ನದಿ ಪಾತ್ರದ ಪ್ರದೇಶಗಳಲ್ಲಿ ಡಿಸಿ ಪರಿಶೀಲನೆ

| Published : Jul 18 2024, 01:37 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿನೆರೆಯ ಮಹಾರಾಷ್ಟ್ರ ಹಾಗೂ ಜಿಲ್ಲೆಯಾದ್ಯಂತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಘಟಪ್ರಭಾ, ಕೃಷ್ಣಾ ಹಾಗೂ ಹಿರಣ್ಯಕೇಶಿ ನದಿ ಪಾತ್ರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಬೆಳಗಾವಿ ತಾಲೂಕಿನ ಸುತಗಟ್ಟಿ ಬಳಿಯ ಘಟಪ್ರಭಾ ನದಿಯ ಸೇತುವೆ ಬಳಿ ನದಿಯ‌ ಒಳಹರಿವು ಪ್ರಮಾಣ ಹಾಗೂ ಪ್ರಸ್ತುತ ನೀರಿನ ಪ್ರಮಾಣದ ಬಗ್ಗೆ ಅಧಿಕಾರಿಗಳಿಂದ‌ ಮಾಹಿತಿ ಪಡೆದುಕೊಂಡರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ನೆರೆಯ ಮಹಾರಾಷ್ಟ್ರ ಹಾಗೂ ಜಿಲ್ಲೆಯಾದ್ಯಂತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಘಟಪ್ರಭಾ, ಕೃಷ್ಣಾ ಹಾಗೂ ಹಿರಣ್ಯಕೇಶಿ ನದಿ ಪಾತ್ರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಬೆಳಗಾವಿ ತಾಲೂಕಿನ ಸುತಗಟ್ಟಿ ಬಳಿಯ ಘಟಪ್ರಭಾ ನದಿಯ ಸೇತುವೆ ಬಳಿ ನದಿಯ‌ ಒಳಹರಿವು ಪ್ರಮಾಣ ಹಾಗೂ ಪ್ರಸ್ತುತ ನೀರಿನ ಪ್ರಮಾಣದ ಬಗ್ಗೆ ಅಧಿಕಾರಿಗಳಿಂದ‌ ಮಾಹಿತಿ ಪಡೆದುಕೊಂಡರು. ಇದಾದ ನಂತರ ಸಂಕೇಶ್ವರಕ್ಕೆ‌ ತೆರಳಿದ ಅವರು, ಸಂಭವನೀಯ ಪ್ರವಾಹದಿಂದ ಬಾಧಿತಗೊಳ್ಳಬಹುದಾದ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಿಸಿದರು.

ಕಳೆದ ಬಾರಿ ಪ್ರವಾಹ ಬಂದಾಗ‌ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದ ಅವರು, ಸಂಭವನೀಯ ಪ್ರವಾಹ ನಿರ್ವಹಣೆಗೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಹಸೀಲ್ದಾರರು ಹಾಗೂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಕೆಳಹಂತದ ಸೇತುವೆಗಳು ಮುಳುಗಡೆಯಾದಾಗ ಎಚ್ಚರಿಕೆ ಫಲಕಗಳನ್ನು ಅಳವಡಿಸಿ ಜನರು ಸಂಚರಿಸದಂತೆ ಬ್ಯಾರಿಕೇಡ್ ಹಾಕಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಹುಕ್ಕೇರಿ ತಹಸೀಲ್ದಾರ್‌ ಮಂಜುಳಾ ನಾಯಕ ಮಾತನಾಡಿ, 2019ರಲ್ಲಿ ಪ್ರವಾಹದ ವೇಳೆ ಸ್ಥಾಪಿಸಲಾಗಿದ್ದ‌ ಕಾಳಜಿ ಕೇಂದ್ರಗಳಂತೆ ಈ ಬಾರಿಯೂ ಕಾಳಜಿ ಕೇಂದ್ರಗಳ ಪಟ್ಟಿ ಸಿದ್ಧಪಡಿಸಲಾಗಿದ್ದು, ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದರು. ಚಿಕ್ಕೋಡಿ ತಾಲೂಕಿನ ಮಾಂಜರಿ‌ ಸೇತುವೆ ಬಳಿ ಕೃಷ್ಣಾ‌ ನದಿಯ ಒಳಹರಿವು ವೀಕ್ಷಿಸಿದರು. ನಂತರ ಯಡೂರ ಗ್ರಾಮದ ಬಳಿ ಬೋಟ್ ಮೂಲಕ ಕೃಷ್ಣಾ ನದಿಯಲ್ಲಿ ಸಂಚರಿಸಿದ ಜಿಲ್ಲಾಧಿಕಾರಿಗಳು, ತುರ್ತು ಸಂದರ್ಭದಲ್ಲಿ ಜನರು ಮತ್ತು ಜಾನುವಾರುಗಳ ರಕ್ಷಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು.

ನೆರೆಯ ಮಹಾರಾಷ್ಟ್ರದಲ್ಲಿ ವ್ಯಾಪಕ‌ ಮಳೆಯಾಗುತ್ತಿದ್ದು, ಅದೇ ರೀತಿ ಜಿಲ್ಲೆಯಲ್ಲಿಯೂ ಹಲವು ದಿನಗಳಿಂದ ಮಳೆಯಾಗುತ್ತಿರುವುದರಿಂದ ಸದಾ ಎಚ್ಚರಿಕೆ ವಹಿಸಬೇಕು. ನದಿಯ ಒಳ ಹರಿವಿನ ಮೇಲೆ ನಿರಂತರ ನಿಗಾ ವಹಿಸವುದರ ಜತೆಗೆ ತುರ್ತು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಬೋಟ್‌ಗಳು ಸೇರಿದಂತೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಈ ವೇಳೆ ಚಿಕ್ಕೋಡಿ ಉಪ ವಿಭಾಗಾಧಿಕಾರಿ ಸುಭಾಷ ಸಂಪಗಾಂವಿ, ತಹಸೀಲ್ದಾರ್‌ ಚಿದಂಬರ ಕುಲಕರ್ಣಿ ಸೇರಿದಂತೆ ಕಂದಾಯ‌ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

---------------------------------

ಕೋಟ್........

ಸದ್ಯಕ್ಕೆ ಜಿಲ್ಲೆಯಲ್ಲಿ ಪ್ರವಾಹ ಸ್ಥಿತಿ‌ ಉದ್ಭವಿಸಿಲ್ಲ ಆದಾಗ್ಯೂ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈಗಾಗಲೇ 26 ಬೋಟ್ ಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ಅಗತ್ಯಬಿದ್ದರೆ ಹೆಚ್ಚುವರಿ ಬೋಟ್‌ಗಳನ್ನು ಕಾರವಾರದಿಂದ ತರಿಸಲಾಗುವುದು.

- ಮೊಹಮ್ಮದ್‌ ರೋಷನ್‌, ಜಿಲ್ಲಾಧಿಕಾರಿ

------------