ಸಾರಾಂಶ
ಕನ್ನಡಪ್ರಭ ವಾರ್ತೆ ಹುಕ್ಕೇರಿ
ಇಲ್ಲಿನ ಮಿನಿವಿಧಾನ ಸೌಧ ಬಳಿಯ ಸಭಾಭವನದಲ್ಲಿ ಶನಿವಾರ ನಡೆದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಜನಪರ ಯೋಜನೆಗಳಲ್ಲಿ ಒಂದಾದ ಜನಸ್ಪಂದನ ಕಾರ್ಯಕ್ರಮಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು.ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅವರು ಜಿಲ್ಲೆಯಲ್ಲಿಯೇ ಮೊಟ್ಟ ಮೊದಲು ಭಾಗವಹಿಸಿದ ಈ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಗ್ರಾಮೀಣ ಜನರ ಸರ್ಕಾರಿ ಸೌಲಭ್ಯ ಹಾಗೂ ಹಲವಾರು ಆಡಳಿತಾತ್ಮಕ ಸಮಸ್ಯೆಗಳ ಪರಿಹಾರಕ್ಕೆ ವೇದಿಕೆ ಕಲ್ಪಿಸಿತು. ಸುಮಾರು 2 ಗಂಟೆಗೂ ಹೆಚ್ಚು ಅವಧಿಗೆ ನಿಂತುಕೊಂಡೇ ಸಾರ್ವಜನಿಕರ ಕುಂದುಕೊರತೆ ಆಲಿಸಿದ ಜಿಲ್ಲಾಧಿಕಾರಿ ಸ್ಥಳದಲ್ಲಿಯೇ ಪರಿಹರಿಸಿದ ಪರಿ ಸಾಕಷ್ಟು ಪ್ರಶಂಸೆಗೆ ಪಾತ್ರವಾಯಿತು. ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ ಜನರ ಅಹವಾಲು-ಸಮಸ್ಯೆಗಳನ್ನು ಸಮಚಿತ್ತ ಹಾಗೂ ತಾಳ್ಮೆಯಿಂದ ಆಲಿಸಿ ಜನರ ಧ್ವನಿಗೆ ಕಿವಿಯಾದರು. ಇವರಿಗೆ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಶಿಂಧೆ ಸಾಥ್ ನೀಡಿದರು.
ಜನಸ್ಪಂದನ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿ, ಸಮಸ್ಯೆ ಆಲಿಸಿ, ಪರಿಹಾರೋಪಾಯ ನೀಡಿದರು. ನಾಗರಿಕರ ಕುಂದುಕೊರತೆ ಪರಿಹರಿಸಲು ಮತ್ತು ಕಚೇರಿಗಳಿಗೆ ಅಲೆದಾಟ ತಪ್ಪಿಸುವ ಉದ್ದೇಶದಿಂದ ಹುಕ್ಕೇರಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಜನಸ್ಪಂದನದಲ್ಲಿ ಅನೇಕರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು.ನೂರಾರು ರೈತರು ಭಾಗವಹಿಸಿ ಸಂಕೇಶ್ವರ ಎಪಿಎಂಸಿ ಮಾರುಕಟ್ಟೆ ಸ್ಥಳಾಂತರ ವಿಚಾರವನ್ನು ಜಿಲ್ಲಾಧಿಕಾರಿಗಳ ಮುಂದಿಟ್ಟರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಡಿಸಿ ಒಂದೆರೆಡು ದಿನದಲ್ಲಿ ಎಲ್ಲ ರೈತರು ಮತ್ತು ವ್ಯಾಪಾರಸ್ಥರ ಸಭೆ ನಡೆಸಿ ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು. ಇದೇ ವೇಳೆ ವಿವಿಧ ದಲಿತಪರ ಸಂಘಟನೆಗಳ ಕಾರ್ಯಕರ್ತರು, ಅವರಗೋಳ ದಲಿತರ ಸ್ಮಶಾನ ಭೂಮಿಗೆ ಹದ್ದುಬಸ್ತ್ ಮಾಡುವುದು, ಅಕ್ರಮ-ಸಕ್ರಮ ಯೋಜನೆಯಡಿ ಭೂಮಿ ಮಂಜೂರಾತಿ ಮಾಡುವುದು ಸೇರಿದಂತೆ ಅನೇಕ ಸಮಸ್ಯೆಗಳ ಕುರಿತು ಮನವರಿಕೆ ಮಾಡಿದರು.
ಕಂದಾಯ ಇಲಾಖೆ ವ್ಯಾಪ್ತಿಯ ಪಿಂಚಣಿ, ಪಡಿತರ ಚೀಟಿ, ಅನ್ನಭಾಗ್ಯ, ಹಕ್ಕುಪತ್ರ, ಸಾಗುವಳಿ ಚೀಟಿ, ಆರ್‌ಟಿಸಿ ಖಾತೆಗಳು, ಮನೆ ಹಾನಿಗೆ ಸಂಬಂಧಿಸಿದ ಅಹವಾಲುಗಳೂ ಕೂಡ ಸಲ್ಲಿಕೆಯಾದವು. ಪುರಸಭೆ ವ್ಯಾಪ್ತಿಯ ರಸ್ತೆ, ನಿವೇಶನ ಅರ್ಜಿಗಳು ಬಂದಿವೆ. ತಾಲೂಕು ಪಂಚಾಯತಿ ವತಿಯಿಂದ ನರೇಗಾ, ಗ್ರಾಪಂಗಳ ಸಮಸ್ಯೆ ಕೂಡ ಕೇಳಿ ಬಂದವು. ಕುಡಿಯುವ ನೀರು, ಸಾರಿಗೆ ಸಮಸ್ಯೆ, ಜಮೀನು ಸಮಸ್ಯೆ, ಜಮೀನಿಗೆ ರಸ್ತೆ ಸೇರಿದಂತೆ ಒಟ್ಟು 39 ಅರ್ಜಿಗಳು ಸಲ್ಲಿಕೆಯಾಗಿವೆ.ತಾಪಂ ಇಒ ಟಿ.ಆರ್.ಮಲ್ಲಾಡದ, ಡಿಎಸ್ಪಿ ಡಿ.ಎಚ್.ಮುಲ್ಲಾ, ತಹಸೀಲ್ದಾರ ಮಂಜುಳಾ ನಾಯಕ, ಗ್ರೇಡ್-2 ತಹಸೀಲ್ದಾರ ಪ್ರಕಾಶ ಕಲ್ಲೋಳಿ, ಶಿರಸ್ತೇದಾರ ಎನ್.ಆರ್.ಪಾಟೀಲ, ಕಂದಾಯ ನಿರೀಕ್ಷಕರಾದ ಮಲ್ಲಿಕಾರ್ಜುನ ಸಾರಾಪುರೆ, ಎ.ಎಂ.ಕಮತನೂರ, ಸಿ.ಕೆ.ಕಲಕಾಂಬಕರ ಮತ್ತಿತರರು ಇದ್ದರು.
ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ಜನಸ್ಪಂದನ ಸಹಕಾರಿಯಾಗಿದೆ. ಹಾಗಾಗಿ ಸಾರ್ವಜನಿಕರು ಇಂತಹ ಕಾರ್ಯಕ್ರಮಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಇನ್ನು ಮುಂದೆ ಪ್ರತಿ ಎರಡು ತಿಂಗಳಿಗೊಮ್ಮೆ ಜಿಲ್ಲೆಯ ತಾಲೂಕುಗಳಿಗೆ ತೆರಳಿ ಸಾರ್ವಜನಿಕರ ಅಹವಾಲು ಆಲಿಸಲಾಗುವುದು. ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ತಾಲೂಕಿನ ಕೇಂದ್ರ ಸ್ಥಾನಕ್ಕೆ ಹೋಗಿ ಜನರ ಸಮಸ್ಯೆಗಳನ್ನು ಆಲಿಸುವ ವಿಶಿಷ್ಟ ಕಾರ್ಯಕ್ರಮ ಇದಾಗಿದೆ- ಮೊಹಮ್ಮದ ರೋಷನ್ ಜಿಲ್ಲಾಧಿಕಾರಿ