ಚೌಲಗೆರೆ ಟೋಲ್‌ ಸಂಗ್ರಹಕ್ಕೆ ಡೀಸಿ ಬ್ರೇಕ್‌

| Published : Dec 18 2024, 12:48 AM IST

ಸಾರಾಂಶ

ಆಲೂರು ತಾಲೂಕಿನ ಭೈರಾಪುರ ಸಮೀಪದ ಚೌಲಗೆರೆಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಇರುವ ಟೋಲ್‌ನಲ್ಲಿ ಸೋಮವಾರದಿಂದ ಟೋಲ್‌ ಸಂಗ್ರಹ ಮಾಡಲು ಆರಂಭಿಸಲಾಗಿತ್ತು. ಆದರೆ, ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮಂಗಳವಾರ ಸ್ಥಳೀಯರು ಹಾಗೂ ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿ ಸತ್ಯಭಾಮ ಮುಂದಿನ ಆದೇಶದವರೆಗೂ ಟೋಲ್‌ ಸಂಗ್ರಹ ಮಾಡದಂತೆ ಆದೇಶಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಸಾರ್ವಜನಿಕರು ಮತ್ತು ಸ್ಥಳೀಯ ಜನಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿ ಪೂರ್ಣಗೊಂಡಿಲ್ಲ. ಆದರೂ ಟೋಲ್ ಸಂಗ್ರಹ ಮಾಡಲಾಗುತ್ತಿದೆ ಎಂದು ಟೋಲ್‌ ಬಳಿ ಪ್ರತಿಭಟನೆ ನಡೆಸಿದ್ದರಿಂದ ಅವರೆಲ್ಲರನ್ನೂ ಕರೆದು ಚರ್ಚೆ ನಡೆಸಲಾಯಿತು. ಇಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ಆದ್ದರಿಂದ ಟೋಲ್ ಸಂಗ್ರಹ ಮಾಡದಂತೆ ಖಡಕ್ ಆಗಿ ಸೂಚನೆ ನೀಡಿದರು.

ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ರಸ್ತೆಯ ಅವೈಜ್ಞಾನಿಕ ಕಾಮಗಾರಿ ಮತ್ತು ಅಪೂರ್ಣಗೊಂಡಿರುವ ಬಗ್ಗೆ ಸಭೆಯ ಗಮನಕ್ಕೆ ತಂದರು. ಆದರೆ ರಾಷ್ಟ್ರೀಯ ಹೆದ್ದಾರಿಯ ಯೋಜನಾ ನಿರ್ದೇಶಕರು ಕರಾರು ಪತ್ರದಂತೆ ಟೋಲ್ ನಿರ್ಮಿಸಲಾಗಿದೆ. ಟೋಲ್‌ ಸಂಗ್ರಹ ಮಾಡಲಾಗುತ್ತಿದೆ. ಇದಕ್ಕೆ ಅವಕಾಶ ಮಾಡಿಕೊಡಬೇಕೆಂದು ಸಭೆ ಗಮನಕ್ಕೆ ತಂದರು.

ಆದರೆ ಜಿಲ್ಲಾಧಿಕಾರಿಗಳು ಅಸಮಾಧಾನಗೊಂಡು ನಾನು ಜಿಲ್ಲೆಯ ಜಿಲ್ಲಾಧಿಕಾರಿ, ಈ ಜಿಲ್ಲೆಯ ಜನರು ರಸ್ತೆಗಾಗಿ ಭೂಮಿ ಕಳೆದುಕೊಂಡಿದ್ದಾರೆ. ಅವರಿಗೆ ಅನ್ಯಾಯವಾಗಬಾರದು. ರಸ್ತೆ ಕಾಮಗಾರಿ ಪೂರ್ಣಗೊಂಡ ನಂತರ ಟೋಲ್ ಸಂಗ್ರಹ ಮಾಡಿಕೊಳ್ಳಿ. ಅಲ್ಲಿಯವರೆಗೂ ಯಾವುದೇ ಕಾರಣಕ್ಕೂ ಸಂಗ್ರಹ ಮಾಡಬಾರದು ಎಂದು ಹೇಳಿದರು.

ಮಾಜಿ ಶಾಸಕ ಹೆಚ್.ಕೆ. ಕುಮಾರಸ್ವಾಮಿ, ಎಸ್ಪಿ ಮೊಹಮ್ಮದ್ ಸುಜಿತಾ, ಸಕಲೇಶಪುರ ಎಸಿ ಶೃತಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಪ್ರವೀಣ್‌ಕುಮಾರ್, ಕಸಾಪ ಮಾಜಿ ಗೌರವಾಧ್ಯಕ್ಷ ರವಿನಾಕಲಗೂಡು, ಆಲೂರು ತಾಲ್ಲೂಕು ಹಿರಿಯ ನಾಗರಿಕರ ವೇದಿಕೆಯ ಕೆ.ಎಸ್.ಮಂಜೇಗೌಡ, ಕರವೇ ಪ್ರವೀಣ್‌ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಸತೀಶ್ ಪಟೇಲ್, ಕರವೇ ತಾಲ್ಲೂಕು ಅಧ್ಯಕ್ಷ ರಾಘವೇಂದ್ರ, ಪಾಳ್ಯ ರಘು, ಮಹಮ್ಮದ್ ಸಾದಿಕ್, ನಟರಾಜ್, ಮಂಜು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.