ಬೆಳಗಾವಿಯ ಸುವರ್ಣ ಸೌಧ ಭವನದಲ್ಲಿ ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ನೂತನ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಸಭೆಯಲ್ಲಿ ಸಚಿವ ಡಿ.ಸುಧಾಕರ್ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಿಲ್ಲಾಧಿಕಾರಿ ನೂತನ ಕಚೇರಿ ನಿರ್ಮಾಣಕ್ಕೆ ಇದೀಗ ಪರ್ಯಾಯ ಪ್ರಸ್ತಾಪಗಳು ನಡೆದಿದ್ದು ಹಾಲಿ ಇರುವ ಜಿಲ್ಲಾಧಿಕಾರಿ ನಿವಾಸದ ಆಸು ಪಾಸಿನ ಜಾಗ ಬಳಕೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ.ಬೆಳಗಾವಿಯ ಸುವರ್ಣಸೌಧದಲ್ಲಿ ಸಚಿವ ಡಿ.ಸುಧಾಕರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚಿತ್ರದುರ್ಗ ನೂತನ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣ ಕಾಮಗಾರಿಗೆ ಜಿಲ್ಲಾಧಿಕಾರಿಗಳ ನಿವಾಸಕ್ಕೆ ಹೊಂದಿಕೊಂಡಿರುವ ತೋಟಗಾರಿಕೆ ಇಲಾಖೆಯ ಸ್ಥಳ ನೀಡುವ ಕುರಿತು ಸಭೆ ಚರ್ಚಿಸಿತು.
ಚಿತ್ರದುರ್ಗ ನಗರ ಸಮೀಪದ ಕುಂಚಿಗನಾಳ್ ಕಣಿವೆ ಬಳಿ ಹೊಸದಾಗಿ ನಿರ್ಮಾಣ ಮಾಡಲಾಗಿರುವ ಜಿಲ್ಲಾಧಿಕಾರಿಗಳ ಕಚೇರಿಯನ್ನು ಚಿತ್ರದುರ್ಗ ವೈದ್ಯಕೀಯ ಕಾಲೇಜಿಗೆ ನೀಡುವ ಪ್ರಸ್ತಾವನೆ ಸರ್ಕಾರದ ಹಂತದಲ್ಲಿ ಅನುಮೋದನೆ ನೀಡುವ ಹಂತದಲ್ಲಿದೆ. ಸಾರ್ವಜನಿಕರಿಗೆ ಅನುಕೂಲವಾಗುವ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳ ನಿವಾಸ ಮತ್ತು ಸುತ್ತಮುತ್ತಲಿನ ಸ್ಥಳದಲ್ಲಿ ಹೊಸದಾಗಿ ಜಿಲ್ಲಾಡಳಿತ ಭವನ ನಿರ್ಮಿಸಲು ಯೋಜಿಸಲಾಗಿದೆ ಎಂದು ಡಿ.ಸುಧಾಕರ್ ಹೇಳಿದರು.ನೂತನ ಜಿಲ್ಲಾಧಿಕಾರಿಗಳ ಕಚೇರಿ ನಿರ್ಮಾಣ ಯೋಜನೆಯಲ್ಲಿ ಜಿಲ್ಲಾಧಿಕಾರಿಗಳ ನಿವಾಸ ಮತ್ತು ಹೊಂದಿಕೊಂಡಿರುವ ತೋಟಗಾರಿಕೆ ಇಲಾಖೆ ಸ್ಥಳವನ್ನು ಸಹ ಬಳಸಿಕೊಳ್ಳಲು ಯೋಜಿಸಲಾಗಿರುತ್ತದೆ. ತೋಟಗಾರಿಕೆ ಇಲಾಖೆಯ 6 ಎಕರೆ ಸ್ಥಳವನ್ನು ಹೊಸ ಜಿಲ್ಲಾಧಿಕಾರಿಗಳ ಕಚೇರಿ ನಿರ್ಮಾಣಕ್ಕೆ ನೀಡಿದಲ್ಲಿ, ಈ ಸ್ಥಳದ ಬದಲಾಗಿ ಬೇರೆ ಜಾಗದಲ್ಲಿ ಜಮೀನು ನೀಡಿ ತೋಟಗಾರಿಕೆ ಇಲಾಖೆಗೆ ಅವಶ್ಯಕತೆ ಇರುವ ಮೂಲಭೂತ ಸೌಕರ್ಯ ಮತ್ತು ಹೊಸ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತೋಟಗಾರಿಕೆ ಇಲಾಖೆ ಕಚೇರಿಗೆ ಸ್ಥಳಾವಕಾಶವನ್ನು ನೀಡಲಾಗುವುದು ಎಂದರು.
ಇದಕ್ಕೆ ಉತ್ತರಿಸಿದ ತೋಟಗಾರಿಕೆ ಇಲಾಖೆ ನಿರ್ದೇಶಕ ಡಾ.ಗಿರೀಶ್, ಇಲಾಖೆಗೆ ಸೇರಿದ ಸ್ಥಳವನ್ನು ನೀಡುವ ಬಗ್ಗೆ ಸರ್ಕಾರದ ಕಾರ್ಯದರ್ಶಿಯವರೊಂದಿಗೆ ಚರ್ಚಿಸಲಾಗುವುದು ಹಾಗೂ ಸರ್ಕಾರಕ್ಕೆ ಸೇರಿದ ಸ್ಥಳವನ್ನು ನೀಡುವ ಅಧಿಕಾರ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯ ಸಮಿತಿಗೆ ಇರುವುದರಿಂದ ಸೂಕ್ತ ಪ್ರಸ್ತಾವನೆ ಜಿಲ್ಲಾಧಿಕಾರಿಗಳಿಂದ ಸಲ್ಲಿಸಿದಲ್ಲಿ ಸಾರ್ವಜನಿಕ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ, ಈ ಸಂಬಂಧ ಜಿಲ್ಲಾಡಳಿತದ ಹಂತದಲ್ಲಿ ಸಭೆ ನಡೆಸಿ ಅಗತ್ಯ ದಾಖಲಾತಿಗಳೊಂದಿಗೆ ಪ್ರಸ್ತಾವನೆಯನ್ನು ಕಂದಾಯ ಇಲಾಖೆಯ ಮುಖಾಂತರ ತೋಟಗಾರಿಕೆ ಇಲಾಖೆಗೆ ಸಲ್ಲಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ, ತೋಟಗಾರಿಕೆ ಇಲಾಖೆ ನಿರ್ದೇಶಕ ಡಾ.ಗಿರೀಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಡಾ.ಆಕಾಶ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಸವಿತ ಮತ್ತು ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.