಭಾಮ ಅವರು ಮೆಚ್ಚುಗೆ ವ್ಯಕ್ತಪಡಿಸಿ, ಮಕ್ಕಳಿಗೆ ಗುಣಮಟ್ಟದ ಆಹಾರ ಸೇರಿದಂತೆ ಕಲಿಕೆಯ ಬಗ್ಗೆಯೂ ವಸತಿ ನಿಲಯದಲ್ಲಿ ಇಲ್ಲಿನ ಸಿಬ್ಬಂದಿ ಹೆಚ್ಚು ಕಾಳಜಿ ವಹಿಸಿದ್ದಾರೆ. ಇದರಿಂದ ಮಕ್ಕಳು ಓದಿನಲ್ಲಿ ಚುರುಕಾಗಿದ್ದಾರೆ, ಮುಂಬರುವ ದಿನಗಳಲ್ಲೂ ಇದೇ ರೀತಿ ನಿರ್ವಹಣೆ ಮಾಡುವಂತೆ ತಿಳಿಸಿದರು.

ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಎಂ. ಕುಮಾರ್ ಮಾತನಾಡಿ, ತಾಲೂಕಿನಲ್ಲಿ ಇಲಾಖೆಯ 22 ಮೆಟ್ರಿಕ್ ಪೂರ್ವ ವಸತಿ ನಿಲಯಗಳಿದ್ದು, ಕೇವಲ 5 ಜನ ಮಾತ್ರ ವಾರ್ಡನ್‌ಗಳಿರುವುದರಿಂದ ಕರ್ತವ್ಯ ನಿರ್ವಹಿಸಲು ಸಮಸ್ಯೆಯಾಗುತ್ತಿದೆ. ಖಾಲಿ ಇರುವ ವಾರ್ಡನ್‌ಗಳ ನೇಮಕಕ್ಕೆ ಇಲಾಖೆಯ ಮೇಲಾಧಿಕಾರಿಗಳು ಕ್ರಮವಹಿಸಿದರೆ ವಸತಿ ನಿಲಯದಲ್ಲಿ ಉತ್ತಮ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ:

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿಲ್ಲಾಧಿಕಾರಿ ಸತ್ಯಭಾಮ ಭೇಟಿ ನೀಡಿ ಆರೋಗ್ಯ ಕೇಂದ್ರದಲ್ಲಿನ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿ ಕರ್ತವ್ಯ ನಿರತ ವೈದ್ಯರು ಹಾಗೂ ರೋಗಿಗಳಿಂದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಸಾರ್ವಜನಿಕರು ರಾತ್ರಿ ಪಾಳಯದಲ್ಲಿ ವೈದ್ಯರಿಲ್ಲದೆ ರೋಗಿಗಳಿಗೆ ತುಂಬಾ ತೊಂದರೆಯಾಗಿದೆ. ಇದರ ಜೊತೆಗೆ ಇಸಿಜಿ ವ್ಯವಸ್ಥೆ ಇಲ್ಲದೆ ರೋಗಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ತಕ್ಷಣ ಆಸ್ಪತ್ರೆ ಕುಂದುಕೊರತೆಗಳ ಬಗ್ಗೆ ಹೆಚ್ಚು ಗಮನಹರಿಸಿ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗ್ರಾಮದ ಉಪ ನೊಂದಣಿ ಕಚೇರಿ ನೂತನ ಕಟ್ಟಡ ನಿರ್ಮಾಣ ಮಾಡುವಂತೆ ಹಾಗೂ ಪಶು ಆಸ್ಪತ್ರೆಯ ಹೊಸ ಕಟ್ಟಡದ ಮುಂಭಾಗ ಇರುವ ಹಳೆಯ ಕಟ್ಟಡವನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ನವೀನ್ ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ರಾಜೇಶ್ ಚೌಹಾಣ್, ಹೋಬಳಿ ಕಂದಾಯ ಅಧಿಕಾರಿ ಲತೇಶ್, ವಾರ್ಡನ್ ಉಷಾರಾಣಿ, ರೈತ ಸಂಘದ ತಾಲೂಕು ಅಧ್ಯಕ್ಷ ರಾಮಚಂದ್ರು, ಕೃಷಿ ಪತ್ತಿನ ಅಧ್ಯಕ್ಷ ಹುಲಿಕೆರೆ ಸಂಪತ್ ಕುಮಾರ್, ಗ್ರಾಮಸ್ಥರಾದ ದಿನೇಶ್, ಬಸವನಪುರ ಬಾಬು, ಚಂದ್ರು ಯಾದವ್, ಕುಮಾರ ಯಾದವ್, ಎನ್‌ಸಿ ನಟೇಶ್, ಜಿತೇಂದ್ರ, ವಿರುಪಾಕ್ಷಪುರ ಮೂರ್ತಿ ಸೇರಿದಂತೆ ಇತರರು ಹಾಜರಿದ್ದರು.