ಆಂಧ್ರ ಗಡಿಭಾಗದ ಚೆಕ್‌ಪೋಸ್ಟ್‌ಗಳಿಗೆ ಡಿಸಿ, ಎಸ್‌ಪಿ ಭೇಟಿ

| Published : Mar 28 2024, 12:49 AM IST

ಆಂಧ್ರ ಗಡಿಭಾಗದ ಚೆಕ್‌ಪೋಸ್ಟ್‌ಗಳಿಗೆ ಡಿಸಿ, ಎಸ್‌ಪಿ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಆಂಧ್ರ ಗಡಿ ಭಾಗವಾದ ಪಾವಗಡ ತಾಲೂಕಿನಲ್ಲಿ ಸ್ಥಾಪಿಸಿರುವ ಚೆಕ್‌ಪೋಸ್ಟ್‌ಗಳಿಗೆ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ ಅಶೋಕ್ ಅವರು ಇಂದು ಜಂಟಿಯಾಗಿ ಭೇಟಿ ನೀಡಿ ಪರಿಶೀಲಿಸಿದರು.

ನಾಗಲಾಪುರ, ವೆಂಕಟಮ್ಮನಹಳ್ಳಿ, ಕಂಬದೂರು, ಎಗುವಪಲ್ಲಿ ಚೆಕ್‌ಪೋಸ್ಟ್‌ ಕನ್ನಡಪ್ರಭ ವಾರ್ತೆ, ತುಮಕೂರು

ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಆಂಧ್ರ ಗಡಿ ಭಾಗವಾದ ಪಾವಗಡ ತಾಲೂಕಿನಲ್ಲಿ ಸ್ಥಾಪಿಸಿರುವ ಚೆಕ್‌ಪೋಸ್ಟ್‌ಗಳಿಗೆ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ ಅಶೋಕ್ ಅವರು ಇಂದು ಜಂಟಿಯಾಗಿ ಭೇಟಿ ನೀಡಿ ಪರಿಶೀಲಿಸಿದರು.

ಪಾವಗಡ ವಿಧಾನಸಭಾ ಕ್ಷೇತ್ರವು ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೊಳಪಡಲಿದ್ದು, ಗಡಿ ಭಾಗದಲ್ಲಿದೆ. ಈ ಭಾಗದಲ್ಲಿ ಲಿಕ್ಕರ್ ಮಾಫಿಯಾ ಹೆಚ್ಚಾಗಿ ವರದಿಯಾಗುವ ಸಾಧ್ಯತೆಯಿದೆ ಎಂಬ ಮುನ್ನೆಚ್ಚರಿಕೆಯಿಂದ ಪಾವಗಡ ತಾಲೂಕಿನ ನಾಗಲಾಪುರ ಹಾಗೂ ವೆಂಕಟಮ್ಮನಹಳ್ಳಿ ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿ ಎಸ್‌ಎಸ್‌ಟಿ ತಂಡದ ಕಾರ್ಯವನ್ನು ಪರಿಶೀಲಿಸಿದ ಅವರು, ಎಲ್ಲ ತಂಡಗಳು 24x7 ಕಾರ್ಯ ನಿರ್ವಹಿಸುವುದರೊಂದಿಗೆ ಕೆಎಸ್‌ಆರ್‌ಟಿಸಿ ಬಸ್ ಸೇರಿದಂತೆ ಎಲ್ಲಾ ಖಾಸಗಿ ವಾಹನಗಳನ್ನೂ ತಪಾಸಣೆಗೊಳಪಡಿಸಬೇಕು. ಪ್ರತಿ ವಾಹನದ ಸಂಖ್ಯೆ, ವಾಹನದ ಮಾದರಿ, ವಾಹನವು ಎಲ್ಲಿಂದ ಎಲ್ಲಿಗೆ ಸಾಗುತ್ತಿದೆ ಎಂಬ ಮಾಹಿತಿಯನ್ನು ವಹಿಯಲ್ಲಿ ದಾಖಲಿಸಬೇಕೆಂದು ನಿರ್ದೇಶಿಸಿದರಲ್ಲದೆ ಚೆಕ್‌ಪೋಸ್ಟ್ ಗಳಲ್ಲಿ ನಿರ್ವಹಿಸುತ್ತಿರುವ ವಹಿಗಳನ್ನು ಪರಿಶೀಲಿಸಿದರು.

ಆಂಧ್ರ ಪ್ರದೇಶದ ಗಡಿಯಲ್ಲಿರುವ ಕಂಬದೂರು, ಎಗುವಪಲ್ಲಿ ಚೆಕ್‌ಪೋಸ್ಟ್ ಗಳಿಗೆ ಭೇಟಿ ನೀಡಿ ಸದರಿ ಚೆಕ್ ಪೋಸ್ಟ್ ಗಳ ಪೊಲೀಸ್ ಅಧಿಕಾರಿಗಳೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಮಾತನಾಡಿ ಗಡಿ ಭಾಗದಲ್ಲಿ ವರದಿಯಾ ಗಬಹುದಾದ ಲಿಕ್ಕರ್ ಮಾಫಿಯ ಬಗ್ಗೆ ಚರ್ಚಿಸಿದರು.

ತುಮಕೂರಿಗೆ ಹಿಂದಿರುಗುವಾಗ ಮಾರ್ಗ ಮಧ್ಯೆ ತಿರುಮಣಿಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರದ ಕೊಠಡಿಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಿದರು.

ಬಳಿಕ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರು ಪಾವಗಡ ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆಯಡಿ ನಡೆಸಲಾಗುತ್ತಿರುವ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಆಹಾರ ತಯಾರಿಸುವ ಅಡುಗೆ ಕೋಣೆ, ಮಲಗುವ ಕೋಣೆ ಪರಿಶೀಲಿಸಿ ಮಕ್ಕಳು ಮಲಗುವ ಹಾಸಿಗೆ ಸ್ವಚ್ಛತೆಯಿಂದ ಕೂಡಿಲ್ಲ. ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಕೂಡಲೇ ಉತ್ತಮ ಹಾಸಿಗೆ-ಹೊದಿಕೆ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದರಲ್ಲದೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಅವರಿಗೆ ಶೋಕಾಸ್ ನೋಟೀಸ್ ನೀಡಲು ಕ್ರಮವಹಿಸಲಾಗುವುದೆಂದು ತಿಳಿಸಿದರು.

ಪಾವಗಡದಲ್ಲಿ ಮರಳು ದಂಧೆ, ಮಟಕಾ ದಂಧೆ ನಡೆಯುತ್ತಿರುವ ಬಗ್ಗೆ ದೂರುಗಳಿದ್ದರೂ ಜಿಲ್ಲಾಡಳಿತ ಕ್ರಮ ಕೈಗೊಳ್ಳದಿರಲು ಕಾರಣವೇನೆಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ ಅಕ್ರಮ ಮರಳು ದಂಧೆ ಹಾಗೂ ಮಟಕಾ ದಂಧೆ ವರದಿಯಾದರೆ ಕೂಡಲೇ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದೆಂದರು.ಪಾವಗಡ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಖಾಲಿ ಇರುವ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರಲ್ಲದೆ ಸಿಎಸ್‌ಆರ್ ನಿಧಿ ಬಳಸಿ ತಾತ್ಕಾಲಿಕವಾಗಿ ತುಂಬುವ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದರು.

ಮುನ್ನೆಚ್ಚರಿಕಾ ಕ್ರಮವಾಗಿ ಆಂಧ್ರಪ್ರದೇಶದ ಸತ್ಯಸಾಯಿ ಹಾಗೂ ಅನಂತಪುರ ಜಿಲ್ಲೆಯ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಅಬಕಾರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಗಡಿ ಭಾಗದಲ್ಲಿ ಕೈಗೊಳ್ಳಬೇಕಾದ ಬಿಗಿ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಮಾತನಾಡಿ, ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಕ್ರಮ ತಡೆಗೆ ಆಂಧ್ರ ಗಡಿಭಾಗದ ಶಿರಾ, ಮಧುಗಿರಿ ಹಾಗೂ ಪಾವಗಡ ವಿಧಾನ ಸಭಾ ಕ್ಷೇತ್ರಗಳಲ್ಲಿ ಒಟ್ಟು 12 ಚೆಕ್ ಪೋಸ್ಟ್‌ ನಿರ್ಮಿಸಲಾಗಿದೆ. ಪಾವಗಡದಲ್ಲಿರುವ ಮತಗಟ್ಟೆಗಳಲ್ಲಿ ವಲ್ನರಬಲ್ ಮತಗಟ್ಟೆಯೆಂದು ಯಾವುದನ್ನೂ ಗುರುತಿಸಿಲ್ಲ. ಈ ಚೆಕ್‌ಪೋಸ್ಟ್‌ಗಳು ಗಡಿ ಪ್ರದೇಶದಲ್ಲಿರುವುದರಿಂದ ಪರಿಶೀಲಿಸಲು ಇಂದು ಭೇಟಿ ನೀಡಲಾಗಿದೆ ಎಂದು ತಿಳಿಸಿದರು. --------------------------ಲೋಕಸಭಾ ಚುನಾವಣೆ ಹಿನ್ನೆಲೆ ಪಾವಗಡ ತಾಲೂಕಿನ ವಿವಿಧ ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಲಾಯಿತು. ಪ್ರತಿಯೊಂದು ವಾಹನವನ್ನೂ ಕಡ್ಡಾಯವಾಗಿ ತಪಾಸಣೆ ಮಾಡಲು ಎಸ್‌ಎಸ್‌ಟಿ ತಂಡ ಹಾಗೂ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ನಾಮಪತ್ರ ಸಲ್ಲಿಕೆ ಪ್ರಾರಂಭವಾಗಲಿದ್ದು, ಚುನಾವಣಾ ಸಿಬ್ಬಂದಿ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಲಿದೆ. ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟವಾದ ನಂತರ ಮತದಾರನಿಗೆ ಹಣ /ಮತ್ತಿತರ ವಸ್ತುಗಳ ಆಮಿಷ ಒಡ್ದುವ ಸಾಧ್ಯತೆ ಹೆಚ್ಚಿರುವುದರಿಂದ ಚೆಕ್‌ಪೋಸ್ಟ್‌ಗಳಿಂ ಹೊರ ಹೋಗುವ ಹಾಗೂ ಒಳ ಬರುವ ವಾಹನಗಳ ಮೇಲೆ ಹದ್ದಿನ ಕಣ್ಣಿಡಲು ಸಿಬ್ಬಂದಿಗೆ ಸೂಚಿಸಲಾಗಿದೆ.

- ಶುಭಾ ಕಲ್ಯಾಣ್‌ ಜಿಲ್ಲಾಧಿಕಾರಿ