ಸಾರಸ್ವತಪುರ ಸರ್ಕಾರಿ ಶಾಲೆಗೆ ಡಿಸಿ ದಿಢೀರ್ ಭೇಟಿ

| Published : Jul 09 2025, 12:19 AM IST

ಸಾರಸ್ವತಪುರ ಸರ್ಕಾರಿ ಶಾಲೆಗೆ ಡಿಸಿ ದಿಢೀರ್ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿ ತರಗತಿಗೆ ಹೋಗಿ, ವಿದ್ಯಾರ್ಥಿಗಳಿಗೆ ವಿತರಿಸಿರುವ ಸಮವಸ್ತ್ರ, ಪಠ್ಯಪುಸ್ತಕಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಕೆಲವು ವಿದ್ಯಾರ್ಥಿಗಳು ಸಮವಸ್ತ್ರ ಧರಿಸದಿರುವುದನ್ನು ಗಮನಿಸಿ, ಬುಧವಾರ ಎರಡೂ ಜೊತೆ ಸಮವಸ್ತ್ರ ವಿತರಿಸಿ, ಖುದ್ದು ತಮ್ಮ ಕಚೇರಿಗೆ ಶಾಲಾ ಮುಖ್ಯಸ್ಥರು ಶಾಲಾ ಅವಧಿ ನಂತರ ಆಗಮಿಸಿ ಮಾಹಿತಿ ಸಲ್ಲಿಸಲು ಅವರು ಸೂಚಿಸಿದರು.

ಧಾರವಾಡ: ನಗರದ ಸಾರಸ್ವತಪುರದ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ ನಂ. 9ಕ್ಕೆ ಮಂಗಳವಾರ ಜಿಲ್ಲಾಧಿಕಾರಿ ದಿವ್ಯ ಪ್ರಭು ದಿಢೀರ್ ಭೇಟಿ ನೀಡಿ, ಶಿಕ್ಷಕರ ಮತ್ತು ಮಕ್ಕಳ ಹಾಜರಾತಿ, ಶಾಲೆ ಕಟ್ಟಡ ಪರಿಶೀಲಿಸಿದರು.

ಶಾಲಾ ಕಟ್ಟಡ ಸೋರಿಕೆ ಕುರಿತು ಸಾರ್ವಜನಿಕರ ದೂರು ಹಿನ್ನಲೆಯಲ್ಲಿ ಕಲಘಟಗಿ ರಸ್ತೆಯ ಸಾರಸ್ವತಪುರದ ಶಾಲೆಯ ಕಟ್ಟಡ ಸೋರಿಕೆ ಹಾಗೂ ತರಗತಿಗಳ ಸುಸ್ಥಿತಿ ಬಗ್ಗೆ ಪರಿಶೀಲಿಸಿದರು.

ಪ್ರತಿ ತರಗತಿಗೆ ಹೋಗಿ, ವಿದ್ಯಾರ್ಥಿಗಳಿಗೆ ವಿತರಿಸಿರುವ ಸಮವಸ್ತ್ರ, ಪಠ್ಯಪುಸ್ತಕಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಕೆಲವು ವಿದ್ಯಾರ್ಥಿಗಳು ಸಮವಸ್ತ್ರ ಧರಿಸದಿರುವುದನ್ನು ಗಮನಿಸಿ, ಬುಧವಾರ ಎರಡೂ ಜೊತೆ ಸಮವಸ್ತ್ರ ವಿತರಿಸಿ, ಖುದ್ದು ತಮ್ಮ ಕಚೇರಿಗೆ ಶಾಲಾ ಮುಖ್ಯಸ್ಥರು ಶಾಲಾ ಅವಧಿ ನಂತರ ಆಗಮಿಸಿ ಮಾಹಿತಿ ಸಲ್ಲಿಸಲು ಅವರು ಸೂಚಿಸಿದರು.

ಶಾಲೆಯಲ್ಲಿ ಸಮಯಕ್ಕೆ ಸರಿಯಾಗಿ ಶಿಕ್ಷಕರು ಹಾಜರಿದ್ದು, ಮಕ್ಕಳ ಹಾಜರಾತಿ ಖಚಿತ ಪಡಿಸಿಕೊಳ್ಳಬೇಕು. ಈ ಶಾಲೆಗೆ ಕೊಳಚೆ ಪ್ರದೇಶದ, ಹಿಂದುಳಿದ ಪ್ರದೇಶದ ಮಕ್ಕಳು ಹೆಚ್ವು ದಾಖಲಾಗುವುದರಿಂದ ಮಕ್ಕಳಿಗೆ ಉತ್ತಮ ಓದು, ಬರಹ ಕಲಿಸಬೇಕು. ಪ್ರತಿ ಕೋಣೆಯಲ್ಲಿ ಉತ್ತಮ ಗಾಳಿ, ಬೆಳಕು ಬರುವಂತೆ ನೋಡಿಕೊಳ್ಳಬೇಕು. ಶಾಲೆಯಲ್ಲಿ ಹಾಗೂ ಶಾಲೆಯ ಆವರಣದಲ್ಲಿ ಶಿಸ್ತು, ಸ್ವಚ್ಛತೆ ಕಾಪಾಡಬೇಕು ಎಂದರು.

ಶಾಲೆಯ ನಲಿ-ಕಲಿ ವರ್ಗಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದಾಗ, ಪುಟ್ಟ ಮಕ್ಕಳು ಪ್ರೀತಿಯಿಂದ ಸ್ವಾಗತಿಸಿದರು. 2ನೇ ವರ್ಗದ ಪುಟ್ಟ ಬಾಲಕ ಸಂತೋಷ ಸುಲಬ್ಬನವರ ಜಿಲ್ಲಾಧಿಕಾರಿಗಳಿಗೆ ಭಾರತ ಸಂವಿಧಾನದ ಪೀಠಿಕೆಯನ್ನು ಪುಸ್ತಕ ನೋಡದೇ ಹೇಳಿದ್ದನ್ನು ಖುಷಿಯಿಂದ ಕೇಳಿದ ಜಿಲ್ಲಾಧಿಕಾರಿಗಳು, ಆ ವಿದ್ಯಾರ್ಥಿಯ ಕೈ ಕುಲುಕಿ ವಿಶ್ ಮಾಡಿದರು. ಉಪ ನಿರ್ದೇಶಕ ಎಸ್.ಎಸ್. ಕೆಳದಿಮಠ, ಕ್ಷೇತ್ರಶಿಕ್ಷಣಾಧಿಕಾರಿ ಅಶೋಕ ಸಿಂದಗಿ ಹಾಗೂ ಶಾಲೆಯ ಮುಖ್ಯ ಶಿಕ್ಷಕಿ ಭಾರತಿ ಹಲಕುರ್ಕಿ ಇದ್ದರು.