ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದ ಎಲ್ಲಾ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷೆ ನಡೆಯಲಿದ್ದು, ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚಿಸಿದ್ದಾರೆ.ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳುವ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಎಲ್ಲಾ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳುವ ಪ್ರಕ್ರಿಯೆ ಶೀಘ್ರ ಆರಂಭವಾಗಲಿದೆ. ಆ ದಿಸೆಯಲ್ಲಿ ಈ ಎಲ್ಲಾ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆಗಬೇಕಿದೆ ಎಂದರು.ಯಾವುದೇ ಕುಟುಂಬವು ಸಮೀಕ್ಷೆಯಿಂದ ಹೊರಗುಳಿಯದಂತೆ ಎಚ್ಚರವಹಿಸಬೇಕು. ಆ ದಿಸೆಯಲ್ಲಿ ಎಲ್ಲಾ ವಾಸದ ಮನೆಗಳಿಗೆ ವಿದ್ಯುತ್ ಸಂಪರ್ಕ ಇರುವುದರಿಂದ ವಾಸದ ಮನೆಗಳ ವಿದ್ಯುತ್ ಬಿಲ್ಲಿನ ಆರ್‍ಆರ್ ಸಂಖ್ಯೆ ಆಧಾರದ ಮೇಲೆ ಮನೆಗಳನ್ನು ಗುರುತಿಸಿ ಅಲ್ಲಿರುವ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡಬೇಕಿದೆ. ಜೊತೆಗೆ ವಿದ್ಯುತ್ ಸಂಪರ್ಕ ಇಲ್ಲದ ಮನೆಗಳಿಗೂ ಸಹ ಗ್ರಾಮ ಆಡಳಿತ ಅಧಿಕಾರಿಗಳ ಮುಖಾಂತರ ಜಿಯೊ ಮ್ಯಾಪಿಂಗ್ ಮಾಡಬೇಕಿದೆ ಎಂದು ಹೇಳಿದರು.
ಸ್ಟಿಕ್ಕರ್ ಅಳವಡಿಕೆ ಆರಂಭ:ಇದರಿಂದ ಸಮೀಕ್ಷೆ ವ್ಯಾಪ್ತಿಯಿಂದ ಯಾರೂ ಹೊರಗುಳಿಯುವುದಿಲ್ಲ. ಜಿಲ್ಲೆಯಲ್ಲಿರುವ ಎಲ್ಲಾ ಮನೆಗಳ ವಿದ್ಯುತ್ ಮೀಟರ್ ರೀಡರ್‍ಗಳಿಂದ ಕುಟುಂಬಗಳ ಪಟ್ಟಿ ಮಾಡಿ, ಈ ಕುರಿತು ಮನೆಗಳಿಗೆ ಜಿಯೋ ಟ್ಯಾಗ್‍ಗಾಗಿ ಸ್ಟಿಕ್ಕರ್‍ಗಳನ್ನು ಅಳವಡಿಸುವ ಕಾರ್ಯ ಈಗಾಗಲೇ ಆರಂಭವಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಜಿಲ್ಲೆಯಲ್ಲಿ ವಿದ್ಯುತ್ ಮೀಟರ್ ರೀಡರ್ ಸಿಬ್ಬಂದಿಯು ಆರ್ ಆರ್ ನಂಬರ್ ಹೊಂದಿರುವ ಕುಟುಂಬಗಳ ಪಟ್ಟಿ ಮಾಡಲಿದ್ದಾರೆ. ಆ ದಿಸೆಯಲ್ಲಿ ಸಮೀಕ್ಷೆ ಕಾರ್ಯ ಮುಗಿಯುವವರೆಗೂ ತಮ್ಮ ಮನೆಗಳಿಗೆ ಅಂಟಿಸಲಾದ ಜಿಯೋ ಟ್ಯಾಗ್ ಸ್ಟಿಕ್ಕರ್‍ನ್ನು ತೆಗೆಯಬಾರದು ಎಂದು ಕೋರಿದರು.ವಿಶೇಷ ಆ್ಯಪ್ ನಿಗದಿ:
ಸಮೀಕ್ಷೆಗಾಗಿ ವಿಶೇಷ ಆ್ಯಪ್ ನಿಗದಿಪಡಿಸಲಾಗಿದೆ ಎಂದು ವೆಂಕಟ್ ರಾಜಾ ಅವರು ವಿವರಿಸಿದರು.ಸುಮಾರು 65 ಪ್ರಶ್ನಾವಳಿಗಳು ಇದ್ದು, ಕುಟುಂಬಗಳಿಂದ ಮಾಹಿತಿ ಪಡೆದು ಆ ಆ್ಯಪ್ ಮೂಲಕವೇ ಸಮೀಕ್ಷೆ ಮಾಡಲಾಗುತ್ತದೆ. ಜಿಲ್ಲೆಯಲ್ಲಿನ ಒಟ್ಟು ಕುಟುಂಬಗಳ ಸಂಖ್ಯೆಗೆ ಅನುಗುಣವಾಗಿ ಪ್ರತೀ ಸಮೀಕ್ಷೆದಾರರು ಎಲ್ಲಾ ಮನೆಗಳಿಗೆ ಖುದ್ದು ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದರು.
ವಿದ್ಯುತ್ ಸಂಪರ್ಕ ಹೊಂದಿರುವ ಮನೆಗಳ ಒಟ್ಟು ಸಂಖ್ಯೆ 1,86,005, ಕಾಲಂ(2)ಕ್ಕೆ ಅನುಗುಣವಾಗಿ ಬೇಕಾಗಿರುವ ಮಾಸ್ಟರ್ ಟ್ರೈನರ್ಸ್‍ಗಳ ಒಟ್ಟು ಸಂಖ್ಯೆ 25, ಅವಶ್ಯಕತೆಯಿರುವ ಮೇಲ್ವಿಚಾರಕರ ಒಟ್ಟು ಸಂಖ್ಯೆ 62 ಹಾಗೂ ಅವಶ್ಯಕತೆಯಿರುವ ಗಣತಿದಾರರ ಒಟ್ಟು ಸಂಖ್ಯೆ 1240 ಆಗಿರುತ್ತದೆ ಎಂದು ವಿವರಿಸಿದರು.ಸರ್ಕಾರದಿಂದ ಸಮೀಕ್ಷೆ ಕಾರ್ಯಕ್ಕಾಗಿ ಹೊಸದಾಗಿ ಸಿದ್ಧಪಡಿಸಿರುವ ಅಪ್ಲಿಕೇಶನ್ ಮುಖಾಂತರ ಸಮೀಕ್ಷೆ ಕಾರ್ಯವನ್ನು ದಸರಾ ರಜೆ ಅವಧಿಯಲ್ಲಿ ಅಂದರೆ ಸೆ. 22 ರಿಂದ ಅ.7 ರವರೆಗೆ ನಡೆಯಲಿದೆ ಎಂದರು.
ಮಾಸ್ಟರ್ ಟ್ರೈನರ್ಸ್‍ಗಳಿಗೆ ತರಬೇತಿ:ಜಿಲ್ಲಾ ಹಂತದಲ್ಲಿ ಆಯ್ಕೆ ಮಾಡಿದ ಮಾಸ್ಟರ್ ಟ್ರೈನರ್ಸ್‍ಗಳಿಗೆ ತರಬೇತಿ ನೀಡಲಾಗುವುದು. ತರಬೇತಿಯನ್ನು ಹೊಂದಿದ ಮಾಸ್ಟರ್ ಟ್ರೈನರ್ಸ್ ಗಳಿಂದ ಮೇಲ್ವಿಚಾರಕರು ಮತ್ತು ಗಣತಿದಾರರಿಗೆ ತರಬೇತಿ ನೀಡಲಾಗುತ್ತದೆ ಎಂದರು.
ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಅವರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸಂಬಂಧ ಸರ್ಕಾರದ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದರು.ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎ.ಎಸ್.ದೀಪಕ್, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕರಾದ ಬಿ.ಬಸಪ್ಪ, ಪೌರಾಯುಕ್ತರಾದ ಎಚ್.ಆರ್.ರಮೇಶ್, ಸೆಸ್ಕ್ ಇಇ ರಾಮಚಂದ್ರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪತ್ರಾಂಕಿತ ಅಧಿಕಾರಿ ಕವಿತಾ, ವ್ಯವಸ್ಥಾಪಕರಾದ ಶಿವಶಂಕರ, ತಾಲೂಕು ಅಧಿಕಾರಿಗಳಾದ ಮೋಹನ್ ಕುಮಾರ್, ಶ್ರೀಕಾಂತ್, ಶಾಲಾ ಶಿಕ್ಷಣ ಇಲಾಖೆಯ ಡಿವೈಪಿಸಿ ಕೃಷ್ಣಪ್ಪ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ನಾರಾಯಣ ಇತರರು ಇದ್ದರು.