ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಹಾಗೂ ಇತರೆ ಮುಖ್ಯ ರಸ್ತೆಗಳಲ್ಲಿ ವಾಹನ ಅಪಘಾತಗಳನ್ನು ಸಂಪೂರ್ಣವಾಗಿ ತಪ್ಪಿಸಲು ಸಾರಿಗೆ ಹಾಗೂ ಪೊಲೀಸ್ ಇಲಾಖೆ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪರಸ್ಪರ ಸಮನ್ವಯದೊಂದಿಗೆ ಅಗತ್ಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ನಿರ್ದೇಶನ ನೀಡಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಹಾಗೂ ಇತರೆ ಮುಖ್ಯ ರಸ್ತೆಗಳಲ್ಲಿ ವಾಹನ ಅಪಘಾತಗಳನ್ನು ಸಂಪೂರ್ಣವಾಗಿ ತಪ್ಪಿಸಲು ಸಾರಿಗೆ ಹಾಗೂ ಪೊಲೀಸ್ ಇಲಾಖೆ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪರಸ್ಪರ ಸಮನ್ವಯದೊಂದಿಗೆ ಅಗತ್ಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ನಿರ್ದೇಶನ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ್ದ ಬೆಂಗಳೂರು ದಕ್ಷಿಣ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹಿಮ್ಮುಖ (ರಿವರ್ಸ್ ಡ್ರೈವಿಂಗ್) ಚಾಲನೆ ಹಾಗೂ ಎದುರಾಗಿ (ಆಪೋಸಿಟ್ ಡ್ರೈವಿಂಗ್) ಚಾಲನೆ ಮಾಡುವುದರಿಂದಾಗಿ ಅಪಘಾತಗಳ ಸಂಖ್ಯೆ ಹೆಚ್ಚಾಗುವುದು ಕಂಡುಬಂದಿದೆ. ಇದರಿಂದ ಸರಿಯಾಗಿ ಚಾಲನೆ ಮಾಡುತ್ತಿರುವವರಿಗೂ ಗೊಂದಲಕ್ಕೀಡಾಗಿ ಜೀವ ಕಳೆದುಕೊಳ್ಳುವಂತಹ ಸಂದರ್ಭಗಳು ಎದುರಾಗುತ್ತದೆ. ಬೈ ಪಾಸ್ ರಸ್ತೆಗಾಗಿ ಕಿಲೋಮೀಟರ್ ತಪ್ಪಿಸಲು ರಸ್ತೆ ಮಾರ್ಗದ ವಿರುದ್ಧ ದಿಕ್ಕಿನಲ್ಲಿ ಸಾಗುವ ವಾಹನಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವಂತೆ ತಾಕೀತು ಮಾಡಿದರು.

ಅಪಾಯಕಾರಿ ಹಿಮ್ಮುಖ ಚಾಲನೆ ಮಾಡುವ ವಾಹನ ಚಾಲಕರು ಹಾಗೂ ವಾಹನಗಳ ವಿರುದ್ಧ ಕಡ್ಡಾಯವಾಗಿ ದಂಡ ವಿಧಿಸುವುದರೊಂದಿಗೆ ಕಾನೂನಿನ ಪ್ರಕಾರ ಕ್ರಮಕೈಗೊಳ್ಳಬೇಕು, ಲಾರಿಗಳು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಎಲ್ಲೆಂದರಲ್ಲಿ ನಿಲ್ಲಿಸುವುದರಿಂದಲೂ ಅಪಘಾತಗಳಾಗುವ ಸಂಭವಗಳಿರುತ್ತದೆ. ಇಂತಹ ವಾಹನಗಳ ವಿರುದ್ಧವು ದಂಡ ವಿಧಿಸಬೇಕು. ಅಂತಹ ಚಾಲಕರ ಚಾಲನಾ ಪರವಾನಿಗೆ ರದ್ದುಪಡಿಸಬೇಕು. ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸದೇ ಇರುವವರ ವಿರುದ್ಧ ದಂಡ ವಿಧಿಸಬೇಕು. ರಾಷ್ಟ್ರೀಯ ಹೆದ್ದಾರಿ ಗಸ್ತು ವಾಹನಗಳನ್ನು ಹೆಚ್ಚಿಸಬೇಕು ಎಂದು ಸಾರಿಗೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಣಮಿಣಿಕೆಯ ಟೋಲ್ ಬಳಿ ತ್ಯಾಜ್ಯ ಸುರಿದಿರುವುದು ಕಂಡುಬಂದಿದೆ, ಟೋಲ್ ಬಳಿ ಇರುವ ವ್ಯಾಪಾರ ಮಳಿಗೆಗಳ ಬಳಿ ಹಸಿ ಕಸ-ಒಣ ಕಸ ಸಂಗ್ರಹಿಸುವ ಡಬ್ಬಿಗಳನ್ನು ಹೆಚ್ಚು ಹೆಚ್ಚು ಇಡಬೇಕು, ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುವವರ ವಿರುದ್ಧ ದಂಡ ವಿಧಿಸಬೇಕು. ಕಸ ಎಸೆಯುವವರನ್ನು ಗುರುತಿಸಲು ಹಾಗೂ ಹಿಮ್ಮುಖ ಚಾಲನೆ ಮಾಡುವವರನ್ನು ಗುರುತಿಸಲು ಟೋಲ್‌ನ ಸುತ್ತಮುತ್ತ ಸಿಸಿ ಟಿವಿ ಕ್ಯಾಮರಾಗಳನ್ನು ಶೀಘ್ರವಾಗಿ ಅಳಡಿಸಬೇಕು, ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವಚ್ಛತೆ ಕಾಪಾಡಲು ಕ್ರಮ ವಹಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ 275ರಲ್ಲಿನ ರಾಮನಗರ ಜಿಲ್ಲಾ ಸರ್ಕಾರಿ ಆಸ್ಪತ್ರೆ ಎದುರು ರಸ್ತೆ ವಿಭಜಕ ತೆರವುಗೊಳಿಸಿ ಯು-ಟರ್ನ್ ವ್ಯವಸ್ಥೆ ಕಲ್ಪಿಸಬೇಕೆಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಲೋಕಸಭಾ ಸದಸ್ಯರು ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಿದ್ದು, ಈ ಕುರಿತು ಕ್ರಮವಹಿಸವಂತೆ ಜಿಲ್ಲಾಧಿಕಾರಿಗಳು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.