ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಮಲೆಮಹದೇಶ್ವರ ಬೆಟ್ಟ ಗ್ರಾ.ಪಂ.ವ್ಯಾಪ್ತಿಯ ಕಾಡಂಚಿನ ಗ್ರಾಮಗಳ ರಸ್ತೆ ಅಭಿವೃದ್ಧಿಗೆ ಜಿಲ್ಲಾಧಿಕಾರಿಗಳು 68 ಕೋಟಿ ರು.ಗಳ ಅನುದಾನ ಬಿಡುಗಡೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಅನುದಾನ ಮಂಜೂರು ಹಂತದಲ್ಲಿದೆ ಎಂದು ಪಿಡಿಒ ಕಿರಣ್ ತಿಳಿಸಿದರು.ತಾಲೂಕಿನ ಮಲೆಮಹದೇಶ್ವರ ಬೆಟ್ಟ ಗ್ರಾ.ಪಂ.ವ್ಯಾಪ್ತಿಯ ಬುಡುಕಟ್ಟು ಹಾಡಿ, ಪೋಡು, ಕಾಡಂಚಿನ ಗ್ರಾಮಗಳಿಗೆ ಮೂಲಭೂತ ಸೌಕರ್ಯ ಮತ್ತು ಸಂಪ್ರದಾಯಕ ಲೈನ್ ಮುಖಾಂತರ ವಿದ್ಯುತ್ ಸಂಪರ್ಕಿಸುವ ಬಗ್ಗೆ ಮ.ಮ.ಬೆಟ್ಟ ಸಾಲೂರು ಸ್ಮಾರಕ ಭವನದಲ್ಲಿ ಏರ್ಪಡಿಸಲಾಗಿದ್ದ ವಿಶೇಷ ಗ್ರಾಮ ಸಭೆ ಹಾಗೂ 2023,2024 ನೇ ಸಾಲಿನ ಸಾಮಾಜಿಕ ಲೆಕ್ಕ ಪರಿಶೊಧನಾ ಗ್ರಾಮ ಸಭೆಯಲ್ಲಿ ಮಾತನಾಡಿದರು.
ಕಾಡಂಚಿನ ಗ್ರಾಮಗಳಲ್ಲಿ ಹಲವು ಸಮಸ್ಯೆ ಇರುವ ಹಿನ್ನಲೆ ಜಿಲ್ಲಾಧಿಕಾರಿ ವಿಶೇಷ ಗ್ರಾಮ ಸಭೆಯನ್ನು ಆಯೋಜಿಸಿ ನಡವಳಿಯನ್ನು ಸಲ್ಲಿಸಲು ಮೌಖಿಕವಾಗಿ ಆದೇಶ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಕಾಡಂಚಿನ ಹಾಡಿ ಹಳ್ಳಿಗಳಿಗೆ ಕುಡಿಯುವ ನೀರು, ರಸ್ತೆ, ವಿದ್ಯುತ್, ವಸತಿ ಇನ್ನಿತರೆ ಸೌಕರ್ಯಗಳು ಸಮರ್ಪಕವಾಗಿ ದೊರೆಯಲಿದೆ ಎಂದು ಭರವಸೆ ನೀಡಿದರು.ಸಮಸ್ಯೆಗಳನ್ನು ಬಗೆಹರಿಸಲು ಮನವಿ: ಆಣೆಹೊಲ ಗ್ರಾಮಕ್ಕೆ ಸ್ಮಶಾನ ಸೌಕರ್ಯ, ಬಸ್ ನಿಲ್ದಾಣ ಒದಗಿಸಬೇಕು, ಮಲೆಮಹದೇಶ್ವರ ಬೆಟ್ಟ ವ್ಯಾಪ್ತಿಯಲ್ಲಿ ಬಿರ್ಸಾಮುಂಡ ಅವರ ಪ್ರತಿಮೆ ನಿರ್ಮಾಣ ಮಾಡಲು 20*20 ಜಾಗ ಒದಗಿಸಬೇಕು. ಗೊರಸಾಣೆ ಗ್ರಾಮಕ್ಕೆ ಸಿ.ಸಿ.ರಸ್ತೆ, ಚರಂಡಿ, ಕುಡಿಯುವ ನೀರು, ಹಳೆಯ ಬಾವಿ ದುರಸ್ಥಿ, ಮೆದಗಾಣೆ ಗ್ರಾಮದಲ್ಲಿ ಅರಣ್ಯ ಹಕ್ಕು ಪತ್ರ ನೀಡಿರುವವರೆಗೆ ಮನೆ ನಿರ್ಮಿಸಿಕೊಳ್ಳಲು ಅರಣ್ಯ ಇಲಾಖೆ ಅವಕಾಶ ಕಲ್ಪಿಸಬೇಕು, ಮೆಂದಾರೆ ಗ್ರಾಮದ ಜನತೆಗೆ ಪುನರ್ವಸತಿ ಕಲ್ಪಿಸುವವರೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು.
ಕೊಮ್ಮುಡಿಕ್ಕಿ ಗ್ರಾಮದಲ್ಲಿ ರಸ್ತೆ ಮತ್ತು ಸೇತುವೆಯನ್ನು ನಿರ್ಮಿಸಬೇಕು, ಕೋಣನಕೆರೆ ಗ್ರಾಮಕ್ಕೆ ಮೂಲಭೂತ ಸೌಕರ್ಯ ಒದಗಿಸದೇ ಹೋದರೆ ಇಂಡಿಗನತ್ತ ಗ್ರಾಮದವರ ರೀತಿ ಚುನಾವಣೆ ಬಹಿಷ್ಕಾರವನ್ನು ಮಾಡಲಾಗುವುದು. ಅನಾರೋಗ್ಯ ಹಾಗೂ ಹೆರಿಗೆ ಸಮಯದಲ್ಲಿ ದೊಡ್ಡಾಣೆಯಿಂದ ಮಾರ್ಟಳ್ಳಿ ಗ್ರಾಮಕ್ಕೆ ಡೋಲಿ ಮುಖಾಂತರ ಹೋಗುವುದರಿಂದ ಸಾರಿಗೆ ವ್ಯವಸ್ಥೆಯನ್ನು ಕೈಗೊಳ್ಳಬೇಕು, ಕಾಡು ಹಂದಿಗಳ ಹಾವಳಿ ತಡೆಗಟ್ಟಬೇಕು, ಅರಣ್ಯ ಇಲಾಖೆಯಿಂದ ಅಧಿಕಾರಿಯ ಸಿಬ್ಬಂದಿ ವರ್ಗದವರು ನಿವಾಸಿಗಳಿಗೆ ಬಹಳಷ್ಟು ತೊಂದರೆಗಳು ನೀಡುತ್ತಿದ್ದಾರೆ ಹಾಗೂ ಸೇರಿದಂತೆ ಇನ್ನು ಹತ್ತು ಹಲವು ಸಮಸ್ಯೆಗಳನ್ನು ವಿಶೇಷ ಗ್ರಾಮ ಸಭೆಯಲ್ಲಿ ವಿವಿಧ ಗ್ರಾಮಗಳ ಜನತೆ ತಿಳಿಸಿದರು.ಗ್ರಾಮಗಳ ಅಭಿವೃದ್ಧಿಗೆ ಮನರೇಗಾ ವರದಾನ ನಾರಾಯಣ್: ಸ ಮುದಾಯ ಆಧಾರಿತ ಹಾಗೂ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ವರದಾನವಾಗಿದೆ. ಈ ಅನುಕೂಲವನ್ನು ಗ್ರಾಮಗಳ ಜನತೆ ಬಳಕೆ ಮಾಡಿಕೊಳ್ಳಬೇಕು ಎಂದರು.ಮ.ಮ.ಬೆಟ್ಟ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿದ್ದ, 2023-2024 ನೇ ಸಾಲಿನ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆಯಲ್ಲಿ ಮಾಹಿತಿ ನೀಡಿದ ಅವರು ಮನರೇಗಾ ಯೋಜನೆಯಲ್ಲಿ ಕೂಲಿ ಪಡೆಯಬಹುದಾಗಿದೆ ಗಂಡು ಮತ್ತು ಹೆಣ್ಣಿಗೆ ಸಮಾನ ವೇತನ ನೀಡಲಾಗುವುದು.
ಸಭೆಯಲ್ಲಿ ಸಾಮಾಜಿಕ ಪರಿಶೋಧನೆಯ ಸಂಪನ್ಮೂಲ ವ್ಯಕ್ತಿಗಳು ವರದಿಯನ್ನು ಮಂಡಿಸಿದರು.ಈ ಸಂದರ್ಭದಲ್ಲಿ ಮೀನುಗಾರಿಕೆ ಇಲಾಖೆಯ ಶಿವರಾಜು, ಗ್ರಾ.ಪಂ.ಅಧ್ಯಕ್ಷೆ ಅರ್ಚನ, ಉಪಾಧ್ಯಕ್ಷೆ ಕೆಂಪಾರೆ, ಸೆಸ್ಕ್ ಇಲಾಖೆಯ ಕಿರಿಯ ಅಭಿಯಂತರ ಮಹೇಶ್, ಮಲೆಮಹದೇಶ್ವರ ಮತ್ತು ಕಾವೇರಿ ವನ್ಯಜೀವಿ ವಿಭಾಗದ ಡಿಆರ್‌ಎಫ್‌ಒ ಶಿವರಾಜ್, ದಿನೇಶ್ ವಿವಿಧ ಗ್ರಾಮಗಳ ಜನತೆ ಉಪಸ್ಥಿತರಿದ್ದರು.