ಬಿ.ಸಿ.ರೋಡು- ಅಡ್ಡಹೊಳೆ ಚತುಷ್ಪಥ ಕಾಮಗಾರಿ: ಜಿಲ್ಲಾಧಿಕಾರಿ ಪರಿಶೀಲನೆ

| Published : Feb 08 2024, 01:33 AM IST

ಬಿ.ಸಿ.ರೋಡು- ಅಡ್ಡಹೊಳೆ ಚತುಷ್ಪಥ ಕಾಮಗಾರಿ: ಜಿಲ್ಲಾಧಿಕಾರಿ ಪರಿಶೀಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಬಿ.ಸಿ. ರೋಡಿನ ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತದಲ್ಲಿ ನಡೆಯುತ್ತಿರುವ ಹೆದ್ದಾರಿ ಕಾಮಗಾರಿ ವೀಕ್ಷಣೆ ನಡೆಸಿದ ಬಳಿಕ ಮೆಲ್ಕಾರ್, ಕಲ್ಲಡ್ಕ, ಮಾಣಿ ಮತ್ತು ಉಪ್ಪಿನಂಗಡಿ ಭಾಗದತ್ತ ಜಿಲ್ಲಾಧಿಕಾರಿ ತೆರಳಿ ಕಾಮಗಾರಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ/ಬಂಟ್ವಾಳ

ಬಿ.ಸಿ.ರೋಡು- ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಕಾಮಗಾರಿಗಳ ಸಂದರ್ಭ ಉಂಟಾಗಿರುವ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ದ.ಕ. ಜಿಲ್ಲಾಧಿಕಾರಿ ಮುಲೈಮುಗಿಲನ್ ಬುಧವಾರ ಖುದ್ದು ಪರಿಶೀಲನೆ ನಡೆಸಿದರು. ಈ ಸಂದರ್ಭ ಕೆಲವೊಂದು ಸಮಸ್ಯೆಗಳನ್ನು ನಿವಾರಿಸುವಂತೆ ಹಾಗೂ ಜನರ ಬೇಡಿಕೆಗಳನ್ನು ಈಡೇರಿಸುವಂತೆ ಹೆದ್ದಾರಿ ಇಲಾಖೆಯ ಯೋಜನಾ ನಿರ್ದೇಶಕ ಜಾವೇದ್ ಅಹಮ್ಮದ್ ಅವರಿಗೆ ಸೂಚಿಸಿದರು.ಉಪ್ಪಿನಂಗಡಿಯಲ್ಲಿ ಅಗಲೀಕರಣ ಕಾಮಗಾರಿಯ ಸಲುವಾಗಿ ಚರಂಡಿಯಲ್ಲಿ ಕೊಳಚೆ ನೀರು ನಿಂತಿರುವುದನ್ನು ಗಮನಿಸಿದ ಅವರು, ನದಿಗಳು ಉಕ್ಕಿ ಬಂದು ನೆರೆ ಸಂಭವಿಸಿದರೆ ನಾವೇನೂ ಮಾಡಲಾಗುವುದಿಲ್ಲ. ಆದರೆ ನಮ್ಮ ತಪ್ಪಿನಿಂದ ಕೃತಕ ನೆರೆ ಸಂಭವಿಸಿದರೆ ಕ್ಷಮಿಸಲು ಸಾಧ್ಯವಿಲ್ಲ ಎಂದು ಕಾಮಗಾರಿ ನಿರ್ವಹಣಾ ಸಂಸ್ಥೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಹಾಗೂ ನದಿಗೆ ಚರಂಡಿಯ ಕೊಳಚೆ ನೀರು ಸೇರುವುದನ್ನು ತಡೆಗಟ್ಟಲು ಹೆದ್ದಾರಿ ಇಲಾಖೆಯನ್ನು ಹೊಣೆಗಾರರನ್ನಾಗಿಸುವುದು ಸರಿಯಲ್ಲ. ಅದು ಪಂಚಾಯತ್ ಆಡಳಿತದ ಕಾರ್ಯವೆಂದರು..

34 ನೆಕ್ಕಿಲಾಡಿ ಗ್ರಾಮದ ಕರ್ವೇಲ್‌ನಲ್ಲಿ ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ಕರ್ವೇಲ್ ಜಂಕ್ಷನ್ ಬಳಿ ಫೂಟ್ ಬ್ರಿಡ್ಜ್ ನಿರ್ಮಾಣ ಮಾಡುವಂತೆ ಹಾಗೂ ಅಲ್ಲಿಯೇ ಶಾಂತಿನಗರದ ಮೂಲಕ ಪುತ್ತೂರಿಗೆ ಹೋಗುವ ಹಾಗೆ ಅನುಕೂಲವಾಗುವಂತೆ ಹೆದ್ದಾರಿ ಕ್ರಾಸಿಂಗ್ ನೀಡಲು ಹೆದ್ದಾರಿ ಇಲಾಖೆಯ ಯೋಜನಾ ನಿರ್ದೇಶಕರಿಗೆ ಸೂಚಿಸಿದರು.

34 ನೆಕ್ಕಿಲಾಡಿಯಲ್ಲಿ ಈಗ ರಾಷ್ಟ್ರೀಯ ಹೆದ್ದಾರಿಯಿಂದ ಪುತ್ತೂರು ಹೆದ್ದಾರಿಗೆ ಕವಲೊಡೆಯುವ ಜಾಗದಲ್ಲಿ ಮುಂದಕ್ಕೆ ಹೆದ್ದಾರಿ ನಿರ್ಮಾಣವಾಗುವುದರಿಂದ ರಸ್ತೆ ದಾಟಲು ಸಮಸ್ಯೆಯಾಗುವ ಕುರಿತು ಸ್ಥಳೀಯರ ಆತಂಕಕ್ಕೆ ಸ್ಪಷ್ಟನೆ ನೀಡಿದ ಹೆದ್ದಾರಿ ಇಲಾಖೆಯ ಯೋಜನಾ ನಿರ್ದೇಶಕರು, ಇಲ್ಲಿಂದ ಪುತ್ತೂರು ರಸ್ತೆಗೆ ಹೋಗಲು ಹೆದ್ದಾರಿ ನಿರ್ಮಾಣದ ಬಳಿಕ ಅವಕಾಶವಿಲ್ಲ. ಇಲ್ಲಿಂದ ಸ್ವಲ್ಪ ಮುಂದಕ್ಕೆ ಇರುವ ಅಂಡರ್‌ಪಾಸ್‌ನ ಮೂಲಕ ಪುತ್ತೂರು ರಸ್ತೆಗೆ ಸಂಪರ್ಕ ಕಲ್ಪಿಸಲಾಗುತ್ತದೆ. ಅಲ್ಲಿಂದ ನೇರಕ್ಕೆ ಪಿಡಬ್ಲೂಡಿಯವರು ಹೆದ್ದಾರಿಯನ್ನು ನಿರ್ಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಹಾಯಕ ಕಮಿಷನರ್ ಜುಬಿನ್ ಮಹಾಪಾತ್ರ, ತಹಸೀಲ್ದಾರ್ ಪುರಂದರ ಹೆಗ್ಡೆ, ಉಪ್ಪಿನಂಗಡಿ ಕಂದಾಯ ಹೋಬಳಿಯ ಉಪತಹಸೀಈಲ್ದಾರ್ ಚೆನ್ನಪ್ಪ ಗೌಡ, ಕಂದಾಯಾಧಿಕಾರಿ ಚಂದ್ರ ನಾಯ್ಕ, 34 ನೆಕ್ಕಿಲಾಡಿ ಗ್ರಾ.ಪಂ. ವಿಎ ಜಂಗಪ್ಪ, ಉಪ್ಪಿನಂಗಡಿ ಗ್ರಾ.ಪಂ. ನರಿಯಪ್ಪ, ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್, ಉಪ್ಪಿನಂಗಡಿ ಅರಣ್ಯಾಧಿಕಾರಿ ಗಿರೀಶ್, 34 ನೆಕ್ಕಿಲಾಡಿ ಗ್ರಾ.ಪಂ. ಪಿಡಿಒ ಸತೀಶ್ ಡಿ. ಬಂಗೇರ, ಉಪ್ಪಿನಂಗಡಿ ಗ್ರಾ.ಪಂ. ಪಿಡಿಒ ವಿಲ್ಫ್ರೆಡ್‌ ಲಾರೆನ್ಸ್ ರೊಡ್ರಿಗಸ್, ಉಪ್ಪಿನಂಗಡಿ ಪೊಲೀಸ್ ಉಪ ನಿರೀಕ್ಷಕ ಅವಿನಾಶ್, ಹೆದ್ದಾರಿ ಇಲಾಖೆಯ ಎಂಜಿನಿಯರ್‌ಗಳು, ಗುತ್ತಿಗೆದಾರ ಸಂಸ್ಥೆಯ ಎಂಜಿನಿಯರ್‌ಗಳು ಇದ್ದರು.

ಬಂಟ್ವಾಳ ವರದಿ: ಬಿ.ಸಿ. ರೋಡಿನ ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತದಲ್ಲಿ ನಡೆಯುತ್ತಿರುವ ಹೆದ್ದಾರಿ ಕಾಮಗಾರಿ ವೀಕ್ಷಣೆ ನಡೆಸಿದ ಬಳಿಕ ಮೆಲ್ಕಾರ್, ಕಲ್ಲಡ್ಕ, ಮಾಣಿ ಮತ್ತು ಉಪ್ಪಿನಂಗಡಿ ಭಾಗದತ್ತ ಜಿಲ್ಲಾಧಿಕಾರಿ ತೆರಳಿ ಕಾಮಗಾರಿ ಪರಿಶೀಲಿಸಿದರು.

ಮೆಲ್ಕಾರ್‌ನಲ್ಲಿ ಗುಡ್ಡವನ್ನು ಅಗೆದ ಪರಿಣಾಮವಾಗಿ ಕೆಲವೊಂದು ಮನೆಗಳಿಗೆ ಹಾನಿಯಾಗುವ ಸಂಭವವು ಇರುವ ಬಗ್ಗೆ ಮತ್ತು ಕೆಲವು ಮನೆಗಳಿಗೆ ಸಂಪರ್ಕ ರಸ್ತೆ ಕಡಿತಗೊಂಡ ಹಿನ್ನೆಲೆಯಲ್ಲಿ ಅವರಿಗೆ ಸೂಕ್ತವಾದ ಬದಲಿ ವ್ಯವಸ್ಥೆ ಮಾಡಿಕೊಡುವ ಬಗ್ಗೆ ಚಿಂತನೆ ನಡೆಸುವ ಕುರಿತು ವಿಷಯ ಪ್ರಸ್ತಾಪ ಮಾಡಲಾಯಿತು. ಈ ಸಂದರ್ಭ, ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ತಿಳಿಸಿದರು. ಕಲ್ಲಡ್ಕದಲ್ಲಿ ರಸ್ತೆ ಕಾಮಗಾರಿಯ ವೇಳೆ ದೂಳಿನ ಸಮಸ್ಯೆ ಉಂಟಾಗುತ್ತಿದ್ದು, ಸರಿಯಾಗಿ ನೀರು ಹಾಕುತ್ತಿಲ್ಲ ಎಂಬ ಬಗ್ಗೆ ಸಾರ್ವಜನಿಕರು ಗಮನ ಸೆಳೆದರು. ಈ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿದ ಜಿಲ್ಲಾಧಿಕಾರಿಗಳು, ಇನ್ನು ಮುಂದೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ದೂರುಗಳು ಬರದ ರೀತಿಯಲ್ಲಿ ಸ್ಥಳೀಯ ಗ್ರಾ.ಪಂ. ರಸ್ತೆಗೆ ನೀರು ಹಾಕುವ ಜವಾಬ್ದಾರಿ ವಹಿಸಬೇಕು ಎಂದು ತಹಸೀಲ್ದಾ‌ರ್‌ಗೆ ತಿಳಿಸಿದರು.

ಬಂಟ್ವಾಳ ತಹಸೀಲ್ದಾ‌ರ್ ಅರ್ಚನಾ ಭಟ್, ಬಂಟ್ವಾಳ ನಗರ ಪೋಲೀಸ್ ಠಾಣಾ ಇನ್ಸ್‌ಪೆಕ್ಟರ್ ಅನಂತ ಪದ್ಮನಾಭ, ಟ್ರಾಫಿಕ್ ಎಸ್.ಐ. ಸಂಜೀವ, ಕಂದಾಯ ನಿರೀಕ್ಷಕರಾದ ವಿಜಯ್ ಮತ್ತು ಜನಾರ್ದನ ಹಾಗೂ ಗ್ರಾಮ ಕರಣಿಕ ನಾಗರಾಜ್ ಮತ್ತಿತರರು ಇದ್ದರು.