ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯ, ರಸ್ತೆ, ವಾಹನ ನಿಲುಗಡೆ ಹಾಗೂ ಸೂಚನಾ ಫಲಕ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವುದರ ಜೊತೆಗೆ ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಹೇಳಿದರು.
ಮಡಿಕೇರಿ: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯ, ರಸ್ತೆ, ವಾಹನ ನಿಲುಗಡೆ ಹಾಗೂ ಸೂಚನಾ ಫಲಕ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವುದರ ಜೊತೆಗೆ ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಟೂರ್ ಅಂಡ್ ಟ್ರಾವೆಲ್ ಅಸೋಸಿಯೇಷನ್‌ನ ವಂಸತ ಅವರು ಮಾತನಾಡಿ, ದಸರಾ ಆರಂಭವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ಆದ್ದರಿಂದ ಟ್ರೆಕ್ಕಿಂಗ್ ಸ್ಥಳಗಳನ್ನು ಪುನರಾರಂಭಿಸಲು ಕ್ರಮ ಕೈಗೊಳ್ಳಬೇಕು. ದುಬಾರೆಯಲ್ಲಿ ಆನೆಗಳ ಸಂಘರ್ಷದಿಂದ ದುರಂತ ಸಂಭವಿಸಿದ್ದು, ಈ ರೀತಿಯ ಪ್ರಕರಣ ಇದೇ ಮೊದಲ ಬಾರಿಗೆ ನಡೆದಿದೆ. ದುಬಾರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿರುವುದರಿಂದ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಪ್ರವಾಸಿಗರಿಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷ ಮೋಂತಿ ಗಣೇಶ್ ಮಾತನಾಡಿ, ಹೋಂಸ್ಟೇಗಳಲ್ಲಿ ಗ್ಯಾಸ್ ಗೀಸರ್ ಬಳಸುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ. ಆದರೆ ಕೊಡಗಿನ ಹವಾಮಾನಕ್ಕೆ ಅನುಗುಣವಾಗಿ ಬಿಸಿನೀರಿನ ಅಗತ್ಯವಿರುವುದರಿಂದ, ಸುರಕ್ಷತಾ ಕ್ರಮಗಳನ್ನು ಕೈಗೊಂಡು ಗ್ಯಾಸ್ ಗೀಸರ್ ಬಳಕೆಗೆ ಅನುಮತಿ ನೀಡುವ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.ಕೊಡಗು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ಅವರು ಮಾತನಾಡಿ, ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಫುಡ್ ಫೆಸ್ಟ್ ಹಾಗೂ ಕೊಡಗು ಉತ್ಸವದಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಕ್ರಮ ಕೈಗೊಳ್ಳಬೇಕು. ದಸರಾ ಸಂದರ್ಭದಲ್ಲಿಯೇ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ದೊರೆಯಲಿದೆ ಎಂದು ಹೇಳಿದರು.ಟೂರ್ ಅಂಡ್ ಟ್ರಾವೆಲ್ ಅಸೋಸಿಯೇಷನ್‌ನ ವಂಸತ ಅವರು ಮಾತನಾಡಿ, ನಗರದ ಪ್ರಮುಖ ಪ್ರವಾಸಿ ತಾಣ ರಾಜಾಸೀಟು ಮುಂಭಾಗದಲ್ಲಿ ಹಲವು ಅಂಗಡಿಗಳು ಆರಂಭವಾಗಿದ್ದು, ಅವುಗಳನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು. ಅಲ್ಲದೆ ಪುಟಾಣಿ ರೈಲು ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.ಹೋಂಸ್ಟೇ ಅಸೋಸಿಯೇಷನ್‌ನ ಪ್ರಮುಖರಾದ ನವೀನ್ ಅಂಬೆಕಲ್ ಅವರು ಮಾತನಾಡಿ, ರಾಜಾಸೀಟು ಮುಂಭಾಗದಲ್ಲಿ ಅಂಗಡಿಗಳು ಹೆಚ್ಚಾಗಿರುವುದರಿಂದ ಪ್ರವಾಸಿಗರಿಗೆ ನಾಮಫಲಕಗಳು ಕಾಣದೆ ಗೊಂದಲ ಉಂಟಾಗುತ್ತಿದೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಹೋಟೆಲ್ ಮತ್ತು ರೆಸಾರ್ಟ್ ಸಂಘದ ಸಲಹೆಗಾರರಾದ ಜಿ.ಚಿದ್ವಿಲಾಸ್ ಅವರು ಮಾತನಾಡಿ, ರಾಜಾಸೀಟು ಮುಂಭಾಗದಲ್ಲಿರುವ ಅಂಗಡಿಗಳನ್ನು ಕೂರ್ಗ್ ವಿಲೇಜ್‌ಗೆ ಸ್ಥಳಾಂತರಿಸಲು ಕ್ರಮ ಕೈಗೊಂಡರೆ, ರಾಜಾಸೀಟ್‌ಗೆ ಆಗಮಿಸುವ ಪ್ರವಾಸಿಗರು ನೆಹರು ಮಂಟಪಕ್ಕೆ ತೆರಳಲು ಅನುಕೂಲವಾಗಲಿದೆ ಎಂದು ತಿಳಿಸಿದರು.ಓಂಕಾರೇಶ್ವರ ದೇವಾಲಯದ ಸ್ವಚ್ಛತೆ, ಅಬ್ಬಿಫಾಲ್ಸ್ ಸೇತುವೆ ದುರಸ್ತಿ, ಅಬ್ಬಿಫಾಲ್ಸ್ ಬಳಿ ಶೌಚಾಲಯ ವ್ಯವಸ್ಥೆ, ಇರ್ಪು ಜಲಪಾತ ಅಭಿವೃದ್ಧಿ ಹಾಗೂ ಸೂಕ್ತ ಪಾರ್ಕಿಂಗ್ ವ್ಯವಸ್ಥೆ, ಮಡಿಕೇರಿ ಕೋಟೆಯೊಳಗೆ ಪ್ರವಾಸಿಗರ ಆಕರ್ಷಣೆಗಾಗಿ ಲೇಸರ್ ಲೈಟ್ ಶೋ ಆಯೋಜನೆ ಹಾಗೂ ಕುಶಾಲನಗರದ ತಾವರೆಕೆರೆ ಅಭಿವೃದ್ಧಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಅಸೋಸಿಯೇಷನ್ ಪ್ರಮುಖರು ಸಲಹೆಗಳನ್ನು ನೀಡಿದರು.ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಮಾತನಾಡಿ, ಜಿಲ್ಲೆಯ ನೈಸರ್ಗಿಕ, ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವುದು, ಅಗತ್ಯ ಮೂಲಸೌಕರ್ಯ ಕಲ್ಪಿಸುವುದು ಹಾಗೂ ಪ್ರವಾಸೋದ್ಯಮ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ಉತ್ತೇಜಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯೊಂದಿಗೆ ವಿವಿಧ ಸಂಘ-ಸಂಸ್ಥೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.ರೋಟರಿ ಸಂಸ್ಥೆಯ ಮನೋಹರ್ ಕಾಮತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರಾದ ಎಚ್.ಶಶಿಧರ್, ಜಿಲ್ಲಾ ಸಮಾಲೋಚಕ ಜತೀನ್ ಬೋಪಣ್ಣ ಸಹಿತ ಪ್ರಮುಖರು ಹಾಜರಿದ್ದರು.