ಹಾಸನಾಂಬೆ ದೇವಾಲಯದಲ್ಲಿ ಅರ್ಚಕರು ಆಗಮ ಶಾಸ್ತ್ರದ ಪ್ರಕಾರ ಶಾಸ್ತ್ರೋಕ್ತವಾಗಿ ಪೂಜಾ ಕೈಂಕರ್ಯ ನೆರವೇರಿಸುವುದರಿಂದ ಕೆಲವೊಮ್ಮೆ ಹೆಚ್ಚಿನ ಸಮಯ ಬೇಕಾಗುತ್ತದೆ. ಮತ್ತೊಂದೆಡೆ, ದರ್ಶನೋತ್ಸವದ ಸಂದರ್ಭದಲ್ಲಿ ದಿನವಿಡೀ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ದರ್ಶನಕ್ಕಾಗಿ ಮೂರು, ನಾಲ್ಕು ಅಥವಾ ಐದು ಗಂಟೆಗಳ ಕಾಲ ಸರತಿ ಸಾಲಿನಲ್ಲಿ ಕಾಯುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಪೂಜಾ ವಿಧಾನಗಳಿಗೆ ಅಗತ್ಯ ಗೌರವ ನೀಡುವುದರ ಜತೆಗೆ, ಭಕ್ತರಿಗೆ ಹೆಚ್ಚಿನ ಸಮಯ ದರ್ಶನದ ಅವಕಾಶ ಕಲ್ಪಿಸುವ ಕುರಿತು ಅರ್ಚಕರೊಂದಿಗೆ ಚರ್ಚಿಸಲಾಗಿದೆ. ಜನದಟ್ಟಣೆ ನಿಯಂತ್ರಿಸುವುದು ಮತ್ತು ಭಕ್ತರ ಕಾಯುವ ಸಮಯವನ್ನು ಕಡಿಮೆ ಮಾಡುವುದು ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿದೆ. ಈ ನಿಟ್ಟಿನಲ್ಲಿ ಅರ್ಚಕರು ಸಹಕಾರ ನೀಡಲು ಒಪ್ಪಿಕೊಂಡಿದ್ದು, ದರ್ಶನ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ಹಾಸನಾಂಬೆ ದೇವಿ ದರ್ಶನೋತ್ಸವಕ್ಕೆ ಜಿಲ್ಲಾಡಳಿತ ಸಿದ್ಧತೆಗಳನ್ನು ಚುರುಕುಗೊಳಿಸಿದ್ದು, ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಲಕ್ಷಾಂತರ ಭಕ್ತರಿಗೆ ಸುಗಮ ಮತ್ತು ಸುರಕ್ಷಿತ ದರ್ಶನ ಕಲ್ಪಿಸುವುದರ ಜತೆಗೆ, ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾಯುವ ಸಮಯವನ್ನು ಕಡಿಮೆ ಮಾಡಲು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಿಳಿಸಿದರು.ಶುಕ್ರವಾರ ಹಾಸನಾಂಬೆ ದರ್ಶನೋತ್ಸವದ ಪೂರ್ವಸಿದ್ಧತೆಗಳ ಪರಿಶೀಲನೆಗೆ ಆಗಮಿಸಿದ್ದ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮಾತನಾಡಿ, ಭಕ್ತರ ದರ್ಶನದ ವ್ಯವಸ್ಥೆ, ಪೂಜಾ ಕೈಂಕರ್ಯ ನಿರ್ವಹಣೆ ಹಾಗೂ ಜನದಟ್ಟಣೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅರ್ಚಕರೊಂದಿಗೆ ಚರ್ಚೆ ನಡೆಸಲಾಗಿದೆ. ಭಕ್ತರಿಗೆ ಉತ್ತಮ ದರ್ಶನದ ವ್ಯವಸ್ಥೆ ಕಲ್ಪಿಸಲು ಅರ್ಚಕರು ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದರು.
ಹಾಸನಾಂಬೆ ದೇವಾಲಯದಲ್ಲಿ ಅರ್ಚಕರು ಆಗಮ ಶಾಸ್ತ್ರದ ಪ್ರಕಾರ ಶಾಸ್ತ್ರೋಕ್ತವಾಗಿ ಪೂಜಾ ಕೈಂಕರ್ಯ ನೆರವೇರಿಸುವುದರಿಂದ ಕೆಲವೊಮ್ಮೆ ಹೆಚ್ಚಿನ ಸಮಯ ಬೇಕಾಗುತ್ತದೆ. ಮತ್ತೊಂದೆಡೆ, ದರ್ಶನೋತ್ಸವದ ಸಂದರ್ಭದಲ್ಲಿ ದಿನವಿಡೀ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ದರ್ಶನಕ್ಕಾಗಿ ಮೂರು, ನಾಲ್ಕು ಅಥವಾ ಐದು ಗಂಟೆಗಳ ಕಾಲ ಸರತಿ ಸಾಲಿನಲ್ಲಿ ಕಾಯುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಪೂಜಾ ವಿಧಾನಗಳಿಗೆ ಅಗತ್ಯ ಗೌರವ ನೀಡುವುದರ ಜತೆಗೆ, ಭಕ್ತರಿಗೆ ಹೆಚ್ಚಿನ ಸಮಯ ದರ್ಶನದ ಅವಕಾಶ ಕಲ್ಪಿಸುವ ಕುರಿತು ಅರ್ಚಕರೊಂದಿಗೆ ಚರ್ಚಿಸಲಾಗಿದೆ. ಜನದಟ್ಟಣೆ ನಿಯಂತ್ರಿಸುವುದು ಮತ್ತು ಭಕ್ತರ ಕಾಯುವ ಸಮಯವನ್ನು ಕಡಿಮೆ ಮಾಡುವುದು ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿದೆ. ಈ ನಿಟ್ಟಿನಲ್ಲಿ ಅರ್ಚಕರು ಸಹಕಾರ ನೀಡಲು ಒಪ್ಪಿಕೊಂಡಿದ್ದು, ದರ್ಶನ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಲಿದ್ದು, ದರ್ಶನ ವ್ಯವಸ್ಥೆ, ಬ್ಯಾರಿಕೇಡ್ಗಳ ಅಳವಡಿಕೆ ಹಾಗೂ ಇತರ ಮೂಲಸೌಕರ್ಯ ಕಾಮಗಾರಿಗಳ ಕುರಿತು ಪರಿಶೀಲನೆ ನಡೆಸಲಾಗುತ್ತದೆ. ಅಗತ್ಯ ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ ಸಿದ್ಧತಾ ಕಾರ್ಯಗಳಿಗೆ ಮತ್ತಷ್ಟು ವೇಗ ನೀಡಲಾಗುವುದು ಎಂದರು. ಉಪವಿಭಾಗಾಧಿಕಾರಿ ಜಗದೀಶ್ ಗಂಗಣನವರ್ ಮಾತನಾಡಿ, ಈ ಬಾರಿಯ ಹಾಸನಾಂಬೆ ದೇವಿ ದರ್ಶನೋತ್ಸವವು ಅಕ್ಟೋಬರ್ ೨೯ರಿಂದ ನವೆಂಬರ್ ೧೧, ೨೦೨೬ರವರೆಗೆ ನಡೆಯಲಿದೆ. ಅಕ್ಟೋಬರ್ ೨೯ರಂದು ದೇವಾಲಯದ ಬಾಗಿಲು ತೆರೆಯಲಾಗುತ್ತಿದ್ದು, ನವೆಂಬರ್ ೧೧ ರಂದು ಮುಚ್ಚಲಾಗುತ್ತದೆ. ಅಕ್ಟೋಬರ್ ೩೦ ರಿಂದ ನವೆಂಬರ್ ೧೦ ರವರೆಗೆ ಭಕ್ತರಿಗೆ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿದೆ. ಮೊದಲ ದಿನವಾದ ಅಕ್ಟೋಬರ್ ೨೯ ಹಾಗೂ ಕೊನೆಯ ದಿನವಾದ ನವೆಂಬರ್ ೧೧ ರಂದು ಸಾರ್ವಜನಿಕರಿಗೆ ದರ್ಶನ ಇರುವುದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನ ಹಾಗೂ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ದೇವಾಲಯದ ಆವರಣದ ದುರಸ್ತಿ, ಸುಣ್ಣ-ಬಣ್ಣ ಬಳಿಯುವುದು ಸೇರಿದಂತೆ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ದೇವಾಲಯದ ಬಾಗಿಲು ತೆರೆಯುವ ಮುನ್ನ ಅರ್ಚಕರೊಂದಿಗೆ ಸೌಹಾರ್ದಯುತ ಸಭೆ ನಡೆಸಿ, ಕಳೆದ ವರ್ಷಗಳಂತೆ ಈ ಬಾರಿಯೂ ಪೂಜಾ ಕೈಂಕರ್ಯ ನಿರ್ವಹಣೆ ಮತ್ತು ಭಕ್ತರ ದರ್ಶನಕ್ಕೆ ಸಹಕರಿಸುವಂತೆ ಮನವಿ ಮಾಡಲಾಗಿದೆ. ಪ್ರಧಾನ ಅರ್ಚಕ ನಾಗರಾಜ್ ಸೇರಿದಂತೆ ಇತರ ಅರ್ಚಕರು ಜಿಲ್ಲಾಡಳಿತಕ್ಕೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ದರ್ಶನೋತ್ಸವದ ಕರ್ತವ್ಯ ನಿರ್ವಹಣೆಗಾಗಿ ಕಂದಾಯ ಇಲಾಖೆಯ ಸುಮಾರು ೧,೨೦೦ ಸಿಬ್ಬಂದಿಯನ್ನು ನಿಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಗ್ರಾಮ ಸಹಾಯಕರು, ಗ್ರಾಮ ಆಡಳಿತಾಧಿಕಾರಿಗಳು, ಕಂದಾಯ ನಿರೀಕ್ಷಕರು, ಉಪತಹಸೀಲ್ದಾರರು ಹಾಗೂ ಸಹಾಯಕ ಆಯುಕ್ತರ ಕಚೇರಿಯ ಅಧಿಕಾರಿಗಳು ಸೇರಿದಂತೆ ವಿವಿಧ ಹಂತದ ಸಿಬ್ಬಂದಿಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಎರಡು ದಿನಗಳ ಮೊದಲ ಹಂತದ ತರಬೇತಿ ನೀಡಲಾಗಿದೆ. ಕರ್ತವ್ಯ ಹಂಚಿಕೆ, ಜವಾಬ್ದಾರಿಗಳು ಹಾಗೂ ಕಾರ್ಯನಿರ್ವಹಣೆಯ ಕುರಿತು ಸಿಬ್ಬಂದಿಗೆ ಮಾಹಿತಿ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಎರಡನೇ ಹಾಗೂ ಅಂತಿಮ ಹಂತದ ತರಬೇತಿಯನ್ನೂ ಆಯೋಜಿಸಲಾಗುತ್ತದೆ. ಇದರಿಂದ ದರ್ಶನೋತ್ಸವದ ಸಂದರ್ಭದಲ್ಲಿ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ, ಭಕ್ತರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಅನುಕೂಲವಾಗಲಿದೆ ಎಂದು ಉಪವಿಭಾಗಾಧಿಕಾರಿ ತಿಳಿಸಿದರು.ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶ್ರೀನಿಧಿ ಹಾಗೂ ಸಂಬಂಧಪಟ್ಟ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ದೇವಾಲಯದ ಆಡಳಿತಕ್ಕೆ ಸಂಬಂಧಿಸಿದ ಅಧಿಕಾರಿಗಳು ಇದ್ದರು.
ಹಾಸನ ನಗರದ ಪೆಂಡಾಲ್ ಗಣಪತಿಯನ್ನು ದೇವಿಗೆರೆಯಲ್ಲಿ ವಿಸರ್ಜನೆ ಮಾಡಲು ಅವಕಾಶ ಮಾಡಿಕೊಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಎಸ್ಪಿಗೆ ನೋಟಿಸ್ ನೀಡಿದ್ದ ಡಿಸಿ ನಡೆ ಕಳೆದ ಕೆಲ ದಿನಗಳಿಂದ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದೇ ವಿಚಾರಕ್ಕೆ ಸ್ಥಳೀಯ ಶಾಸಕರೊಂದಿಗೂ ಮುಸುಕಿನ ಗುದ್ದಾಟ ನಡೆಯುತ್ತಿತ್ತು. ಕಡೆಗೆ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಕೂಡ ಈ ವಿಚಾರವಾಗಿ ಡಿಸಿ ಮೇಲೆ ಅಸಮಾಧಾನ ಹೊರಹಾಕಿದ್ದರು. ಆದರೆ, ಇದಕ್ಕೂ ಸುಮ್ಮನಿರದ ಡಿಸಿ ಸಾಮಾಜಿಕ ಜಾಲತಾಣದಲ್ಲಿ ಅದಕ್ಕೂ ತಿರುಗೇಟು ನೀಡಿದ್ದರು. ಇಷ್ಟೆಲ್ಲಾ ಆದ ನಂತರ ರಾಜ್ಯ ಸರ್ಕಾರದ ಪ್ರದಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಡಿಸಿ ಹಾಗೂ ಎಸ್ಪಿಯವರನ್ನು ಬೆಂಗಳೂರಿಗೆ ಕರೆಸಿಕೊಂಡು ಬುದ್ಧಿ ಹೇಳಿ ಇಬ್ಬರನ್ನೂ ಒಂದು ಮಾಡಿ ಕಳುಹಿಸಿದ್ದರು.ಇದರ ಫಲವೆನ್ನುವಂತೆ ಶುಕ್ರವಾರ ಹಾಸನಾಂಬಾ ದೇವಸ್ಥಾನದ ಆವರಣಕ್ಕೆ ಭೇಟಿ ನೀಡಿದ್ದ ಡಿಸಿ ಹಾಗೂ ಎಸ್ಪಿ ಇಬ್ಬರೂ ಪರಸ್ಪರ ಕೈ ಕುಲುಕಿ, ನಂತರ ಹೆಗಲ ಮೇಲೆ ಕೈ ಹಾಕಿಕೊಂಡು ಪರಸ್ಪರ ಹತ್ತಿರದಿಂದ ಮಾತನಾಡಿದರು. ಬಳಿಕ ಇಬ್ಬರೂ ದೇವಿಗೆ ಕುಂಕುಮಾರ್ಚನೆ ಸಲ್ಲಿಸಿ, ಮಂಗಳಾರತಿ ಸ್ವೀಕರಿಸಿದರು. ಈ ವೇಳೆ ಮಂಗಳಾರತಿ ತಟ್ಟೆಗೆ ಕಾಣಿಕೆ ಹಾಕಲು ಎಸ್ಪಿ ಅವರು ಡಿಸಿಗೆ ಹಣ ನೀಡಿದ ಪ್ರಸಂಗವೂ ನಡೆಯಿತು.