ಜಿಲ್ಲೆಯಲ್ಲಿ ಹೊಸ ಕೈಗಾರಿಕಾ ಉದ್ಯಮಗಳನ್ನು ಸ್ಥಾಪಿಸಲು ಉದ್ಯಮಿಗಳು ಮುಂದೆ ಬರುತ್ತಿದ್ದಾರೆ. ಅವರಿಗೆ ಅಗತ್ಯ ನಿವೇಶನ, ಮೂಲಭೂತ ಸೌಕರ್ಯ, ಸಲಹೆಗಳನ್ನು ನೀಡಿ, ಜಿಲ್ಲೆಯಲ್ಲಿ ಉದ್ಯೋಗಾವಕಾಶಗಳು ಹೆಚ್ಚುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉಡುಪಿ: ಜಿಲ್ಲೆಯಲ್ಲಿ ಹೊಸ ಕೈಗಾರಿಕಾ ಉದ್ಯಮಗಳನ್ನು ಸ್ಥಾಪಿಸಲು ಉದ್ಯಮಿಗಳು ಮುಂದೆ ಬರುತ್ತಿದ್ದಾರೆ. ಅವರಿಗೆ ಅಗತ್ಯ ನಿವೇಶನ, ಮೂಲಭೂತ ಸೌಕರ್ಯ, ಸಲಹೆಗಳನ್ನು ನೀಡಿ, ಜಿಲ್ಲೆಯಲ್ಲಿ ಉದ್ಯೋಗಾವಕಾಶಗಳು ಹೆಚ್ಚುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ ಹಾಗೂ ಕೈಗಾರಿಕಾ ಸ್ಪಂದನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಹೆಬ್ರಿ ತಾಲೂಕಿನ ಶಿವಪುರದಲ್ಲಿ 74.84 ಎಕ್ರೆ, ಕೆರೆಬೆಟ್ಟುವಿನಲ್ಲಿ 38.75 ಎಕ್ರೆ, ಕಾರ್ಕಳದ ನಿಟ್ಟೆಯಲ್ಲಿ 50.42 ಎಕ್ರೆ ಹಾಗೂ ಬ್ರಹ್ಮಾವರ ತಾಲೂಕಿನ ಉಪ್ಪೂರು 101.19 ಎಕ್ರೆ ಪ್ರದೇಶದಲ್ಲಿ ಹೊಸ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ಭೂಸ್ವಾಧೀನವನ್ನು ಶೀಘ್ರ ಪೂರ್ಣಗೊಳಿಸುವಂತೆ ಅವರು ಆದೇಶಿಸಿದರು.ಮರು ಹಂಚಿಕೆ ಮಾಡಿ: ಜಿಲ್ಲೆಯಲ್ಲಿ ಕೈಗಾರಿಕಾ ಘಟಕ ಸ್ಥಾಪನೆಗೆ ಹಂಚಿಕೆಯಾದ 17 ನಿವೇಶನಗಳಲ್ಲಿ ಉದ್ದಿಮೆ ಪ್ರಾರಂಭಿಸಲು ಉದ್ದಿಮೆದಾರರಿಗೆ ಸೂಚಿಸಲಾಗಿತ್ತು. ಅವುಗಳಲ್ಲಿ 5 ಪೂರ್ಣಗೊಂಡಿವೆ, 9 ನಿವೇಶನಗಳಲ್ಲಿ ಕಟ್ಟಡ ನಿರ್ಮಾಣವಾಗುತ್ತಿವೆ. ಉಳಿದ 3 ನಿವೇಶನದಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಇನ್ನೂ 15 ಕ್ಕೂ ಹೆಚ್ಚು ಜನರು ನಿವೇಶನ ಕೋರುತ್ತಿದ್ದಾರೆ. ಈ 3 ನಿವೇಶನಗಳ ಮರು ಹಂಚಿಕೆಗೆ ಕ್ರಮ ಕೈಗೊಳ್ಳಿ ಎಂದರು.
ತರಬೇತಿ ಯಾಕೆ ನೀಡಿಲ್ಲ ?: ಜಿಲ್ಲೆಯಲ್ಗಿ ವಿವಿಧ ಕೈಗಾರಿಕಾ ಘಟಕಗಳಲ್ಲಿ ಫಿಟ್ಟರ್, ಎಲೆಕ್ಟ್ರಿಷಿಯನ್, ವೆಲ್ಡರ್, ಮೆಕ್ಯಾನಿಕಲ್ ಸೇರಿದಂತೆ ಮತ್ತಿತರ 484 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳ ನೇಮಕಾತಿಗೆ ಸ್ಥಳೀಯ ಯುವಕರಿಗೆ ಅವಶ್ಯವಿರುವ ಕೌಶಲ್ಯ ತರಬೇತಿ ನೀಡುವಂತೆ ಸೂಚಿಸಲಾಗಿದ್ದರೂ, ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಯಾವುದೇ ರೀತಿಯ ಕ್ರಮವಹಿಸದೇ ಇರುವ ಬಗ್ಗೆ ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿ, ಕೂಡಲೇ ಈ ಬಗ್ಗೆ ಕ್ರಮ ವಹಿಸುವಂತೆ ಸೂಚಿಸಿದರು. ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ವಿ. ನಾಯಕ್, ಉಪನಿರ್ದೇಶಕ ಜಿ. ವಾಮನ ನಾಯ್ಕ್, ಸಣ್ಣ ಕೈಗಾರಿಕಾ ಸಂಘದ ಜಿಲ್ಲಾ ಅಧ್ಯಕ್ಷ ವಸಂತ ಕಿಣಿ, ಕಾಸಿಯಾ ಪ್ರತಿನಿಧಿ ಹರೀಶ್ ಕುಂದರ್ ಮತ್ತು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.ಉಡುಪಿ ಜಿಲ್ಲೆಯಲ್ಲಿ ಶೇ 91.42 ಕನ್ನಡಿಗರಿಗೆ ಉದ್ಯೋಗ: ಡಾ. ಸರೋಜಿನಿ ಮಹಿಷಿ ವರದಿಯಂತೆ ಕೈಗಾರಿಕಾ ಘಟಕಗಳಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು. ಜಿಲ್ಲೆಯಲ್ಲಿ 38 ಸಣ್ಣ ಕೈಗಾರಿಕೆಗಳು, 47 ಮಧ್ಯಮ ಕೈಗಾರಿಕೆಗಳು ಹಾಗೂ 7 ಬೃಹತ್ ಕೈಗಾರಿಕೆಗಳು ಸೇರಿದಂತೆ ಒಟ್ಟು 92 ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ ಎ ವರ್ಗದಲ್ಲಿ 292, ಬಿ ವರ್ಗದಲ್ಲಿ 1,840, ಸಿ ವರ್ಗದಲ್ಲಿ 5,329 ಹಾಗೂ ಡಿ ವರ್ಗದಲ್ಲಿ 12,111 ಸೇರಿದಂತೆ ಒಟ್ಟು 19,572 ಕನ್ನಡಿಗರನ್ನು ನೇಮಿಸಿ, ಶೇ. 91.42 ರಷ್ಟು ಉದ್ಯೋಗ ಕಲ್ಪಿಸಲಾಗಿದೆ ಎಂದು ಡಿಸಿ ಸ್ವರೂಪ ಸಭೆಯಲ್ಲಿ ಹೇಳಿದರು.