ಸಾರಾಂಶ
ಎನ್ ನಾಗೇಂದ್ರಸ್ವಾಮಿ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲನಗರಸಭಾಧಿಕಾರಿಗಳು ಜಿಲ್ಲಾಧಿಕಾರಿಗಳ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘಿಸುವ ಮೂಲಕ ಡಿಗ್ರೂಪ್ ನೌಕರರೊಬ್ಬರಿಗೆ ಖಾತೆ, ಕಂದಾಯ ವಿಭಾಗದ ಜವಾಬ್ದಾರಿ ವಹಿಸಿರುವ ಘಟನೆ ಬೆಳಕಿಗೆ ಬಂದಿದೆ.
ನಗರಸಭೆ ಅಧಿಕಾರಿಗಳಿಗೆ ಸ್ವತಃ ಜಿಲ್ಲಾಧಿಕಾರಿಗಳೇ 2023ರ ಆಗಸ್ಟ್ 19ರಲ್ಲಿ ಸ್ಪಷ್ಟವಾಗಿ ಡಿಗ್ರೂಪ್ ನೌಕರರಿಳಿಗೆ ಯಾವುದೆ ಕಂದಾಯ ವಿಭಾಗ ಇತ್ಯಾದಿ ವಿಭಾಗಗಳ ಹೊಣೆ ನೀಡದಂತೆ ಸ್ಪಷ್ಟವಾಗಿ ಆದೇಶ ಹೊರಡಿಸಿದ್ದರೂ ಕೂಡ ನಗರಸಭೆ ಪೌರಾಯುಕ್ತರು 2024ರ ಮಾ.20ರಲ್ಲಿ ಡಿಗ್ರೂಪ್ ನೌಕರಿಯಲ್ಲಿರುವ ಪ್ರಭಾಕರ್ ಎಂಬವರಿಗೆ ಪ್ರಭಾರಿಯಾಗಿ ಸ್ವತಃ ಪೌರಾಯುಕ್ತರೇ ಕಂದಾಯ, ಖಾತೆ ವಿಭಾಗಗಳ ಜವಾಬ್ದಾರಿ ಹೊರಡಿಸಿ ಆದೇಶಿಸಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ನಗರಸಭೆಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದಕ್ಕೆ ಈ ಪ್ರಕರಣ ತಾಜಾ ಉದಾಹರಣೆಯಾಗಿದೆ. ಪ್ರಭಾಕರ್ ಎಂಬ ಡಿಗ್ರೂಪ್ ನೌಕರನ ಮೇಲೆ ಪ್ರಕರಣವೊಂದರ ಕುರಿತು ಇಲಾಖಾ (124) ವಿಚಾರಣೆ ನಡೆಯುತ್ತಿದ್ದರೂ ಸಹಾ ಈ ಜವಾಬ್ದಾರಿ ನೀಡಿರುವುದು ನಾನಾ ಚರ್ಚೆಗಳಿಗೆ ಆಸ್ಪದ ಮಾಡಿಕೊಟ್ಟಿದೆ.ಜಿಲ್ಲಾಧಿಕಾರಿ ಆದೇಶದಲ್ಲೆನಿದೆ?:ಜಿಲ್ಲಾಧಿಕಾರಿ ಕಳೆದ 1 ವರ್ಷ ಹಿಂದೆ ಹೊರಡಿಸಿರುವ ಸುತ್ತೋಲೆ (ಆದೇಶದಲ್ಲಿ) ಚಾ.ನಗರ ಜಿಲ್ಲೆಯ ಎಲ್ಲಾ ನಗರಸಭೆ, ಪಟ್ಟಣ ಪಂಚಾಯ್ತಿ, ಪುರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವ ಡಿಗ್ರೂಪ್ ನೌಕರರಿಗೆ ಕಂದಾಯ ಶಾಖೆಗಳ ವರ್ಗಾವಣೆ, ನಮೂನೆ 3 ಕುರಿತು ವಿಷಯ ನಿರ್ವಹಣೆ, ಇತರೆ ಕಂದಾಯ ಶಾಖೆಯ ಜವಾಬ್ದಾರಿ ನೀಡಕೂಡದು ಎಂದು ಸ್ಪಷ್ಟವಾಗಿ ಸುತ್ತೋಲೆಯಲ್ಲಿ ವಿವರಿಸಿರುವ ಜಿಲ್ಲಾಧಿಕಾರಿಗಳು ಇದಕ್ಕೆ ಸೂಕ್ತ ಕಾರಣವನ್ನು ವಿವರಿಸಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಸಾರ್ವಜನಿಕರಿಂದ ಸ್ವೀಕೃತಗೊಳ್ಳುವ ಖಾತೆ ವರ್ಗಾವಣೆ, ನಮೂನೆ 3 ವಿತರಣೆ ಸಂಬಂಧಿಸಿದಂತೆ ವಿಲೇವಾರಿ ಮಾಡಲು ಆನ್‌ಲೈನ್ ಸೇವೆ ಸುಗಮವಾಗಿಸುವ ನಿಟ್ಟಿನಲ್ಲಿ (ಸದುದ್ದೇಶಹೊಂದಿ) ಪೌರಾಡಳಿತ ನಿರ್ದೇಶನಾಲಯದಿಂದ ಇ-ಆಸ್ತಿ ತಂತ್ರಾಂಶ ಅಭಿವೃದ್ಧಿಪಡಿಸಲಾಗುತ್ತಿದೆ, ಈ ಕುರಿತು ಜಿಲ್ಲಾಡಳಿತದ ವತಿಯಿಂದ ಜಿಲ್ಲಾಡಳಿತ ಮತ್ತು ಪೌರಾಡಳಿತದ ವತಿಯಿಂದ ತರಬೇತಿ ನೀಡಲಾಗಿರುತ್ತದೆ. ಆದುದರಿಂದ ಯಾವುದೆ ಕಾರಣಕ್ಕೂ ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವ ಡಿಗ್ರೂಪ್ ನೌಕರರಿಗೆ ಜವಾಬ್ದಾರಿ ನೀಡಬಾರದು, ಒಂದು ವೇಳೆ ನೀಡಿದ್ದೆ ಆದಲ್ಲಿ ಸಂಬಂಧಪಟ್ಟ ನಗರಸಭೆ ಆಯುಕ್ತರು, ಮುಖ್ಯಾಧಿಕಾರಿಗಳನ್ನು ಹೊಣೆಗಾರರನ್ನಾಗಿ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಡೀಸಿ ಸುತ್ತೋಲೆಯಲ್ಲಿ ಸ್ಪಷ್ಟವಾಗಿ ವಿವರಿಸಿದ್ದಾರೆ. ಹೀಗಿದ್ದರೂ ಡಿಗ್ರೂಫ್ ನೌಕರ ಪ್ರಭಾಕರ್ ಎಂಬವರಿಗೆ ಹೆಚ್ಚಿನ ಜವಾಬ್ದಾರಿ ನೀಡಿರುವುದು ನಾನಾ ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.ಪೌರಾಯುಕ್ತರ ಆದೇಶದಲ್ಲೆನಿದೆ?
ಕೊಳ್ಳೇಗಾಲ ನಗರಸಭೆ ಪೌರಾಯುಕ್ತರು 2024ರ ಮಾರ್ಚ್‌ನಲ್ಲಿ ಪ್ರಭಾಕರ್, ಡಿಗ್ರೂಪ್ ನೌಕರ ಮತ್ತು ದ್ವಿತೀಯ ದರ್ಜೆಯ ಮತ್ತೋರ್ವ ನೌಕರರಾದ ಸಿಎಂ ಗುಣಶ್ರೀ ಅವರಿಗೆ ಜವಾಬ್ದಾರಿ ವಹಿಸಿ ಆದೇಶಿಸಿದ್ದು ಪ್ರಭಾಕರ್ ಅವರಿಗೆ ಹಾಲಿ ನಿರ್ವಹಿಸುತ್ತಿರುವ ಕೆಲಸಗಳ ಜೊತೆ ವಾರ್ಡ್ 1ರಿಂದ 6ಮತ್ತು 8ರಿಂದ 10ನೇ ವಾರ್ಡ್‌ಗಳಿಗೆ ಸಂಬಂಧಿಸಿದಂತೆ ಆಸ್ತಿ ಹಕ್ಕು ವರ್ಗಾವಣೆ ವಿಷಯ ನಿರ್ವಾಹಕರಾಗಿ ಕೆಲಸ ನಿರ್ವಹಣೆ, ಕೆಎಂಎಫ್ 24ರ ವಹಿಗಳಲ್ಲಿ ಕಂದಾಯಗಳನ್ನು ಕಾಲೋಚಿಸುವುದು, ಪೌರಾಯುಕ್ತರು ಸೂಚಿಸುವ ಇತರೆ ಕೆಲಸ (ಪ್ರಭಾರಿಯಾಗಿ) ನಿರ್ವಹಿಸುವಂತೆ ಆದೇಶಿಸಿದ್ದಾರೆ.ಒರ್ವ ಡಿಗ್ರೂಪ್ ನೌಕರನಿಗೆ ಆಯಕಟ್ಟಿನ ಜಾಗ (ಸ್ಥಳ) ನೀಡಿರುವುದು ಚರ್ಚೆಗಳಿಗೆ ಗ್ರಾಸವಾಗಿದ್ದು ಪೌರಾಯುಕ್ತರ ಈ ಆದೇಶ ಡೀಸಿ ಆದೇಶವನ್ನೆ ಗಾಳಿಗೆ ತೂರುವಂತಿದ್ದು ಈ ಆದೇಶ ಸ್ಪಷ್ಟವಾಗಿ ಗಮನಿಸಿದರೆ ಜಿಲ್ಲಾಧಿಕಾರಿ ಆದೇಶಕ್ಕೆ ಕೊಳ್ಳೇಗಾಲ ನಗರಸಭೆ ಕವಡೆಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಎಂಬುದಕ್ಕೆ ಉದಾಹರಣೆ ಆಗಿದೆ. ಈ ಸಂಬಂಧ ಜಿಲ್ಲಾಡಳಿತ, ಪೌರಾಡಳಿತ ನಿರ್ದೇಶನಾಲಯ ಮುಂದೆ ಯಾವ ರೀತಿ ಕ್ರಮ ಕೈಗೊಳ್ಳಲಿದೆ ಎಂಬುದನ್ನ ಕಾದು ನೋಡಬೇಕಿದೆ.
ಹಾಲಿ ನೌಕರನ ವಿರುದ್ಧ ಗಂಭೀರ ಆರೋಪಗಳಿವೆ? ಹಾಲಿ ಡಿಗ್ರೂಪ್ ನೌಕರ ಪ್ರಭಾಕರ್ ವಿರುದ್ಧ ಇಲಾಖಾ ವಿಚಾರಣೆ ಇನ್ನು ತನಿಖಾ ಹಂತದಲ್ಲಿದೆ. ಅಲ್ಲದೆ ಈ ನೌಕರನ ಖಾತೆ ಇನ್ನಿತರೆ ವಿಚಾರಗಳಲ್ಲಿ ಸಾರ್ವಜನಿಕರಲ್ಲಿ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂಬ ಸಾಕಷ್ಟು ಆರೋಪಗಳು ಸಾರ್ವಜನಿಕ ವಲಯಗಳಿಂದಲೇ ಕೇಳಿ ಬಂದಿವೆ. ಅಲ್ಲದೆ ಪೊಲೀಸರೊಬ್ಬರಿಂದ ಖಾತೆ ವಿಚಾರವೊಂದಕ್ಕೆ ಭಾರಿ ಮೊತ್ತದ ಹಣ ಪಡೆದು ಹಲವು ತಿಂಗಳಾದರೂ ಖಾತೆ ಮಾಡಿಸಿಕೊಟ್ಟಿಲ್ಲ, ಮಾತ್ರವಲ್ಲ ಹಣವನ್ನು ವಾಪಸ್ ನೀಡದ ಕುರಿತು ನಗರಸಭೆ ಪಡಸಾಲೆಯಿಂದಲೇ ಚರ್ಚೆಯಾಗುತ್ತಿದ್ದು ಪೊಲೀಸರೊಬ್ಬರಿಂದ ಲಂಚ ಪಡೆದ ವಿಚಾರವೂ ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಇನ್ನಾದರೂ ಹಿರಿಯ ಅಧಿಕಾರಿಗಳು ಈ ಸಂಬಂಧ ಗಮನಹರಿಸುವಂತೆ ಪ್ರಜ್ಞಾವಂತ ನಾಗರೀಕರು ಮನವಿ ಮಾಡಿದ್ದಾರೆ.ನನ್ನನ್ನೇನೂ ಮಾಡಲಾಗಲ್ಲ ಎನ್ನುತ್ತಿದ್ದಾರಂತೆ ಡಿಗ್ರೂಪ್ ನೌಕರ? ಹಾಲಿ ಡಿಗ್ರೂಪ್ ನೌಕರ ಪ್ರಭಾಕರ್ ಅವರು ನಾನು ಲಂಚ ಪಡೆದಿಲ್ಲ, ಯಾರೂ ನನ್ನನ್ನು ಏನೂ ಮಾಡಲಾಗಲ್ಲ, ಪೊಲೀಸ್ ಅಧಿಕಾರಿಗಳು ನಾನು ಲಂಚ ಪಡೆದಿದ್ದೇನೆ ಎಂದು ಸಾಬೀತು ಪಡಿಸಲು ಆಗಲ್ಲ, ಅಂತಹ ನಿಟ್ಟಿನಲ್ಲಿ ನಾನು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿರುವೆ ಎಂದು ಕೆಲವು ನಗರಸಭೆ ಸದಸ್ಯರ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ ಎಂದು ಬಲ್ಲಮೂಲಗಳು ಕನ್ನಡಪ್ರಭಕ್ಕೆ ಖಚಿತ ಪಡಿಸಿವೆ.ಡಿಗ್ರೂಪ್ ನೌಕರನ ಜವಾಬ್ದಾರಿಗಳಿವು?ಒಬ್ಬ ನಗರಸಭೆ ಡಿಗ್ರೂಪ್ ನೌಕರ ಪೌರಾಯುಕ್ತರು ಸೂಚಿಸುವ ಕೆಲಸ ನಿರ್ವಹಿಸಬೇಕು, ನಗರಸಭೆ ಸ್ವಚ್ಛತೆಗೊಳಿಸುವ ನಿಟ್ಟಿನಲ್ಲಿ, ನಗರಸಭೆ ಟೇಬಲ್, ಕಡತಗಳನ್ನು ಶುಚಿ ಮತ್ತು ಸುಭದ್ರಗೊಳಿಸುವಲ್ಲಿ ಆಯುಕ್ತರು ನಿರ್ವಹಿಸಿದ ಟೇಬಲ್‌ನಲ್ಲಿನ ಕಡತಗಳನ್ನು ಪುನಃ ಸೂಕ್ತ ಸ್ಥಳದಲ್ಲಿಡಬೇಕು, ಒಟ್ಟಾರೆ ಆಫೀಸ್ ಸ್ವಚ್ಛತೆ, ಜವಾಬ್ದಾರಿ ಡಿಗ್ರೂಪ್ ನೌಕರರದ್ದಾಗಿದೆ. ಆದರೆ ಅಂತಹ ಡಿಗ್ರೂಪ್ ನೌಕರರಿಗೆ ಖಾತೆ ಮಾಡಲು ಅವಕಾಶ, ಕಂದಾಯ ವಸೂಲಿಗೆ ಅವಕಾಶ ಕಲ್ಪಿಸಿಕೊಟ್ಟಿರುವುದನ್ನು ಗಮನಿಸಿದರೆ ನಗರಸಭೆ ಆಯುಕ್ತರ ಲೋಪ ಎದ್ದುಕಾಣುವಂತಿದೆ ಎನ್ನಲಡ್ಡಿಯಿಲ್ಲ.
ಕೊಳ್ಳೇಗಾಲ ನಗರಸಭೆಯಲ್ಲಿ ಶೇ.50ಕ್ಕಿಂತ ಹೆಚ್ಚು ಸಿಬ್ಬಂದಿ ಕೊರತೆ ಇದೆ. ಇರುವ ನೌಕರರನ್ನೆ ವಿವಿಧೆಡೆ ಬಳಸಿಕೊಳ್ಳುವ ಮೂಲಕ ಸಾರ್ವಜನಿಕರ ಕೆಲಸಕ್ಕೆ ತೊಂದರೆಯಾಗದಂತೆ ಕೆಲಸ ನಿರ್ವಹಿಸಲಾಗುತ್ತಿದ್ದು ಸಿಬ್ಬಂದಿ ಕೊರತೆಯಿಂದ ಡಿಗ್ರೂಪ್ ನೌಕರ ಪ್ರಭಾಕರ್ ಅವರಿಗೆ ಪ್ರಭಾರಿ ಹೆಚ್ಚುವರಿ ಹೊಣೆ ನೀಡಲಾಗಿದೆ.ರಮೇಶ್, ನಗರಸಭೆ ಆಯುಕ್ತರು ಕೊಳ್ಳೇಗಾಲ