ಸ್ವಾತಂತ್ರ್ಯೋತ್ಸವಕ್ಕೆ ಸಿದ್ಧತೆ ಕೈಗೊಳ್ಳಲು ಡೀಸಿ ಶುಭ ಕಲ್ಯಾಣ್ ಸೂಚನೆ

| Published : Jul 15 2025, 11:45 PM IST

ಸ್ವಾತಂತ್ರ್ಯೋತ್ಸವಕ್ಕೆ ಸಿದ್ಧತೆ ಕೈಗೊಳ್ಳಲು ಡೀಸಿ ಶುಭ ಕಲ್ಯಾಣ್ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಸಭೆಯಲ್ಲಿ ಸ್ವಾಗತ ಸಮಿತಿ, ಪೆರೇಡ್ ಸಮಿತಿ, ಸನ್ಮಾನ ಸಮಿತಿ, ಸಿಹಿ ವಿತರಣೆ ಸಮಿತಿ, ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿಗಳನ್ನು ರಚಿಸಿ ವಿವಿಧ ಕೆಲಸ- ಕಾರ್ಯಗಳನ್ನು ಹಂಚಿಕೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ತುಮಕೂರು

ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಆಗಸ್ಟ್ 15 ರಂದು ಸ್ವಾತಂತ್ರ್ಯದಿನದ ಸಂಭ್ರಮಾಚರಣೆಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ದಿನೋತ್ಸವದಂದು ನಾವೆಲ್ಲರೂ ಸಂತಸದಿಂದ ಭಾಗವಹಿಸಿ, ಹಬ್ಬದ ರೀತಿಯಲ್ಲಿ ಆಚರಿಸಬೇಕು. ಅದಕ್ಕೆ ಪೂರಕ ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದರು.

ವಿವಿಧ ಶಾಲಾ- ಕಾಲೇಜು, ವಸತಿ ನಿಲಯಗಳ ಮಕ್ಕಳಿಂದ ದೇಶಭಕ್ತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಸಾಂಸ್ಕೃತಿಕ ಕಾರ್ಯಕ್ರಮವು ಸ್ವಚ್ಛತೆ, ಪರಿಸರ ಸಂರಕ್ಷಣೆ, ರಸ್ತೆ ಸುರಕ್ಷತೆ, ಜೀವಜಲ ಸಂರಕ್ಷಣೆಯಂತಹ ವಿಷಯಾಧಾರಿತವಾಗಿರಬೇಕು. ಅಗ್ನಿಶಾಮಕ ಇಲಾಖೆಯ ವತಿಯಿಂದ ಅನಿಲ ಸೋರಿಕೆ, ಅಗ್ನಿ ದುರಂತ ಕುರಿತು ಅಣಕು ಪ್ರದರ್ಶನ ಏರ್ಪಡಿಸಬೇಕೆಂದು ಸೂಚಿಸಿದರು.

ಬೆಳಗ್ಗೆ 9 ಗಂಟೆಗೆ ಸಚಿವರಿಂದ ಧ್ವಜಾರೋಹಣ:

ಜಿಲ್ಲಾಡಳಿತ ವಿವಿಧ ಇಲಾಖೆ ಹಾಗೂ ಸಂಘ- ಸಂಸ್ಥೆಗಳ ಸಹಯೋಗದೊಂದಿಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಆಗಸ್ಟ್ 15 ರಂದು ಬೆಳಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ, ಗೌರವ ರಕ್ಷೆ ಸ್ವೀಕಾರ, ಸ್ವಾತಂತ್ರ್ಯೋತ್ಸವದ ಸಂದೇಶ ನೀಡುವ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮ ನಡೆಯಲಿರುವ ಜಿಲ್ಲಾ ಕ್ರೀಡಾಂಗಣದ ಸುತ್ತ- ಮುತ್ತ ಸ್ವಚ್ಛತೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ನಗರದ ಚರ್ಚ್ ಸರ್ಕಲ್, ಲಕ್ಕಪ್ಪ ಸರ್ಕಲ್, ಕೋಟೆ ಶ್ರೀ ಆಂಜನೇಯ ಸ್ವಾಮಿ ಸರ್ಕಲ್, ಟೌನ್ ಹಾಲ್ ಸರ್ಕಲ್ ಸೇರಿದಂತೆ ಪ್ರಮುಖ ವೃತ್ತಗಳನ್ನು ತಳಿರು-ತೋರಣಗಳೊಂದಿಗೆ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಬೇಕು. ಲೋಕೋಪಯೋಗಿ ಇಲಾಖೆ ವತಿಯಿಂದ ವೇದಿಕೆ ನಿರ್ಮಾಣ, ಧ್ವಜಸ್ಥಂಭ ನಿರ್ಮಾಣ ವ್ಯವಸ್ಥೆ, ಬ್ಯಾರಿಕೇಡ್ ವ್ಯವಸ್ಥೆ ಮಾಡಬೇಕು. ವೇದಿಕೆ ಸುತ್ತಮುತ್ತ ಹೂಕುಂಡಗಳಿಂದ ಅಲಂಕರಿಸಬೇಕು. ವಿದ್ಯುತ್ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಸ್ವಾಗತ ಸಮಿತಿ, ಪೆರೇಡ್ ಸಮಿತಿ, ಸನ್ಮಾನ ಸಮಿತಿ, ಸಿಹಿ ವಿತರಣೆ ಸಮಿತಿ, ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿಗಳನ್ನು ರಚಿಸಿ ವಿವಿಧ ಕೆಲಸ- ಕಾರ್ಯಗಳನ್ನು ಹಂಚಿಕೆ ಮಾಡಲಾಯಿತು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕಿ ಸೌಮ್ಯ ಜಿ., ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಹಿಮಂತರಾಜು ಜಿ., ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಶಾರದಮ್ಮ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಈಶ್ವರಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.