ಕನ್ನಡಪ್ರಭ ವಾರ್ತೆ ವಿಜಯಪುರ

ಮಹಾನಗರ ಪಾಲಿಕೆ ವ್ಯಾಪ್ತಿಯ 35ನೇ ವಾರ್ಡ್‌ನ ರಾಜಕುಮಾರ ಲೇಔಟ್ ನಲ್ಲಿ ಬೀದಿ ನಾಯಿ ಕಡಿತಕ್ಕೊಳಗಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗುವನ್ನು ಭೇಟಿ ಮಾಡಿದ ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ಮಗುವಿನ ಆರೋಗ್ಯ ವಿಚಾರಿಸಿ, ಸೂಕ್ತ ಚಿಕಿತ್ಸೆ ನೀಡಲು ವೈದ್ಯರಿಗೆ ಸಲಹೆ ನೀಡಿದರು.

ರಾಜಕುಮಾರ ಲೇಔಟ್ ನಿವಾಸಿಯಾಗಿರುವ 3 ವರ್ಷದ ವಿರಾಜ ಸಂತೋಷ ಬಿರಾದಾರ ಮಂಗಳವಾರ ನಾಯಿ ಕಡಿತಕ್ಕೆ ಒಳಗಾಗಿದ್ದರಿಂದ ಆತನನ್ನು ಪೋಷಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಸುದ್ದಿ ತಿಳಿದ ಜಿಲ್ಲಾಧಿಕಾರಿಗಳು, ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ, ನಾಯಿ ಕಡಿತಕ್ಕೊಳಗಾದ ಮಗುವಿನ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿ, ಮಗು ಔಷಧಿಗೆ ಸ್ಪಂದಿಸುತ್ತಿದ್ದು, ಚೇತರಿಸಿಕೊಂಡು ಮಾತನಾಡುತ್ತಿದ್ದಾನೆ. ಹಾಗಾಗಿ ಪೋಷಕರು ಆತಂಕಕ್ಕೊಳಗಾಗಬೇಕಿಲ್ಲ ಎಂದರು. ಜೊತೆಗೆ ಬಾಲಕನಿಗೆ ರೇಬೀಸ್ ವಿರೋಧಿ ಲಸಿಕೆಗಳನ್ನು ನೀಡಲಾಗುತ್ತದೆ. ಜಿಲ್ಲಾಸ್ಪತ್ರೆಯಿಂದಲೂ ಸೂಕ್ತ ಲಸಿಕೆಯನ್ನು ಪಡೆಯಲಾಗುತ್ತಿದೆ. ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದಿಂದ ಆಸ್ಪತ್ರೆಗೆ ಭೇಟಿ ನೀಡಿ, ಸಮರ್ಪಕ ಸ್ಪಂದಿಸಲಾಗಿದೆ ಎಂದರು.

ಬೀದಿ ನಾಯಿ ಹಿಡಿಯಲು, ಪುನರ್‌ ವ್ಯವಸ್ಥೆ: ರಾಜಕುಮಾರ ಬಡಾವಣೆಯಲ್ಲಿ ಬೀದಿ ನಾಯಿಗಳ ಹಾವಳಿ ಅಧಿಕವಾಗಿದ್ದು, ನಾಯಿಗಳನ್ನು ಹಿಡಿದು ಪುನರ್‌ ವ್ಯವಸ್ಥೆ (ಡಾಗ್ ಶೆಲ್ಟರ್‌) ಪಾಲಿಕೆಯಿಂದ ವ್ಯವಸ್ಥೆ ಮಾಡಲಾಗುವುದು. ಈ ಕುರಿತು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಇದೇ ವೇಳೆ ತಿಳಿಸಿದರು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ರಾಜು ಕುರಿಯವರ, ಪಾಲಿಕೆ ಉಪಆಯುಕ್ತ ಮಹಾವೀರ ಬೋರಣ್ಣವರ ಸೇರಿದಂತೆ ಖಾಸಗಿ ಆಸ್ಪತ್ರೆ ವೈದ್ಯರು, ಸಿಬ್ಬಂದಿ ಹಾಗೂ ಪಾಲಿಕೆ ಸಿಬ್ಬಂದಿ ಉಪಸ್ಥಿತರಿದ್ದರು.