ಸಾರಾಂಶ
ಮುಂಡರಗಿ: ಪಟ್ಟಣದ ವಾರ್ಡಿನ ವಿದ್ಯಾನಗರದ ಕಾಲವಾಡ ಅವರ ಪ್ಲಾಟಿನಲ್ಲಿ ನೆನಗುದಿಗೆ ಬಿದ್ದಿರುವ ನಗರೋತ್ಥಾನ ಕಾಮಗಾರಿಯನ್ನು 8 ದಿನಗಳಲ್ಲಿ ಪ್ರಾರಂಭಿಸಿ ಮುಕ್ತಾಯಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಅವರು ಶುಕ್ರವಾರ ವಿವಿಧ ವಾರ್ಡ್‌ಗಳಲ್ಲಿನ ನಗರೋತ್ಥಾನ ಕಾಮಗಾರಿ ಪರಿಶೀಲನೆ ವೇಳೆ ವಿದ್ಯಾನಗರದ ಪ್ಲಾಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದರು.ಕಳೆದ ಒಂದೂವರೆಯಿಂದ ಎರಡು ವರ್ಷದ ಹಿಂದೆ ನಗರೋತ್ಥಾನ ಕಾಮಗಾರಿ ಪ್ರಾರಂಭವಾಗಿದ್ದು, ಮುಕ್ತಾಯಗೊಳಿಸುವಂತೆ ಅನೇಕ ಬಾರಿ ಒತ್ತಾಯಿಸಿದರೂ ಇದುವರೆಗೂ ಮುಕ್ತಾಯಗೊಂಡಿಲ್ಲ. ನಿತ್ಯ ಈ ರಸ್ತೆಯಲ್ಲಿ ಸಾವಿರಾರು ಮಕ್ಕಳು ಶಾಲೆಗೆ ತೆರಳುತ್ತಾರೆ. ತುಂಬಾ ತೊಂದರೆಯಾಗಿದೆ ಎಂದು ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಜಿಲ್ಲಾಧಿಕಾರಿಗೆ ವಿವರಿಸಿದರು.
18ನೇ ವಾರ್ಡಿನಲ್ಲಿ ಕಾಮಗಾರಿ ನೆನಗುದಿಗೆ ಬಿದ್ದಿರುವ ಕುರಿತು ವಾರ್ಡಿನ ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿಯವರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅವರನ್ನು 18ನೇ ವಾರ್ಡಿಗೆ ಕರೆತಂದು ವಿಳಂಬವಾಗಿರುವ ಕಾಮಗಾರಿ ತೋರಿಸಿದರು.ಸುಮಾರು ಎರಡು ವರ್ಷಗಳಿಂದ ಕಾಮಗಾರಿ ನೆನಗುದಿಗೆ ಬಿದ್ದಿರುವುದರಿಂದ ವಾರ್ಡಿನಲ್ಲಿ ನಿತ್ಯ ಓಡಾಡುವ ಜನತೆ ನನಗೆ ಹಿಡಿಶಾಪ ಹಾಕಿದ್ದಾರೆ. ಕೆಲವು ವೃದ್ಧರು ಬಿದ್ದು ಕೈ ಕಾಲು ಮುರಿದುಕೊಂಡಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿದರೆ ಅವರು ಕಾಮಗಾರಿ ಪ್ರಾರಂಭಿಸಲಿಲ್ಲ. ಇದೇ ರಸ್ತೆಯಲ್ಲಿ ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಇದ್ದು, ಮಳೆಗಾಲದಲ್ಲಿ ಮಕ್ಕಳು ಓಡಾಡುವಾಗ ಅನೇಕ ಬಾರಿ ಬಿದ್ದಿದ್ದಾರೆ. ಹೀಗಾಗಿ ನಾನು ಮಕ್ಕಳೊಂದಿಗೆ ಪುರಸಭೆ ಎದುರಿನಲ್ಲಿ ಧರಣಿ ನಡೆಸಲು ನಿರ್ಧರಿಸಿದ್ದೆ ಎಂದು ನಾಗೇಶ ಹುಬ್ಬಳ್ಳಿ ವಿವರಿಸಿದರು.
ಈ ಕಾಮಗಾರಿ ವಿಷಯವಾಗಿ ನಿರ್ಲಕ್ಷ್ಯವಹಿಸಿದ ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಎಂಟು ದಿನಗಳ ಒಳಗಾಗಿ ಕಾಮಗಾರಿ ಪ್ರಾರಂಭಿಸಿ ಪೂರ್ಣಗೊಳಿಸಬೇಕು ಎಂದು ಸ್ಥಳದಲ್ಲಿದ್ದ ಪಿಡಿ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಜಿಲ್ಲಾಧಿಕಾರಿಯವರು ಸೂಚಿಸಿದರು. ನಂತರ ಪಟ್ಟಣದ ವಿವಿಧ ಗ್ರಾಮಗಳಲ್ಲಿ ಮುಕ್ತಾಯಗೊಂಡಿರುವ ನಗರೋತ್ಥಾನ ಕಾಮಗಾರಿಗಳ್ನು ವೀಕ್ಷಿಸಿದರು. ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಶಂಕರ್ ಹುಲ್ಲಮ್ಮನವರ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.